Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಚಿವ ಚಲುವರಾಯಸ್ವಾಮಿ ಮಧ್ಯಸ್ಥಿಕೆ : ನಂದಿನಿ ಹಠವೋ ಜಿ.ಪಂ.ಬಚಾವೋ ಧರಣಿ ತಾತ್ಕಾಲಿಕ ಅಂತ್ಯ


ಮಂಡ್ಯ : ಜಿಲ್ಲಾ ಪಂಚಾಯತಿ ಆವರಣದಲ್ಲಿ ಇದ್ದ ಕಬ್ಬಿಣವನ್ನು ಮಾರಾಟ ಮಾಡಿದ್ದರೆ ಸರ್ಕಾರಕ್ಕೆ ಹಣವನ್ನು ಜಮಾ ಮಾಡಲಿ ಇಲ್ಲದಿದ್ದರೆ ಕಬ್ಬಿಣವನ್ನು ವಾಪಸ್ಸು ತಂದು ಹಾಕಲಿ ಎಂದು ರೈತ ಸಂಘ, ಪ್ರಗತಿಪರ ಹೋರಾಟಗಾರರು 30 ದಿನಗಳಿಂದ ನಡೆಸುತ್ತಿದ್ದ  ಸಿಇಓ ಕೆ.ಆರ್.ನಂದಿನಿ ಹಠವೋ ಜಿ.ಪಂ.ಬಚಾವೋ ಹೋರಾಟವು ಸಚಿವ ಚಲುವರಾಯಸ್ವಾಮಿಯವರ ಮಧ್ಯಸ್ಥಿಕೆಯಿಂದ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.


ಆಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ರವರು  ಹೋರಾಟಗಾರರೊಂದಿಗೆ ಮಾತನಾಡಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳವ ಭರವಸೆ ನೀಡಿ, ಹೋರಾಟಗಾರರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ ಬಳಿಕ ಹೋರಾಟಗಾರರು ಚರ್ಚಿಸಿ, ಧರಣಿಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಿದರು.ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ, ತಾಲೂಕು ಅಧ್ಯಕ್ಷ ಅಣ್ಣಯ್ಯ, ಗಾಣದಾಳು ಜಯರಾಂ, ಸಾಮಾಜಿಕ ಹೋರಾಟಗಾರ ಚಾಮರಾಜು, ಆನಂದ್, ಸ್ವಾಮಿ, ನಾರಾಯಣಸ್ವಾಮಿ, ಕೆಆರ್ಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲೇಶ್, ರಮೇಶ್ ವಿಜಯ್ ಕುಮಾರ್ ಮತ್ತಿತರರಿದ್ದರು.


ಹೋರಾಟದ ಹಿನ್ನಲೆ


ಅ.17 ರಿಂದ  ಮಂಡ್ಯ ಜಿಲ್ಲಾ ಪಂಚಾಯತಿ ಆವರಣದಿಂದ ೬೦ ಟನ್ ಹಳೆ ಕಬ್ಬಿಣವನ್ನು ಸಾಗಿಸಿರುವುದಕ್ಕೆ ಸಂಬಂಧಿಸಿದಂತೆ ಸಿಇಓ ನಂದಿನಿ ಹಠವೋ ಮಂಡ್ಯ ಜಿಲ್ಲಾ ಪಂಚಾಯತಿ ಬಚಾವೋ ಅಹೋ ರಾತ್ರಿ ಧರಣಿಯನ್ನು ಹೋರಾಟಗಾರರು ಆರಂಭಿಸಿದ್ದರು.
ಕಳೆದ 30ದಿನಗಳಿಂದ ಆಹೋ ರಾತ್ರಿ ಧರಣಿಯನ್ನು ಮಾಡುತ್ತಿದ್ದರೂ ಕೂಡ ಜಿಲ್ಲಾಧಿಕಾರಿಗಳಾಗಲಿ ಅಥವಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿ ಧರಣಿಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವಿಯನ್ನು ಆಲಿಸದೇ ಇರುವುದು ಖಂಡನೀಯ ಎಂದು ಕಿಡಿಕಾರಿದ್ದರು.
ಹಲವು ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿ, ರಾಜ್ಯಸರ್ಕಾರದ ಗಮನ ಸೆಳೆಯಲು ವಿಭಿನ್ನ ಹೋರಾಟ ಮಾಡಿದ್ದರು. ಜಿಲ್ಲಾ ಪಂಚಾಯತಿ ಸಿಇಓರವರು ಕಬ್ಬಿಣ ಇದ್ದರೆ ಎಲ್ಲಿದೆ ಎಂದು ತೋರಿಸಲಿ, ಇಲ್ಲವೇ ಜಿಲ್ಲಾ ಪಂಚಾಯತಿ ಕಚೇರಿ ಆವರಣಕ್ಕೆ ತಂದು ಹಾಕಿಸಲಿ, ಮಾರಾಟ ಮಾಡಿದರೆ ಹಣವನ್ನು ಸರ್ಕಾರಕ್ಕೆ ಜಮೆ ಮಾಡಲಿ, ಧರಣಿಯನ್ನು ಇಷ್ಟು ದಿನ ಮಾಡಲು ಬಿಟ್ಟಿರುವುದೇ ತಪ್ಪಾಗಿದೆ ಎಂದು ಎಚ್ಚರಿಸಿದ್ದರು.
ಜಿಲ್ಲಾಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು, ಇಲ್ಲದಿದ್ದರೆ ಬೇರೆ ರೀತಿಯ ಚಳುವಳಿ, ಕಾನೂನು ಹೋರಾಟವನ್ನು ಮಾಡಲಾಗುವುದು ಹೋರಟಗಾರರು ಎಚ್ಚರಿಗೆ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!