Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಅನುಪಯುಕ್ತ ವಸ್ತುಗಳ ಮಾರಾಟದ ಬಗ್ಗೆ ಮಾಹಿತಿ ಬಹಿರಂಗಪಡಿಸಿ : ಸಿಇಓ ಗೆ ಮನವಿ

ಮಂಡ್ಯ : ಜಿಲ್ಲಾ ಪಂಚಾಯಿತಿಗೆ ಸೇರಿದ ಅನುಪಯುಕ್ತ ವಸ್ತುಗಳ ಮಾರಾಟ ಹಾಗೂ ಸರ್ಕಾರಿ ವಾಹನಗಳ ದುರ್ಬಳಕೆ ಮಾಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗ್ರಾಮ ಮಾಜಿ ಪಂಚಾಯಿತಿ ಸದಸ್ಯರು ಜಿ.ಪಂ. ಉಪ ಕಾರ‌್ಯದರ್ಶಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಕಚೇರಿಗೆ ತೆರಳಿದ ಗ್ರಾ.ಪಂ. ಮಾಜಿ ಸದಸ್ಯರು, ಜಿಲ್ಲಾ ಪಂಚಾಯಿತಿಗೆ ಸೇರಿದ ಅನುಪಯುಕ್ತ ವಸ್ತುಗಳನ್ನು ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಏಕಾಏಕಿ ಲಾರಿಯಲ್ಲಿ ಸಾಗಾಣಿಕೆ ಮಾಡಲಾಗಿದೆ. ಈ ಬಗ್ಗೆ ಕಚೇರಿಯ ಕಡತದಲ್ಲಿ ಯಾವುದೇ ದಾಖಲೆಗಳನ್ನು ಮಾಡಿಲ್ಲ ಎಂದು ಆರೋಪಿಸಿದರು.
ಸರ್ಕಾರಕ್ಕೆ ಸೇರಿದ ಯಾವುದೇ ವಸ್ತುಗಳು, ಸಾಮಗ್ರಿಗಳನ್ನು ಹಳೆಯದ್ದು ಮತ್ತು ಅನುಪಯುಕ್ತವಾಗಿರುವುದನ್ನು ಮಾರಾಟ ಮಾಡಬೇಕಾದರೆ ಸರ್ಕಾರದ ನಿಯಮಾವಳಿಗಳಂತೆ ಪತ್ರಿಕಾ ಪ್ರಕಟಣೆ ಹೊರಡಿಸಿ, ಬಹಿರಂಗ ಅಥವಾ ಟೆಂಡರ್ ಹರಾಜು ಮಾಡಬೇಕಾಗಿರುತ್ತದೆ. ಆದರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸದೆ ಏಕಾಏಕಿ ಲಾರಿಗಳಲ್ಲಿ ಸಾಗಿಸಿ ಮಾರಾಟ ಮಾಡಿದ್ದಾರೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿಗೆ ಸೇರಿದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ರಜಾ ಹಾಕಿರುವ ಅಧಿಕಾರಿಗಳ ವಾಹನಗಳನ್ನು ಕೆಲ ಅಧಿಕಾರಿ, ಸಿಬ್ಬಂದಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದ ಸರ್ಕಾರದ ಖಜಾನೆಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.


ಅನುಪಯುಕ್ತ ಸಾಮಾಗ್ರಿಗಳ ಅನಧಿಕೃತ ಮಾರಾಟ ಹಾಗೂ ಸರ್ಕಾರಿ ವಾಹನಗಳ ದುರ್ಬಳಕೆ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಓ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇಂತಹ ದುರ್ಬಳಕೆ ಪ್ರಕರಣಗಳನ್ನು ತಡೆಗಟ್ಟಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿ. ಪಂ ಕಚೇರಿ ಮುಂದೆ ಸಾರ್ವಜನಿಕರು, ರೈತರು, ಸಂಘಟನೆಗಳ ಕಾರ‌್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾ.ಪಂ. ಮಾಜಿ ಸದಸ್ಯರಾದ ಎಂ. ಚಾಮರಾಜ್, ಬಿ.ಕೆ. ಕೆಂಪೇಗೌಡ, ರೈತ ಮುಖಂಡ ಗಾಣದಾಳು ಜಯರಾಂ ಇದ್ದರು.

Leave a Reply

Your email address will not be published. Required fields are marked *

error: Content is protected !!