
ಮಂಡ್ಯ: ತಾಲೂಕಿನ ಹೊಸ ಬೂದನೂರು ಗ್ರಾಮದ ಚೋಳರ ಕಾಲದ ಐತಿಹಾಸಿಕ ದೇವಾಲಯಗಳಾಗ ಶ್ರೀ ಕಾಶಿವಿಶ್ವನಾಥ ಹಾಗೂ ಅನಂತ ಪದ್ಮನಾಭ ದೇವಾಲಯದ ಆವರಣದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಿ ವಿರೂಪಗೊಳಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕರು ಗ್ರಾಪಂ ಪಿಡಿಒಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಗ್ರಾಪಂ ಮಾಜಿ ಸದಸ್ಯ ಬಿ.ಕೆ.ಸತೀಶ್ ಅವರು ೨೦೨೫ರ ನವೆಂಬರ್ ೧೪ರಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕರಿಗೆ ಬೂದನೂರು ಗ್ರಾಮದಲ್ಲಿರುವ ಶ್ರೀ ಅನಂತಪದ್ಮನಾಭ ಹಾಗೂ ಶ್ರೀ ಕಾಶಿವಿಶ್ವನಾಥ ದೇವಾಲಯಗಳ ಬಳಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ವಿರೂಪಗೊಳಿಸಿದ್ದಾರೆ ಎಂದು ದೂರು ಸಲ್ಲಿಸಿದ್ದರು.
ದೇವಾಲಯವು ಈಗಾಗಲೇ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ರಾಜ್ಯ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ ಗ್ರಾಮ ಪಂಚಾಯ್ತಿಯವರು ಅದನ್ನು ಲೆಕ್ಕಿಸದೆ ಸಂರಕ್ಷಿತ ಪ್ರದೇಶದಲ್ಲಿಯೇ ನಿರ್ಮಿಸಿದ್ದಾರೆ ಎಂದು ದೂರಿದ್ದರು.
ಹಿಂದೆ ದೇವಾಲಯ ಪಕ್ಕದಲ್ಲಿಯೇ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿತ್ತು. ಆಗ ದೇವಾಲಯಗಳು ಪಾಳು ಬಿದ್ದಿದ್ದವು. ಇದೀಗ ಸಂಪೂರ್ಣ ಜೀಣೋದ್ಧಾರಗೊಂಡು ಮುನ್ನಲೆಗೆ ಬಂದಿವೆ. ಅಲ್ಲದೆ, ಪುರಾತತ್ವ, ಪರಂಪರೆ ಇಲಾಖೆಯು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ. ಈ ನಿಯಮವಿದ್ದರೂ ದೇವಾಲಯದ ಸಂರಕ್ಷಿತ ಪ್ರದೇಶದಲ್ಲಿಯೇ ಟ್ಯಾಂಕ್ ನಿರ್ಮಾಣ ಮಾಡುವ ಮೂಲಕ ನಿಯಮಗಳ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸರಂಕ್ಷಣಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿದಾಗ ಬೂದನೂರಿನಲ್ಲಿರುವ ಶ್ರೀ ಅನಂತಪದ್ಮನಾಭ ಹಾಗೂ ಶ್ರೀ ಕಾಶಿವಿಶ್ವನಾಥ ದೇವಾಲಯಗಳು ರಾಜ್ಯ ಸಂರಕ್ಷಿತ ಸ್ಮಾರಕವಾಗಿರುತ್ತದೆ. ರಾಜ್ಯ ಸರ್ಕಾರದ ದಿ ಕರ್ನಾಟಕ ಏನ್ಸಿಯೆಂಟ್ ಅಂಡ್ ಹಿಸ್ಟಾರಿಕಲ್ ಮಾನ್ಯುಮೆಂಟ್ಸ್ ಅಂಡ್ ಆರ್ಕಿಯಾಲಜಿಕಲ್ ರಿಮೇನ್ಸ್ ಆಕ್ಟ್ 1985 ಮತ್ತು ಅದರಡಿಯಲ್ಲಿನ ನಿಯಮ 12ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯದ ಎಲ್ಲ ಸ್ಮಾರಕಗಳ ಹತ್ತಿರದ ಅಥವಾ ಅದಕ್ಕೆ ಹೊಂದಿಕೊAಡಿರುವ 100 ಮೀಟರ್ ಮತ್ತು ತದನಂತರದ 200 ಮೀಟರ್ಗಳ ಅಂತರದಲ್ಲಿನ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣ/ಮರು ನಿರ್ಮಾಣದ ಪೂರ್ವದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖಾ ವತಿಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ.
ಆದರೆ ಶ್ರೀ ಅನಂತಪದ್ಮನಾಭ ದೇವಾಲಯದ ಪಾರ್ಶ್ವದಿಂದ ಸುಮಾರು ೪೫ ಮೀಟರ್ ಅಂತರದಲ್ಲಿಯೇ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದು, ಕಾನೂನಿನಡಿ ಅಪರಾಧವಾಗುತ್ತದೆ. ಆ ಹಿನ್ನೆಲೆಯಲ್ಲಿ ಪತ್ರ ತಲುಪಿದ ಏಳು ದಿನದೊಳಗೆ ಸಮಜಾಯಿಷಿ ನೀಡುವಂತೆ ತಿಳಿಸಿದೆ.

Leave a Reply