
ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಇಂಡುವಾಳು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಕಚೇರಿಗೆ ಭೇಟಿ ನೀಡಿ ಹಾಜರಾತಿ, ಚಲನ- ವಲನ ವಹಿ, ನಗದು ವಹಿ, 15 ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ವಹಿ/ದಾಖಲೆಗಳನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ವಹಿಗಳನ್ನು ಪೂರ್ಣಗೊಳಿಸದೇ ಇರುವ ಬಗ್ಗೆ, ಚೆಕ್ ಗಳಿಗೆ ಪಿ.ಡಿ.ಒ ಅವರು ಸಹಿ ಮಾಡಿ ಯಾರದೇ ಹೆಸರು ನಮೂದಿಸದೇ ಇರುವ ಬಗ್ಗೆ ತರಾಟೆಗೆ ತೆಗೆದುಕೊಂಡರು ಹಾಗೂ ತಕ್ಷಣವೇ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕಚೇರಿಗೆ ಕರೆಸುವಂತೆ ನಿರ್ದೇಶಿಸಿದರು.
ಗೋಮಾಳದಲ್ಲಿ ಮನೆ ಕಟ್ಟಲು 9 & 11 ನೀಡಿರುವ ಬಗ್ಗೆ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ ಉಪ ಲೋಕಾಯುಕ್ತರು ಈ ಹಿಂದೆ ನಿರ್ವಹಿಸುತ್ತಿದ್ದ ಪಿ.ಡಿ.ಒಗಳ ಮಾಹಿತಿಯನ್ನು ಪಡೆದುಕೊಂಡರು.
ಪಿ.ಡಿ.ಒ ಯೋಗೇಶ್ ಮೊಬೈಲ್ ಪಡೆದು ಅವರ ಖಾತೆಯಲ್ಲಿ ವಹಿವಾಟು ನಡೆಸಿರುವ ಬಗ್ಗೆ ವಿಚಾರಣೆ ನಡೆಸಿದರು. ಸಂಬಳ ಹಾಗೂ ವಹಿವಾಟಿನ ಬಗ್ಗೆ ಸಂದೇಹ ಉಂಟಾಗಿದ್ದು, ಇವರ ವಿವಿಧ ಬ್ಯಾಂಕ್ ನಲ್ಲಿ ಹೊಂದಿರುವ ಖಾತೆ ಹಾಗೂ ಸ್ಟೇಟ್ ಮೆಂಟ್ ಗಳನ್ನು ತರಸಿಕೊಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ನರೇಗಾ ದಲ್ಲಿ ಕೈಗೊಂಡಿರುವ ಕೆಲಸಗಳು, ಇಂಗು ಗುಂಡಿ, ರಸ್ತೆ ದೀಪಗಳ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡರು. ನೀವೇನು ಪಂಚಾಯತ್ ಡೆವಲಮೆಂಟ್ ಆಫಿಸರ್ ಅಥವಾ ಪಂಚಾಯತ್ ಡ್ಯಾಮೇಜ್ ಆಫಿಸರ್ ಎಂದು ಪಿಡಿಓ ವಿರುದ್ಧ ಕಿಡಿ ಕಾರಿದರು.
ಇಂಗು ಗುಂಡಿ ಮಾಡುವುದರಿಂದ ಕೆರೆಗಳಿಗೆ ಗಲೀಜು ನೀರು ಮಿಶ್ರಣವಾಗಲು ಸಾಧ್ಯವಿಲ್ಲ. ಆದ್ದರಿಂದ ಪಂಚಾಯಿತಿಗಳು ಇಂಗು ಗುಂಡಿ ನಿರ್ಮಾಣ ಮಾಡಲು ಹೆಚ್ಚು ಒತ್ತು ನೀಡಬೇಕು ಎಂದು ಉಪಲೋಕಾಯುಕ್ತರು ತಿಳಿಸಿದರು.
ಇಂಡುವಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಜನಸಂಖ್ಯೆ, ಕುಟುಂಬಗಳು ಹಾಗೂ ಕರ ಸಂಗ್ರಹಣೆ ಮಾಡಿರುವ ಕುರಿತು ಮಾಹಿತಿ ಪಡೆದುಕೊಂಡರು.
ಕಚೇರಿಯ ದ್ವಿತೀಯ ದರ್ಜೆ ಲೆಕ್ಕಾ ಸಹಾಯಕರು ಕಚೇರಿಯಲ್ಲಿ ಹಾಜರಿಲ್ಲದ ಬಗ್ಗೆ ಹಾಗೂ ದಾಖಲೆಗಳನ್ನು ಪರಿಶೀಲನೆಗೆ ನೀಡದೇ ಇರುವ ಬಗ್ಗೆ, ಹಾಗೂ ಹಲವು ದಿನಗಳ ಹಿಂದೆಯೇ ಭೇಟಿ ನೀಡುವುದಾಗಿ ಮಾಹಿತಿ ನೀಡಿದ್ದರೂ ಸರಿಯಾಗಿ ದಾಖಲೆ ಹಾಜರು ಪಡಿಸದ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಲೋಕಾಯುಕ್ತ ಕಚೇರಿಯ ಕಾರ್ಯದರ್ಶಿ ಅರವಿಂದ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply