Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಹಾಸನದ ಸ್ವಾಭಿಮಾನಿ ಸಮಾವೇಶಕ್ಕೆ ಮಂಡ್ಯ ಜಿಲ್ಲೆಯಿಂದ 50,000 ಜನ – ಎಂ.ಎಲ್. ಸುರೇಶ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಮತ್ತು ಸಾಮಾಜಿಕ ಬದ್ಧತೆ ಹಾಗೂ ಜನ್ಮ ದಿನೋತ್ಸವದ ಅಂಗವಾಗಿ ವಿವಿಧ ಅಹಿಂದ, ಪ್ರಗತಿಪರ ಸಂಘಟನೆಗಳು ಡಿ. ೫ರಂದು ಹಾಸನದಲ್ಲಿ ಆಯೋಜಿಸಿರುವ ಸ್ವಾಭಿಮಾನಿ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲೆಯ ವಿವಿಧ ಶೋಷಿತ ಸಂಘಟನೆಗಳ ಮುಖಂಡರು ಮನವಿ ಮಾಡಿದರು.
ನಗರದ ಕನಕ ಭವನದಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಜೊತೆಗೆ ಕಾಂಗ್ರೆಸ್ ಮುಖಂಡರನ್ನೊಳಗೊಂಡ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್. ಸುರೇಶ್ ಇದೊಂದು ಪಕ್ಷಾತೀತವಾದ ಸಮಾವೇಶವಾಗಿದ್ದು, ಎಲ್ಲ ವರ್ಗದ ಜನರು ಸಂಘಟಿತರಾಗಿ ಮಂಡ್ಯ ಜಿಲ್ಲೆಯಿಂದ 50,000 ದಿಂದ 75,000 ಜನ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.ಸಮಾವೇಶಕ್ಕೆ ಪೂರ್ವಭಾವಿಯಾಗಿ ಜಿಲ್ಲಾದ್ಯಂತ ಪ್ರವಾಸ ನಡೆಸಿ ಕಾರ್ಯಕ್ರಮದ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಗುವುದು. ಜೊತೆಗೆ ವಾರ್ಡ್ ಮತ್ತು ಪಂಚಾಯಿತಿ ಮಟ್ಟದಿಂದ ಜನರನ್ನು ಸಂಘಟಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, ಸಿದ್ದರಾಮಯ್ಯ ಅವರು ಕೊಟ್ಟಿರುವ ಕಾರ್ಯಕ್ರಮಗಳು ಎಲ್ಲಾ ವರ್ಗಗಳಿಗೂ ತಲುಪಿದೆ. ಬದ್ಧತೆ ಇರುವ ರಾಜಕಾರಣಿ ಹಿಂದುಳಿದ ವರ್ಗದ ನಾಯಕರು ಆಗಿದ್ದಾರೆ ಎಂದು ಬಣ್ಣಿಸಿದರು.ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಆಡಿರುವ ಮಾತುಗಳು ಎಚ್ಚರಿಕೆಯ ಪಾಠ, ಸ್ವಾಮೀಜಿಗಳಿಗೆ ಈ ನೆಲದ ಕಾನೂನಿನ ಬಗ್ಗೆ ಅರಿವಿರಬೇಕು. ಒಕ್ಕಲಿಗ, ಲಿಂಗಾಯಿತ, ಅಲ್ಪಸಂಖ್ಯಾತರು ದಲಿತರು ಹಿಂದುಳಿದ ವರ್ಗಗಳು ಒಗ್ಗೂಡಿದರೆ ೧೫೦ ಸೀಟ್ ಗೆಲ್ಲಬಹುದು. ಹಾಸನದಲ್ಲಿ ನಡೆಯುವ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ ಮುನ್ನುಡಿ ಬರೆಯುವ ಸಮಾವೇಶವಾಗಲಿ ಎಂದು ಹೇಳಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ .ಎಲ್ ಸಂದೇಶ್ ಮಾತನಾಡಿ, ಕೋಮುವಾದಿ ಮತ್ತು ಜಾತಿವಾದಿ ರಾಜಕೀಯ ಶಕ್ತಿಗಳನ್ನು ನಿಯಂತ್ರಿಸಲು ಸಮಾಜವಾದಿ ರಾಜಕೀಯ ವ್ಯವಸ್ಥೆ ಜಾರಿಯಾಗಬೇಕು. ಪ್ರಸ್ತುತ ಸಾಮಾಜಿಕ ನ್ಯಾಯದ ಅಸ್ಮಿತೆಯಾಗಿರುವ ಸಿದ್ದರಾಮಯ್ಯ ಅವರ ರಾಜಕೀಯ ಅಧಿಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಅಹಿಂದ ಸಂಘಟನೆಗಳು ಕರ‍್ಯೋನ್ಮುಖವಾಗಬೇಕು ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಹೆಚ್. ನಾಗರಾಜು, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ಬಣ್ಣ, ಬಸವಯ್ಯ, ಅಮ್ಜದ್ ಪಾಷ, ಪ್ರಫುಲ್ಲಚಂದ್ರ, ಡಿ.ಎಲ್ .ಶಂಕರಲಿಂಗೇಗೌಡ, ಎನ್. ದೊಡ್ಡಯ್ಯ, ಮಹೇಶ್, ಸಾತನೂರು ರಾಜು, ಶ್ರೀನಿವಾಸ್, ಎನ್.ಸೋಮಶೇಖರ್, ಹನುಮಂತಯ್ಯ, ವನೇಶ್, ನಾಗರತ್ನ, ವೀಣಾ ಶಂಕರ್, ಸಿ.ಡಿ. ವಿಜಯಕುಮಾರ್, ಅಶೋಕ್, ಕೃಷ್ಣ, ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!