
ಮಂಡ್ಯ : ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸರ್ಕಾರದ ಆದೇಶದಂತೆ ಅನುಮೋದನೆ ನೀಡುವಂತೆ ಒತ್ತಾಯಿಸಿ ಜಿ.ಪಂ. ಸಿಇಒಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಗೆ ತೆರಳಿದ ಹುಲಿವಾನ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ. ಚಾಮರಾಜು ಮತ್ತು ಇತರರು ಜಿ.ಪಂ. ಉಪ ಕಾರ್ಯದರ್ಶಿ ಬಾಬು ಅವರಿಗೆ ಮನವಿ ಸಲ್ಲಿಸಿ ಶೀಘ್ರ ಕ್ರಮಕ್ಕೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ 31/10/2017 ಕ್ಕಿಂತ ಮುನ್ನ ನೇಮಕಗೊಂಡ ಕರ ವಸೂಲಿಗಾರರು, ವಾಟರ್ ಆಪರೇಟರ್, ಅಟೆಂಡರ್ ಹಾಗೂ ಸ್ವಚ್ಚತಾಗಾರರಿಗೆ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆಗಾಗಿ ಬಾಕಿ ಇರುವ ಸಿಬ್ಬಂದಿಗಳಿಗೆ ಕನಿಷ್ಟ ವಿದ್ಯಾರ್ಹತೆಯನ್ನು ಹೊರತುಪಡಿಸಿ ಸಭಾ ನಡವಳಿ, ವೇತನ ಪಾವತಿ, ಹಾಜರಾತಿ ಆಧಾರದ ಮೇಲೆ ಸರ್ಕಾರದ ಆದೇಶದಂತೆ ಜಿ.ಪಂ. ಘಟನೋತ್ತರವಾಗಿ ಅನುಮೋದನೆ ನೀಡುವಂತೆ ಆಗ್ರಹಿಸಿದರು.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದಾರು ತಿಂಗಳ ಹಿಂದೆಯೇ ಸಿಬ್ಬಂದಿಗಳ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದು, ಇದುವರೆಗೂ ಜಿಲ್ಲಾ ಪಂಚಾಯಿತಿಯಲ್ಲಿ ಅನುಮೋದನೆ ನೀಡಿಲ್ಲ. ಇದರಿಂದಾಗಿ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪಂಚಾಯಿತಿ ಸಿಬ್ಬಂದಿಗಳಿಗೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾ.ಪಂ. ಸಿಬ್ಬಂದಿಗಳಿಗೆ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ನೀಡಲು ತಕ್ಷಣ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅನುಮತಿ ನೀಡಲು ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಮು, ಬೂದನೂರು ಗ್ರಾ.ಪಂ. ಮಾಜಿ ಸದಸ್ಯ ಬಿ.ಕೆ. ಸತೀಶ್ ಇದ್ದರು.

Leave a Reply