
ಭಾರತದಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬದಲ್ಲಿ ಕಾರ್ತಿಕ ಮಾಸದ ಶುಕ್ಷ ಪಕ್ಷದ ಪ್ರತಿಪಾದ ದಿನದಂದು ಗೋಪೂಜೆ ಅಥವಾ ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಹೌದು ಉತ್ತರ ಭಾರತದಾದ್ಯಂತ ಗೋವರ್ಧನ ಪೂಜೆಯನ್ನು ಮಾಡಿದರೆ ಈ ಶುಭ ದಿನ ದಕ್ಷಿಣ ಭಾರತದಲ್ಲಿ ಗೋ ಮಾತೆಯನ್ನು ಪೂಜಿಸಲಾಗುತ್ತದೆ. ಒಟ್ಟಾರೆ ಗೋಪೂಜೆ ದಿನದಂದು ಶ್ರೀಕೃಷ್ಣ, ಪ್ರಕೃತಿ ಮಾತೆ ಮತ್ತು ಗೋಮಾತೆಯನ್ನು ಪೂಜಿಸುವ ಸಂಪ್ರದಾಯವಿದೆ. ಈ ಬಾರಿ ಗೋ ಪೂಜೆಯನ್ನು ಯಾವಾಗ ಆಚರಿಸಲಾಗುತ್ತದೆ, ಇದರ ಮಹತ್ವ, ಪೂಜೆ ವಿಧಿ-ವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಗೋಪೂಜೆಯ ದಿನಾಂಕ ಮತ್ತು ಶುಭ ಮುಹೂರ್ತ:
ಗೋಪೂಜೆಯ ಪ್ರತಿಪಾದ ತಿಥಿಯು ನವೆಂಬರ್ 1 ರ ಸಂಜೆ 6:16 ಕ್ಕೆ ಪ್ರಾರಂಭವಾಗಿ ನವೆಂಬರ್ 2 ರಂದು ಅಂದರೆ ನಾಳೆ ರಾತ್ರಿ 8:21 ಕ್ಕೆ ಮುಕ್ತಾಯಗೊಳ್ಳಲಿದೆ. ಉದಯ ತಿಥಿಯ ಪ್ರಕಾರ ಈ ಬಾರಿ ಗೋ ಪೂಜೆಯನ್ನು ನವೆಂಬರ್ 2 ರಂದು ಆಚರಿಸಲಾಗುತ್ತದೆ.
ಗೋಪೂಜೆ ಶುಭ ಮುಹೂರ್ತ: ಗೋ ಪೂಜೆಯ ಪ್ರಾತಃಕಾಲ ಮುಹೂರ್ತವು ನವೆಂಬರ್ 2 ರಂದು ಬೆಳಗ್ಗೆ 6:14 ರಿಂದ 8:46 ರವರೆಗೆ ಇರುತ್ತದೆ. ಗೋ ಪೂಜೆಗೆ ಪ್ರಶಸ್ತವಾದ ಎರಡನೇ ಮುಹೂರ್ತವು ಮಧ್ಯಾಹ್ನ 3:23 ರಿಂದ 5:35 ರ ವರೆಗೆ ಇರುತ್ತದೆ. ಮೂರನೇ ಮುಹೂರ್ತವು ಸಂಜೆ 5:35 ರಿಂದ 6:01 ರ ವರೆಗೆ ಇರುತ್ತದೆ.
