Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡ ಪಿಡಿಓ…?? ವಿಡಿಯೋ ವೈರಲ್

ಉಪ ಲೋಕಾಯುಕ್ತರು ಮಂಡ್ಯದಲ್ಲಿ ವಿವಿಧ ಕಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಹವಾಲು ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ಮಂಡ್ಯ ತಾಲೂಕಿನ ದುದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮ ಪಂಚಾಯಿತಿ ನೌಕರರಿಂದಲೇ ಜಮೀನಿನ ಕೆಲಸ ಮಾಡಿಸಿಕೊಂಡಿರುವ ವೀಡಿಯೋ ಇತ್ತೀಚೆಗೆ ವೈರಲ್-ಆಗಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಅಧಿಕಾರಿಯ ಜಮೀನು ಇರುವುದು ತೂಬಿನಕೆರೆ ಗ್ರಾಮದಲ್ಲಿ, ಲೋಕಾಯುಕ್ತರು ಬಂದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಸ್ವಲ್ಪ ಮಟ್ಟಿಗೆ ಮಳೆಯೂ ಸುರಿಯುತಿತ್ತು. ತಮ್ಮ ಗದ್ದೆಯಲ್ಲಿ  ಕೊಯ್ಲ್ ಮಾಡಿದ್ದ ಭತ್ತದ ಬೆಳೆಯನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಗದ್ದೆಯಲ್ಲಿದ್ದ ಭತ್ತದ ಹುಲ್ಲನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಬಳಸಿದ್ದು ಕೂಲಿ ಕಾರ್ಮಿಕರನ್ನಲ್ಲ, ಬದಲಿಗೆ ತಮ್ಮ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಗ್ರಾಮ ಪಂಚಾಯಿತಿ ನೌಕರರನ್ನು ಬಳಸಿಕೊಂಡಿದ್ದಾರೆ.

ಜಿಲ್ಲೆಗೆ ಉಪ ಲೋಕಾಯುಕ್ತರು ಬಂದಿದ್ದಾರೆ. ಈ ವಿಚಾರ ಅಧಿಕಾರಿಗಳಿಗೆ ತಿಳಿದರೆ ನನ್ನ ಪರಿಸ್ಥಿತಿ ಏನಾಗಬಹುದು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಪಿಡಿಓ, ನೌಕರರನ್ನು ಗದ್ದೆಯಲ್ಲಿ ಕೆಲಸ ಮಾಡಲು ನಿಯೋಜಿಸಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

ಸಾಮಾನ್ಯವಾಗಿ ಇಂತಹ ಘಟನೆಗಳು ಬಹಳಷ್ಟು ನಡೆಯುತ್ತಿದ್ದರೂ ಬೆಳಕಿಗೆ ಬಾರದೇ ಮುಚ್ಚಿ ಹೋಗುತ್ತವೆ , ನೌಕರರು ಮತ್ತು ಅಧಿಕಾರಿ ನಡುವೆ ವೈಮನಸ್ಸು ಮೂಡಿದಾಗ ಮಾತ್ರ ಇಂತಹ ಘಟನೆಗಳು ಬೆಳಕಿಗೆ ಬರುತ್ತವೆ. ಆದರೆ ಇಲ್ಲಿ ಸಾರ್ವಜನಿಕರೊಬ್ಬರು ಮಾಡಿದ್ದಾರೆ  ಪಂಚಾಯಿತಿ ನೌಕರರು ಅದೂ ಸಮವಸ್ತ್ರದಲ್ಲೇ ಕೆಲಸ ಮಾಡುತ್ತಿರು ವುದನ್ನು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ವೀಡಿಯೋ ಮಾಡುತ್ತಿರುವುದನ್ನು ಕಂಡ ಸದರಿ ಅಧಿಕಾರಿಯ ಕುಟುಂಬದವರು ಪ್ರಶ್ನೆ ಮಾಡುತ್ತಾರೆ. ಮಳೆ ಬರುತ್ತಿದೆ. ಬೆಳೆ ಒಣಗುತ್ತಿದೆ. ಅದಕ್ಕೇ ನಾವು ಪಂಚಾಯಿತಿ ನೌಕರರ ಸಹಾಯ ಕೇಳಿದ್ದೇವೆ. ಅವರು ಇಲ್ಲಿ ಬಂದು ಕೆಲಸ ಮಾಡುತ್ತಿದ್ದಾರೆ. ಅದರಲ್ಲೇನಿದೆ ತಪ್ಪು ಎಂದು ಪ್ರಶ್ನಿಸಿದ್ದಾರೆ.

