
ಪರಿಸರ ದಿನ ಅನ್ನುವುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ, ಪರಿಸರ ಕಾಳಜಿಯನ್ನು ಹೊಂದಿ ಪ್ರತಿ ದಿನವನ್ನು ಪರಿಸರ ದಿನವನ್ನಾಗಿ ಆಚರಣೆ ಮಾಡಬೇಕು. ಎಂದು ಮಂಡ್ಯ ಜಿ.ಪಂ ಉಪ ಕಾರ್ಯದರ್ಶಿ ಹಾಗೂ ಯೋಜನಾ ನಿರ್ದೇಶಕರಾದ ಲಕ್ಷ್ಮಿ ತಿಳಿಸಿದರು.
ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಜಗತ್ತಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ಪ್ಲಾಸ್ಟಿಕ್ ಬಳಕೆ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ದಂತಹ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಿ, ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮಂಡ್ಯ ತಾಲ್ಲೂಕು ಪಂಚಾಯಿತಿ ಇಓ ಎಂ.ಎಸ್ ವೀಣಾ ಮಾತನಾಡಿ, ಜಾಗತಿಕ ತಾಪಮಾನ ಏರಿಕೆಯು ನಮ್ಮ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಪ್ರಮುಖ ಕಾರಣ ಎಂದು ತಿಳಿದಿದೆ. ಹೀಗಾಗಿ, ಪರಿಸರವನ್ನು ಉಳಿಸುವುದು,ರಕ್ಷಿಸುವುದು ನಮ್ಮ ಕರ್ತವ್ಯ. ಅಲ್ಲದೆ, ಪರಿಸರವನ್ನು ನಾಶಮಾಡುವ ಎಲ್ಲಾ ರೀತಿಯ ಶೋಷಣೆ ಚಟುವಟಿಕೆಗಳನ್ನು ನಾವು ನಿಲ್ಲಿಸಬೇಕು. ಇದಲ್ಲದೆ, ಇದು ನಮ್ಮ ಉಳಿವಿಗೆ ಮತ್ತು ಮುಂದಿನ ಪೀಳಿಗೆಗೆ ಮೂಲಭೂತ ಅವಶ್ಯಕತೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ದುಡಿಯೋಣ ಬಾ ಆಭಿಯಾನವನ್ನು ನಡೆಸಲಾಯಿತು.
ನಂತರ ಉಪಕಾರ್ಯದರ್ಶಿ ಹನಕೆರೆ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಕರ ವಸೂಲಾತಿಯ ಬಗ್ಗೆ ಪರಿಶೀಲನೆ ನಡೆಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಕರ ಕಟ್ಟಿರುವ ಬಗ್ಗೆ ಪರಿಶೀಲನೆ ನಡೆಸಿ, ಹನಕೆರೆ ಗ್ರಾಮ ಪಂಚಾಯಿತಿಯ ಗ್ರಂಥಪಾಲಕರಿಂದ ಬಾಕಿ ಇದ್ದ 500 ರೂ ತೆರಿಗೆಯನ್ನು ವಸೂಲಿ ಮಾಡಿ, ಪಿಓಎಸ್ ಯಂತ್ರದಲ್ಲಿ ಮೂಲಕ ಪಾವತಿಸಿದರು. ನಂತರ ಗ್ರಾ.ಪಂಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸುತ್ತಿರುವ ಬಗ್ಗೆ ಪರಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾದ್ಯಕ್ಷರು, ಅಂಚೆ ಇಲಾಖೆಯ ಅಧಿಕಾರಿಗಳು, ಆರೋಗ್ಯ ಕೇಂದ್ರ ಆರೋಗ್ಯಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಎನ್.ಆರ್.ಎಲ್.ಎಂ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು,ಸ್ವಸಹಾಯ ಸಂಘದ ಮಹಿಳೆಯರು, ನರೇಗಾ ಕೂಲಿಕಾರರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹಾಜರಿದ್ದರು.

Leave a Reply