Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಬ್ರೈನ್ ಟ್ಯೂಮರ್ ನಿಂದ ಕೋಮಾ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ 

ಮಂಡ್ಯ: ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿಗೆ ಹೋಗಿದ್ದ ಗರ್ಭಿಣಿಗೆ ವಿಶೇಷ ಚಿಕಿತ್ಸೆ ಮೂಲಕ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದ ಅಪರೂಪದ ಪ್ರಕರಣ ಮಂಡ್ಯದ ಮಿಮ್ಸ್‌ನಲ್ಲಿ ನಡೆದಿದೆ.
ತಾಲೂಕಿನ ಎಚ್.ಮಲ್ಲೀಗೆರೆ ಗ್ರಾಮದ ಶಂಕರ್ ಅವರ ಪತ್ನಿ ಕವಿತಾ (26) ಎಂಬಾಕೆಯೇ ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿಗೆ ಹೋಗಿ ಬಳಿಕ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ ಮಹಿಳೆಯಾಗಿದ್ದಾರೆ.
ಮಂಡ್ಯ ತಾಲೂಕಿನ ಎಚ್. ಮಲ್ಲೀಗೆರೆ ಗ್ರಾಮದ ಕವಿತಾ ಅವರು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದರು. 6 ತಿಂಗಳ ಗರ್ಭಿಣಿಯಾಗಿದ್ದ ವೇಳೆ ಇದ್ದಕ್ಕಿದಂತೆ ಕವಿತಾ ಅವರು ತೊದಲು ನುಡಿಯನ್ನಾಡಲು ಪ್ರಾರಂಭಿಸಿದ್ದರು. ಫೆ. 17ರಂದು ಮುಂಜಾನೆ 5 ಗಂಟೆ ಸಮಯದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಆಕೆಯನ್ನು ಮಿಮ್ಸ್‌ಗೆ ಕರೆತಂದು ತಪಾಸಣೆ ನಡೆಸಿದ ವೇಳೆ ಅವರಿಗೆ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. ಮಿಮ್ಸ್‌ನ ವೈದ್ಯರು ಬೆಂಗಳೂರಿನ ಉನ್ನತ ಕೇಂದ್ರಕ್ಕೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಪೋಷಕರು ಆಕೆಯನ್ನು ನಿಮ್ಹಾನ್ಸ್‌ಗೆ ಕರೆದೊಯ್ದರು. ರೋಗಿಯ ಸ್ಥಿತಿಯನ್ನು ಕಂಡ ನಿಮ್ಹಾನ್ಸ್‌ನವರು ಅಲ್ಲಿ ರೋಗಿಯನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದರು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಾಗಲೂ ಅಲ್ಲೂ ಕೈ ಚೆಲ್ಲಿದರು. ಬಳಿಕ ಸೆಂಟ್ ಜಾನ್ಸ್‌ ಆಸ್ಪತ್ರೆಗೆ ಕರೆದೊಯ್ದು ಫೆ. 17ರಂದು ಆಕೆಗೆ ಬ್ರೈನ್ ಟ್ಯೂಮರ್ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಮೂರ್ನಾಲ್ಕು ದಿನಗಳಿಗೆ 3 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಲಾಗಿತ್ತು. ನಂತರ ಆಕೆಯ ಪೋಷಕರು ಮಂಡ್ಯದ ಮಿಮ್ಸ್‌ ನಿರ್ದೇಶಕ ಡಾ. ನರಸಿಂಹಸ್ವಾಮಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡರು.
ತಕ್ಷಣ ಕಾರ‌್ಯಪ್ರವೃತ್ತರಾದ ಮಿಮ್ಸ್‌ ನಿರ್ದೇಶಕ ಡಾ. ನರಸಿಂಹಸ್ವಾಮಿ ಅವರು ತಮ್ಮ ಆಸ್ಪತ್ರೆಯ ನ್ಯೂರೋಸರ್ಜನ್ ಡಾ. ಲಿಂಗರಾಜು ಮತ್ತು ಸ್ತ್ರೀರೋಗ ತಜ್ಞರಾದ ಡಾ. ಮನೋಹರ್ ಅವರೊಂದಿಗೆ ಚರ್ಚಿಸಿ, ರೋಗಿಯನ್ನು ಮಾ. 1ರಂದು ತಮ್ಮ ಆಸ್ಪತ್ರೆಗೆ ದಾಖಲಿಸಿಕೊಂಡರು. ನಂತರ ಆಕೆಗೆ ಹೊಂಬಾಳೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಈ ಮಧ್ಯೆ ಆಕೆ ಗರ್ಭಿಣಿಯಾಗಿ 26 ವಾರ ಆಗಿತ್ತು.
ಈ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಮಗುವನ್ನು ಹೊರ ತೆಗೆದರೆ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮತ್ತೆ ಆಕೆಗೆ ಚಿಕಿತ್ಸೆ ಮುಂದುವರಿಸಲಾಯಿತು. ಯಶಸ್ವಿಯಾಗಿ 36ವಾರಗಳ ಕಾಲ ಚಿಕಿತ್ಸೆ ನೀಡಿದ ನಂತರ ಏ. 11ರಂದು ಸ್ತ್ರೀ ರೋಗ ತಜ್ಞ ಡಾ. ಮನೋಹರ್ ಮತ್ತು ತಂಡ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.  ತಾಯಿಗೆ ಅಗತ್ಯ ಪೌಷ್ಠಿಕಾಂಶದ ಕೊರತೆ ಇದ್ದ ಕಾರಣ ಮಗು ಕೇವಲ 1.600 ಕೆ.ಜಿ. ತೂಕ ಇತ್ತು.
ಮಗುವಿನ ಆರೋಗ್ಯದ ದೃಷ್ಠಿಯಿಂದ ಆಸ್ಪತ್ರೆಯ ಮಕ್ಕಳ ವಿಭಾಗದ ಡಾ. ಕೀರ್ತಿ ಅವರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು. ಒಂದು ವಾರ ಐಸಿಯುನ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಿದ ನಂತರ ಮಗು ಈಗ 2.600 ಕೆಜೆ ತೂಕ ಇದೆ.
ಲಕ್ಷಾಂತರ ರೂ. ಖರ್ಚು ಮಾಡಿ ಉನ್ನತ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರೂ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವುದು ಕಷ್ಟ. ಇಂತಹ ಸಮಯದಲ್ಲಿ ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಶುಶ್ರೂಷಕರ ತಂಡ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವಲ್ಲಿ ವಿಶೇಷ ಕಾಳಜಿ ವಹಿಸಿದೆ ಎಂದು ಮಿಮ್ಸ್‌ ನಿರ್ದೇಶಕ ಡಾ. ನರಸಿಂಹಸ್ವಾಮಿ ಅಭಿಮಾನದಿಂದ ನುಡಿದರು.

