Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸ್ವಚ್ಛತೆ ಎನ್ನುವುದು ನಿರಂತರವಾಗಿ ನಡೆಯುವ ಪ್ರಕ್ರಿಯೆ ಆಗಬೇಕು ; ಸಿಇಓ ನಂದಿನಿ

ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಶುದ್ಧ, ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಅವಿರತ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಆರ್. ನಂದಿನಿ ರವರು ಮಂಡ್ಯ ಜಿಲ್ಲೆಯ ಗ್ರಾಮೀಣ ಸಮುದಾಯದ ಅಭಿವೃದ್ಧಿ ಹಾಗೂ ನೈರ್ಮಲ್ಯತೆ ಕಾಪಾಡಲು “ಸ್ವಚ್ಛತೆಯೆಡೆಗೆ ದಿಟ್ಟ ನಡಿಗೆ” ಎಂಬ ಘೋಷ ವಾಕ್ಯದೊಂದಿಗೆ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಸ್ವಚ್ಛತೆಗೆ ಹೆಚ್ವಿನ ಮಹತ್ವವನ್ನು ನೀಡುವುದು ಅಗತ್ಯವಾಗಿದೆ. ಏಕೆಂದರೆ ಸ್ವಚ್ಛತೆ ಅನ್ನುವುದು ಕೇವಲ ಬಾಹ್ಯ ಸ್ವಚ್ಚತೆಯಲ್ಲ ಆಂತರಿಕ ಸ್ವಚಛತೆಯು ಸೇರಿರುತ್ತದೆ. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕಾಗಿರುತ್ತದೆ. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು, ಕೆಲಸ ನಿರ್ವಹಿಸುವ ಸ್ಥಳ,  ಮನೆ ಸ್ವಚ್ಛವಾಗಿಟ್ಟುಕೊಂಡರೆ ಮಾತ್ರ ಸ್ವಚ್ಛ ಸುಂದರ ಗ್ರಾಮಗಳನ್ನಾಗಿ ರೂಪಿಸಲು ಸಾಧ್ಯವಾಗುವುದು ಎಂದರು.

ಸ್ವಚ್ಛತೆ ಅನ್ನುವುದು ಒಂದು ದಿನದ ಕೆಲಸವಲ್ಲ, ನಿರಂತರವಾಗಿ ನಡೆಯುವಂತಹ ಪ್ರಕ್ರಿಯೆಯಾಗಬೇಕು. ಈ ದಿನ ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯಿತಿಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕೈಗೊಂಡಿದ್ದೇವೆ. ಮುಂದಿನ ಹಂತದಲ್ಲಿ ತಾಲ್ಲೂಕು ಮಟ್ಟ, ಗ್ರಾಮ ಮಟ್ಟದಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಕೈಗೊಂಡು ದೇಶದ ಅಭಿವೃದ್ಧಿಯ ಜೊತೆಗೆ ಒಂದು ಸುಂದರ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಸ್ವಚ್ವತೆಯ ಕಲ್ಪನೆ ಯಾವಾಗಲೂ ನಮ್ಮ ಅಂತರಾಳದಲ್ಲಿ ಜಾಗೃತವಾಗಿರಬೇಕು. ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವುದು ಬಹಳ ಪ್ರಮುಖವಾದುದ್ದು, ಹಾಗೂ ನಮ್ಮ ಇಲಾಖೆಯ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುವುದು ನಮ್ಮ ನಿಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ತಿಳಿಸಿದರು.

ಜಪಾನ್ ದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸ್ವಚ್ಛತೆ ಕುರಿತು ಪೋಷಕರು ಅರಿವನ್ನು ಮೂಡಿಸಿರುತ್ತಾರೆ. ಸ್ವಚ್ಛತೆಯ ಕಲ್ಪನೆ ಎಂಬುವುದು ಶಾಲಾ ಪೂರ್ವ ಹಂತದಿಂದಲೇ ಪ್ರಾರಂಭವಾಗುತ್ತದೆ. ನಂತರ ಶಾಲಾ ಹಂತದಲ್ಲಿ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ಕೆಲವೊಂದು ಜವಬ್ದಾರಿಗಳನ್ನು ನಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೊಡುವುದರಿಂದ ಅವರು ಜೀವನ ಪೂರ್ತಿ ಅಳವಡಿಸಿಕೊಳ್ಳುತ್ತಾರೆಂದು ತಿಳಿಸಿದರು.

“ಸ್ವಚ್ಛತೆಯೆಡೆಗೆ ದಿಟ್ಟ ನಡಿಗೆ” ಎಂಬ ಘೋಷ ವಾಕ್ಯದೊಂದಿಗೆ ಸ್ವಚ್ಛತಾ ಜಾಥಾ ಕಾರ್ಯಕ್ರಮವು ನಡೆಯಿತು.

ನಂತರ ಜಿಲ್ಲಾ ಪಂಚಾಯಿತಿಯ ಆವರಣದ ಸುತ್ತ ಮುತ್ತ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಲಕ್ಷ್ಮಿ, ಬಾಬು, ಮುಖ್ಯ ಯೋಜನಾಧಿಕಾರಿ ಧನುಷ್ , ಜಿಲ್ಲಾ ಪಂಚಾಯಿತಿಯ ಸಿಬ್ಬಂದಿಗಳು, ಮಂಡ್ಯ ತಾಲ್ಲೂಕಿನ ತಾಂತ್ರಿಕ ಸಹಾಯಕರುಗಳು, ಎಲ್ಲಾ ತಾಲ್ಲೂಕುಗಳ ಸಿಬ್ಬಂದಿಗಳು, ಸ್ವಚ್ಛತಾಗಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!