
87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರಿ ನೌಕರರು ಒಂದು ದಿನದ ಸಂಬಳವನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಮನವಿ ಮಾಡಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಭೆ ನಡೆಸಿ ಮಾತನಾಡಿದರು. ಒಂದು ದಿನದ ಸಂಬಳ ನೀಡುವ ಬಗ್ಗೆ ಜಿಲ್ಲಾಡಳಿತದಿಂದ ಯಾವುದೇ ಒತ್ತಾಯವಿಲ್ಲ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರೀತಿಪೂರ್ವಕವಾಗಿ ನೀಡುವಂತೆ ಮನವಿ ಮಾಡಿದರು.
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯವು ಡಿಸೆಂಬರ್ 20, 21, 22 ರಂದು ಜಿಲ್ಲೆಯಲ್ಲಿ ನಡೆಯಲಿದೆ. ಸರ್ಕಾರಿ ನೌಕರರುಗಳಲ್ಲದೆ ವಿವಿಧ ಸಂಘ ಸಂಸ್ಥೆಗಳು, ಕನ್ನಡ ಪರ ಹೋರಾಟ ಸಂಘಗಳು ಹಾಗೂ ಸಾರ್ವಜನಿಕರು ಮನಪೂರ್ವಕವಾಗಿ ತಮ್ಮ ಇಚ್ಛೆಯಿಂದ ಸಮ್ಮೇಳನಕ್ಕೆ ಸಹಾಯ ಮಾಡಬಹುದು. ಜಿಲ್ಲೆಯ ಕನ್ನಡಿಗರು ಸಮ್ಮೇಳನದಲ್ಲಿ ಒಬ್ಬ ಕನ್ನಡಿಗನಾಗಿ ಸೇವೆ ಮಾಡಬಹುದಾಗಿದ್ದು, ಈ ಬಗ್ಗೆ ಯಾವುದೇ ಒತ್ತಾಯವಿರುವುದಿಲ್ಲ ಎಂದರು.
ಸಭೆಯಲ್ಲಿ ಪ್ರತಿಯೊಬ್ಬರು ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತೋಷದ ವಿಷಯವಾಗಿದೆ. ಸಮ್ಮೇಳನವು ಕೇವಲ ವೈಯಕ್ತಿಕ ಹಬ್ಬವಾಗಿರದೆ, ಕನ್ನಡದ ಐಕ್ಯತೆಯನ್ನು ಸಾರುವ, ಪ್ರತಿಬಿಂಬಿಸುವ ಪ್ರತಿಯೊಬ್ಬ ಕನ್ನಡಿಗರ ಮನೆಯ ಹಬ್ಬವಾಗಿದೆ. ಸಾರ್ವಜನಿಕರು, ಎಲ್ಲಾ ಸರ್ಕಾರಿ ನೌಕರರು ಕೂಡ ತಮ್ಮ ಮನೆಯ ಹಬ್ಬವೆಂದು ಭಾವಿಸಿ ಸಂಭ್ರಮ, ಸಡಗರದಿಂದ ಆಚರಿಸೋಣ ಎಂದರು.
ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರುಗಳಲ್ಲಿ ವಿವಿಧ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ 10 ಮಂದಿ ಕನ್ನಡಿಗರಿಗೆ ಸನ್ಮಾನ ಮಾಡುವ ಬಗ್ಗೆ ಹಾಗೂ ಸಮ್ಮೇಳನ ನಡೆಯುವ ದಿನಗಳಂದು ರಜೆ ನೀಡುವ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸಿಫ್ ಅವರು ಮಾತನಾಡಿ ಜಿಲ್ಲೆಯ ಎಲ್ಲಾ ಸಿಬ್ಬಂದಿಗಳು ಹಾಗೂ ನಾಗರೀಕ ವರ್ಗದವರಿಗೆ ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಹೆಚ್ಚು ಗೌರವವಿದೆ. ಜಿಲ್ಲೆಗೆ ದೊರಕಿರುವ ಕನ್ನಡ ಸಾಹಿತ್ಯ ಸಮ್ಮೇಳನ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಜಿಲ್ಲೆಯ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸೋಣ ಎಂದರು.
ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು ಅವರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಒಟ್ಟು 28 ಸಮಿತಿಗಳು ಈಗಾಗಲೇ ಸೂಕ್ಷ್ಮವಾಗಿ ಸಿದ್ಧತೆಗಳನ್ನು ನಡೆಸುತ್ತಿದೆ. 30 ವರ್ಷಗಳ ನಂತರ ಜಿಲ್ಲೆಗೆ ಸಿಕ್ಕಿರುವ ಅವಕಾಶ ಇದಾಗಿದ್ದು, ಈ ಅದ್ಭುತ ಸಮ್ಮೇಳನಕ್ಕೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಕಾರ್ಯಕ್ರಮಕ್ಕೆ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು, ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡು ಸಹಕರಿಸಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್ ಮಾತನಾಡಿ ಸಮ್ಮೇಳನಕ್ಕೆ ಎಲ್ಲಾ ಸಂಘಟನೆಗಳು, ಪದಾಧಿಕಾರಿಗಳು ಸಂಪೂರ್ಣ ಬೆಂಬಲ ನೀಡಲಾಗುವುದು. ನಮ್ಮ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸುವ ಜವಾಬ್ದಾರಿ ಎಲ್ಲಾ ನೌಕರರುಗಳ ಮೇಲಿದ್ದು ಒಂದು ದಿನದ ವೇತನವನ್ನು ಸಂತೋಷದಿಂದ ಕಿರು ಕಾಣಿಕೆಯಾಗಿ ನೀಡಲು ಸಿದ್ಧರಿದ್ದು, ಕನ್ನಡ ಸಮ್ಮೇಳನದ ಹಬ್ಬವನ್ನು ಆಚರಿಸೋಣ ಎಂದರು.