ಗೋಪೂಜೆಯ ಪೂಜೆ ವಿಧಾನ:
ಗೋಪೂಜೆಯ ದಿನದಂದು ಮುಂಜಾನೆ ಬೇಗ ಎದ್ದು ಶುದ್ಧರಾಗಿ ದೇವರ ಕೋಣೆ ಮತ್ತು ಮನೆಯ ಅಂಗಳವನ್ನು ಸ್ವಚ್ಛಗೊಳಿಸಬೇಕು. ನಂತರ ಮನೆಯ ಅಂಗಳದಲ್ಲಿ ರಂಗೋಲಿಯನ್ನು ಹಾಕಬೇಕು. ನಂತರ ಗೋವುಗಳಿಗೆ ತಿನ್ನಲು ಮನೆಯಲ್ಲಿಯೇ ಸಿಹಿ ಖಾದ್ಯ ಹಾಗೂ ರೊಟ್ಟಿ ಅಥವಾ ದೋಸೆಯನ್ನು ತಯಾರಿಸಬೇಕು. ಬಳಿಕ ದನದ ಕೊಟ್ಟಿಗೆ ಅಥವಾ ಗೋವನ್ನು ಕಟ್ಟುವ ಸ್ಥಳವನ್ನು ಶುದ್ಧಗೊಳಿಸಿ, ಗೋ ಮಾತೆಗೂ ಸ್ನಾನ ಮಾಡಿಸಬೇಕು. ನಂತರ ಗೋ ಮಾತೆಯ ಮೈ ಮೇಲೆ ಅರಶಿನ ಕುಂಕುಮ, ವಿಭೂತಿಯನ್ನು ಹಚ್ಚಿ, ಹೂವಿನ ಹಾರವನ್ನು ಹಾಕಬೇಕು. ಜೊತೆಗೆ ನಿಮಗೆ ಇಷ್ಟವಾಗುವಂತೆ ಗೋಮಾತೆಯನ್ನು ಅಲಂಕರಿಸಬಹುದು. ಇದಾದ ಬಳಿಕ ಶುಭ ಮುಹೂರ್ತದಲ್ಲಿ ಗೋವುಗಳ ಹಣೆಗೆ ಕಾಲಿಗೆ ಅರಶಿನ ಕುಂಕುಮವನ್ನು ಹಚ್ಚಿ, ಆರತಿ ಬೆಳಗಿ ಮೊದಲೇ ತಯಾರಿಸಿಟ್ಟ ಸಿಹಿ ಖಾದ್ಯ ಮತ್ತು ರೊಟ್ಟಿಯನ್ನು ತಿನ್ನಿಸಿ ಗೋ ಮಾತೆಯ ಆಶಿರ್ವಾದವನ್ನು ಪಡೆಯಬೇಕು.
ಗೋವರ್ಧನ ಪೂಜೆಯ ವಿಧಾನ:
ದಕ್ಷಿಣ ಭಾರತದ ಕಡೆ ಬಲಿಪಾಡ್ಯಮಿ ದಿನ ಗೋ ಮಾತೆಯನ್ನು ಪೂಜಿಸಿದರೆ ಉತ್ತರ ಭಾರತದ ಕಡೆ ಗೋವರ್ಧನ ಪೂಜೆಯನ್ನು ಮಾಡಲಾಗುತ್ತದೆ. ಗೋವರ್ಧನ ಪೂಜೆಯನ್ನು ಮಾಡಲು ಮೊದಲು ಈ ದಿನ ಮನೆಯ ಅಂಗಳದಲ್ಲಿ ಗೋವಿನ ಸಗಣಿಯಿಂದ ಗೋವರ್ಧನ ಪರ್ವತ ಚಿತ್ರವನ್ನು ಬಿಡಿಸಬೇಕು. ಇದಾದ ನಂತರ ಅಕ್ಷತೆ, ಪಾಯಸ, ಸಿಹಿ ಖಾದ್ಯ, ನೀರು, ಹಾಲು, ವೀಳ್ಯದೆಲೆ, ಅಡಿಕೆ, ಕುಂಕುಮ, ಹೂವನ್ನಿಟ್ಟು ಹಾಗೂ ದೀಪವನ್ನು ಬೆಳಗಿಸಿ ಗೋವರ್ಧನ ದೇವರನ್ನು ಪೂಜಿಸಬೇಕು. ಈ ದಿನದಂದು ಗೋವರ್ಧನ ಪೂಜೆಯನ್ನು ಮಾಡುವುದರಿಂದ ಶ್ರೀ ಕೃಷ್ಣನ ಅನುಗ್ರಹವು ನಿಮ್ಮ ಮೇಲೆ ಸದಾಕಾಲ ಇರುತ್ತದೆ ಎಂಬ ನಂಬಿಕೆಯೂ ಇದೆ.


Leave a Reply