ಮಂಡ್ಯ ಮಿಮ್ಸ್‌ ನ  ಸ್ತ್ರೀರೋಗ ತಜ್ಞ ಡಾ. ಮನೋಹರ್ ಮಾತನಾಡಿ ಲಕ್ಷಕ್ಕೆ ಒಬ್ಬರಿಗೆ ಈ ರೀತಿ ಆಗುವ ಸಾಧ್ಯತೆ ಇದೆ. ಇದೊಂದು ವಿಶೇಷ ಪ್ರಕರಣ. ನಾನು ಮತ್ತು ನಮ್ಮ ತಂಡ ವಿಶೇಷ ಕಾಳಜಿ ವಹಿಸಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡು ತಾಯಿ ಮಗುವನ್ನು ಕಾಪಾಡಿದ್ದೇವೆ ಎಂದರು.


ಮಂಡ್ಯ ಮಿಮ್ಸ್‌ ನ ನ್ಯೂರೋ ಸರ್ಜನ್ ಡಾ. ಲಿಂಗರಾಜು ಮಾತನಾಡಿ ಬ್ರೈನ್ ಟ್ಯೂಮರ್‌ಗೆ ರೋಗಿಂದ ಬಳಲುತ್ತಿದ್ದ ರೋಗಿ ಅದರಲ್ಲೂ ಶಸ್ತ್ರ ಚಿಕಿತ್ಸೆ ನಂತರ ನೋಡಿಕೊಳ್ಳುವುದು ತುಂಬಾ ಕಷ್ಟ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಗರ್ಭಿಣಿಯಾಗಿದ್ದರಿಂದ ಮಗುವಿನ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಔಷಧವನ್ನು ಸರಿದೂಗಿಸಿಕೊಂಡು ಚಿಕಿತ್ಸೆ ನೀಡಿದ್ದ ಸವಾಲಿನ ಕೆಲಸವಾಗಿತ್ತು. ಅದನ್ನು ಯಶಸ್ವಿಯಾಗಿ ಮಾಡಿದ್ದೇವೆ. ಹೆಮ್ಮೆ ಇದೆ ಎಂದರು.

ಮಂಡ್ಯ ಮಿಮ್ಸ್‌ ನ ಮಕ್ಕಳ ತಜ್ಞ ಡಾ. ಕೀರ್ತಿ ಮಾತನಾಡಿ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿರುವುದು, ಪೌಷ್ಠಿಕ ಆಹಾರದ ಕೊರತೆ, ಔಷಧಗಳ ಸೇವನೆಯಿಂದಾಗಿ ಮಗುವಿನ ಮೇಲೆ ಪರಿಣಾಮ ಬೀರಿತ್ತು. ಮಗುವಿನ ಆರೋಗ್ಯವನ್ನು ಕಾಪಾಡುವುದು ನಮಗೂ ಒಂದು  ರೀತಿಯ ಸವಾಲಾಗೇ ಪರಿಣಮಿಸಿತ್ತು. 1 ವಾರಗಳ ಕಾಲ ತೀವ್ರ ನಿಗಾ ವಹಿಸಿ ಕಾಳಜಿಯಿಂದ ನೋಡಿಕೊಳ್ಳಲಾಯಿತು ಎಂದು ಹೇಳಿದರು.
 
ಮಂಡ್ಯ ಮಿಮ್ಸ್‌ ನ ವೈದ್ಯಕೀಯ ಅಧೀಕ್ಷಕ ಹಾಗೂ ಅನೆಸ್ತೇಷಿಯಾ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್ ಮಾತನಾಡಿ ಇಂತಹ ಪ್ರಕರಣದಲ್ಲಿ ಅನೆಸ್ತೇಷಿಯಾ ನೀಡುವುದು ತುಂಬಾ ಕಷ್ಟದ ಕೆಲಸ. ಸ್ವಲ್ಪ ಹೆಚ್ಚು ಕಡಿಮೆ ಆದರೂ ರೋಗಿಯ ಪ್ರಾಣಕ್ಕೆ ತೊಂದರೆ ಆಗುವ ಸಾಧ್ಯತೆಗಳಿರುತ್ತವೆ. ಔಷಧವನ್ನು ಸರಿಯಾದ ಪ್ರಮಾಣದಲ್ಲಿ ನೀಡಿ ಅತ್ಯಂತ ಜಾಗರೂಕತೆಯಿಂದ ನಮ್ಮ ತಂಡ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!