ರಜಾ ದಿನವೋ ಅಥವಾ ಪಂಚಾಯಿತಿ ಕೆಲಸದ ವೇಳೆ ಮುಗಿದ ನಂತರ ಗದ್ದೆ ಕೆಲಸ ಮಾಡಿಸಿಕೊಂಡಿದ್ದರೆ ಆಕ್ಷೇಪ ವಿರಲಿಲ್ಲವೆನ್ನಬಹುದಾದರೂ, ಸರ್ಕಾರಿ ಕರ್ತವ್ಯದ ವೇಳೆ,ಅದರಲ್ಲೂ ಸಮವಸ್ತ್ರದೊಂದಿಗೆ ಕೆಲಸ ಮಾಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಮೇಲಾಧಿಕಾರಿಗಳೇ ಹೇಳಬೇಕಾಗಿದೆ.

ಜಿಲ್ಲಾ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿ ಅಧಿಕಾರಿಗಳು ಇಂತಹ ಅಧಿಕಾರಿಗಳಿಗೆ ತಕ್ಕ ಶಾಸ್ತ್ರಿ ಮಾಡದಿದ್ದರೆ ಮತ್ತಷ್ಟು ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಲೇ ಇರುತ್ತವೆ. ಇದರಿಂದ ನೌಕರರು ಕಣ್ಣಿದ್ದೂ ಕುರುಡರಾಗಿ, ಬಾಯಿದ್ದೂ ಮೂಕರಾಗಿ, ಕಿವಿ ಇದ್ದೂ ಕಿವುಡರಾಗಿ ವರ್ತಿಸುವಂತಹ ವಾತಾವರಣ ನಿರ್ಮಾಣವಾಗುತ್ತದೆ .

ಇನ್ನಾದರೂ ಗ್ರಾಮ ಪಂಚಾಯಿತಿ ನೌಕರರನ್ನು ದುರ್ಬಳಕೆ ಮಾಡಿಕೊಳ್ಳುವ  ಇಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತಿ ಸಿಇಓ ರವರು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಇದಕ್ಕೆ ಉನ್ನತ ಅಧಿಕಾರಿಗಳೇ ಇಂತಹವರಿಗೆ ಬೆಂಬಲವಾಗಿ ನಿಂತಿದ್ದಾರೆಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವುದರಲ್ಲಿ ಅಚ್ಚರಿಯೇನಿಲ್ಲ..

ಘಟನೆಗೆ ಸಂಬಂಧಿಸಿದಂತೆ ಜನರ ಧ್ವನಿ. ಕಾಂ ಜೊತೆ ಮಾತನಾಡಿದ ದುದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಚಂದ್ರು,ಗ್ರಾಮ ಪಂಚಾಯಿತಿ  ನೌಕರರನ್ನು ಪಿಡಿಓ ರವರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದ ವಿಡಿಯೋ ನನ್ನ ಗಮನಕ್ಕೆ ಬಂದಿದೆ. ಸೋಮವಾರ ಸಭೆಯನ್ನು ಕರೆದು ಸಭೆಯಲ್ಲಿ ಚರ್ಚಿಸಿ, ಪಿಡಿಓ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ನೌಕರರನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡಿರುವ ಘಟನೆಗೆ ಕುರಿತಂತೆ ಮಂಡ್ಯ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಅಥವಾ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ…

ವರದಿ : ಎಂ.ಚಾಮರಾಜು

Leave a Reply

Your email address will not be published. Required fields are marked *

error: Content is protected !!