
ಮಂಡ್ಯ ತಾಲೂಕಿನ ಹಂಪಾಪುರದ ಪಟ್ಟಲದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅರ್ಚಕ ವೃತ್ತಿಯನ್ನು ಗ್ರಾಮದ ಪರಿಶಿಷ್ಠ ಜಾತಿ ಮತ್ತು ಪಂಗಡ ಹಾಗೂ ಗಂಗಾಮತಸ್ಥರ ಸುಪರ್ದಿಗೆ ವಹಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಉಪ್ಪರಕನಹಳ್ಳಿ ಗ್ರಾ.ಪಂ ಸದಸ್ಯ ಸತೀಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ದೇವಾಲಯವು ಹಂಪಾಪುರಕ್ಕೆ ಗ್ರಾಮಕ್ಕೆ ಸೇರಿದ್ದಾಗಿದ್ದು, ಇಲ್ಲಿ ಪೂಜೆ ಸಲ್ಲಿಸುವುದು 60 ವರ್ಷಗಳಿಂದ ಗ್ರಾಮದವರಿಗೆ ಸೇರಿತ್ತು. ಈಗ ಏಕಾಏಕಿ ಮುಜರಾಯಿ ಇಲಾಖೆ ಮಧ್ಯೆಪ್ರವೇಶದಿಂದಾಗಿ ತಹಶೀಲ್ದಾರರು ಹಳೇ ಅರ್ಚಕರು ಪೂಜೆ ಸಲ್ಲಿಸುವಂತೆ ಆದೇಶಿಸಿರುವುದು ಸರಿಯಲ್ಲ ಎಂದರು.
ಪಟ್ಟಲದಮ್ಮ ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದೆ ಎನ್ನಲಾಗುತ್ತಿದ್ದು, ಇದುವರೆಗೂ ಮುಜರಾಯಿ ಇಲಾಖೆಯಿಂದ ದೇವಾಲಯದ ಯಾವುದೇ ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳು ನೆರವೇರಿಸಿಲ್ಲ. ಆದರೂ ಇದೀಗ ಇವರ ಮಧ್ಯಸ್ಥಿಕೆಯಿಂದ ನೆರೆ ಗ್ರಾಮ ಹಬ್ಬದ ಮಾರನಹಳ್ಳಿಯ ಗ್ರಾಮಸ್ಥರನ್ನು ಅರ್ಚಕರಾಗಿ ನೇಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1904ರಿಂದಲೂ ದೇವಾಲಯವು ಹಂಪಾಪುರದ ಪಟ್ಟಲದಮ್ಮ ಎಂಬ ದಾಖಲೆಗಳಿದ್ದು, ಈಗ ಏಕಾಏಕಿ ಕಳೆದೊಂದು ತಿಂಗಳಲ್ಲಿ ಚೋಕನಹಳ್ಳಿ ಪಟ್ಟಲದಮ್ಮ ಎಂಬುದಾಗಿ ದಾಖಲೆ ಸೃಷ್ಟಿಸಲಾಗಿದೆ. ಇದನ್ನು ಸರಿಪಡಿಸಿ ಮೊದಲಿನಂತೆಯೇ ಹಂಪಾಪುರದ ಪಟ್ಟಲದಮ್ಮ ಎಂದು ಬದಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ನ್ಯಾಯಾಲಯ ಮೊರೆ ಹೋಗಿದ್ದು, ಅಲ್ಲಿಯವರೆಗೂ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಬಾರದು. ಆದರೆ ಅರ್ಚಕ ಸೇವೆಯನ್ನು ಹಂಪಾಪುರದ ಗ್ರಾಮಕ್ಕೆ ನೀಡಿ, ದೇವಾಲಯದ ಹೆಸರಿನಲ್ಲಿರುವ 7 ಎಕರೆ ಜಮೀನನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಬೇಕು. ದೇವಾಲಯದ ಹುಂಡಿ ಹಣ ಎಣಿಕೆ ಮಾಡಿ, ದೇವಾಲಯದ ಅಭಿವೃದ್ಧಿಗೆ ಬಳಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕೃಷ್ಣಯ್ಯ, ಜಿಲ್ಲಾ ಗಂಗಾಮತಸ್ಥ ಸಂಘದ ಉಪಾಧ್ಯಕ್ಷ ಕೆ.ತಮ್ಮಣ್ಣ, ಕನ್ನಲಿ ದೇವರಾಜ್, ಮಹಿಳಾ ಅಧ್ಯಕ್ಷೆ ಗಾಯಿತ್ರಿ, ಬೋರಯ್ಯ, ದೇವಣ್ಣ, ಉಮೇಶ್ ಇದ್ದರು.

Leave a Reply