ಸಮ್ಮೇಳನದ ಅಂಗವಾಗಿ ನಮ್ಮ ಜಿಲ್ಲೆಯಲ್ಲಿ ಕನ್ನಡ ಭವನದ ನಿರ್ಮಾಣ ಮಾಡಬೇಕು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಗೋಷ್ಠಿ ನಡೆಯುವ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸರ್ಕಾರಿ ನೌಕರರುಗಳನ್ನು ಸನ್ಮಾನಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭು ಗೌಡ ಅವರು ಮಾತನಾಡಿ ಅಖಿಲ ಭಾರತ ಸಮ್ಮೇಳನ ಹಬ್ಬವನ್ನು ನಾವೆಲ್ಲರೂ ಆಚರಿಸುತ್ತಿದ್ದು, ಮಂಡ್ಯ ಜಿಲ್ಲೆಯ ಸರ್ಕಾರಿ ನೌಕರರ ಸಂಘವು ಎಲ್ಲಾ ರೀತಿಯ ಬೆಂಬಲ ಹಾಗೂ ಸಹಕಾರವನ್ನು ಜಿಲ್ಲಾಡಳಿತಕ್ಕೆ ನೀಡಲಾಗುವುದು. ಎಲ್ಲಾ ನೌಕರರು ಸಹಕಾರ ಮನೋಭಾವ ಹಾಗೂ ಧನಾತ್ಮಕ ನಿಲುವನ್ನು ಹೊಂದಿದ್ದು, ಸಿಕ್ಕಿರುವ ಅವಕಾಶದಲ್ಲಿ ನಮ್ಮ ಅಳಿಲು ಸೇವೆ ಮಾಡಲು ಸಿದ್ಧರಿದ್ದೇವೆ ಎಂದರು.
ಸಮ್ಮೇಳನಕ್ಕೆ ಬರುವ ಪ್ರತಿಯೊಬ್ಬರನ್ನು ಗೌರವಿಸಿ ಅತಿಥಿ ಸತ್ಕಾರ ಮಾಡುವುದು ಕೇವಲ ಜಿಲ್ಲಾ ಆಡಳಿತದ ಕರ್ತವ್ಯವಲ್ಲ. ಎಲ್ಲಾ ಸರ್ಕಾರಿ ನೌಕರರು ಹಾಗೂ ಜಿಲ್ಲೆಯ ನಾಗರೀಕರ ಕರ್ತವ್ಯವಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವವರನ್ನು ನಮ್ಮ ಜಿಲ್ಲೆಯ ಅತಿಥಿಗಳ ರೀತಿ ಸತ್ಕಾರ ಮಾಡುವ ಮೂಲಕ ಬೇರೆ ಜಿಲ್ಲೆಗಳು ನಮ್ಮ ಜಿಲ್ಲೆಯನ್ನು ಕೊಂಡಾಡುವಂತೆ ಮಾಡೋಣ ಎಂದರು.
ಸಭೆಯಲ್ಲಿ ಹಾಜರಿದ್ದ ವಿವಿಧ ಸರ್ಕಾರಿ ಇಲಾಖೆಯ ನೌಕರರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯುತ್ತಿರುವುದು ಜಿಲ್ಲೆಯ ಸುಯೋಗವಾಗಿದೆ. ಎಲ್ಲಾ ವರ್ಗದ ನೌಕರರ ಮನವೊಲಿಸಿ ಸಮ್ಮೇಳನಕ್ಕೆ ಸಹಕಾರ ನೀಡಲಾಗುವುದು ಎಂದರು.
ಇಡೀ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಹೆಚ್ಚು ಮಾತನಾಡುವ ಜಿಲ್ಲೆ ಮಂಡ್ಯವಾಗಿದ್ದು, ಇದು ಹೆಮ್ಮೆಯ ಸಂಗತಿಯಾಗಿದೆ. ಎಲ್ಲಾ ಜಿಲ್ಲೆಯು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆ ಹೇಗೆ ಮಾಡುತ್ತದೆ ಎಂದು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತದೆ. ಆದ್ದರಿಂದ ಎಲ್ಲರೂ ಒಗ್ಗೂಡಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿ ಇಡೀ ರಾಜ್ಯಕ್ಕೆ ಮಾದರಿಯಾಗೋಣ ಎಂದರು.
ಸಭೆಯಲ್ಲಿ ಕಸಾಪ ಸಮ್ಮೇಳನದ ಸಂಚಾಲಕಿ ಡಾ ಮೀರಾಶಿವಲಿಂಗಯ್ಯ ಸೇರಿದಂತೆ ವಿವಿಧ ನೌಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply