Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾ.ಪಂ ಗಳಿಗೆ ಹಸ್ತಾಂತರ ಮಾಡದ ಖಾಸಗಿ ಕಂಪನಿ 

ಮಂಡ್ಯ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ 75 ಶುದ್ದ ಕುಡಿಯುವ ನೀರಿನ ಘಟಕಗಳ ಖಾಸಗಿ ಗುತ್ತಿಗೆ ಅವಧಿ ಮುಗಿದು 4 ತಿಂಗಳಾದರೂ ಗ್ರಾಪಂಗಳಿಗೆ ವಹಿಸದೇ ಅಕ್ರಮ ಎಸಗಲಾಗಿದೆ ಎಂದು ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಸತೀಶ್ ಬೂಸ ದೂರಿದ್ದಾರೆ.
ಈ ಕುರಿತು ದಾಖಲೆ ಬಿಡುಗಡೆ ಮಾಡಿ ಹೇಳಿಕೆ ನೀಡಿರುವ ಅವರು, 2020ರ ಫೆ.14ರಂದು 5 ವರ್ಷಗಳ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯವರು 2025ರ ಫೆ.15 ಕ್ಕೆ ಅವಧಿ ಮುಗಿದರೂ ಗ್ರಾಪಂಗಳಿಗೆ ಘಟಕ ಹಸ್ತಾಂತರಿಸದೇ ಅಕ್ರಮ ಎಸಗಿದ್ದಾರೆ‌. ಇದರಲ್ಲಿ ಜಿಪಂ ಅಧಿಕಾರಿಗಳು ಶಾಮೀಲಾಗಿರುವ ಶಂಕೆಯಿದ್ದು ತನಿಖೆ ನಡೆಸಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ದ ಕ್ರಮ ವಹಿಸುವಂತೆ ಜಿಪಂ ಸಿಇಒ ಅವರನ್ನು ಒತ್ತಾಯಿಸಿದ್ದಾರೆ.
ಮಂಡ್ಯ ತಾಲ್ಲೂಕಿನ 30 ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ 45 ಶುದ್ದ ಕುಡಿಯುವ ನೀರಿನ ಘಟಕಗಳನ್ನು ಹಸ್ತಾಂತರಿಸದೆ ಅಕ್ರಮ ಎಸಗಲಾಗಿದೆ. ಅ ಮೂಲಕ ಲಕ್ಷಾಂತರ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ರೀತಿ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿನ ಶುದ್ದ ನೀರಿನ ಘಟಕಗಳನ್ನು ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ಅಲ್ಲೂ ಕೂಡ ಅವಧಿ ಮುಗಿದ ಬಳಿಕ ಗ್ರಾಪಂಗಳಿಗೆ ಘಟಕ ಹಸ್ತಾಂತರಿಸದೆ ಅಕ್ರಮ ಎಸಗಲಾಗಿದೆ.
ಬೂದನೂರು ಗ್ರಾಪಂ ವ್ಯಾಪ್ತಿಯಲ್ಲಿ 4 ಶುದ್ದ ಕುಡಿಯುವ ನೀರಿನ ಘಟಕಗಳಿಂದ ಕಳೆದ 4 ತಿಂಗಳಿನಿಂದ ಲಕ್ಷಾಂತರ ರೂ. ಗಳನ್ನು ಗುತ್ತಿಗೆದಾರ ಪಡೆದು ವಂಚಿಸಿದ್ದಾನೆ‌. ಅದರಲ್ಲಿ ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಕ್ರಮ ವಹಿಸಿ ಘಟಕಗಳನ್ನು ಹಸ್ತಾಂತರ ಪಡೆಯದಿದ್ದಲ್ಲಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ‌.

Leave a Reply

Your email address will not be published. Required fields are marked *

error: Content is protected !!