Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮನರೇಗಾ ಹೊರಗುತ್ತಿಗೆ ನೌಕರರಿಂದ ಅಸಹಕಾರ ಚಳುವಳಿ

ಆರು ತಿಂಗಳಿಂದ ವೇತನ ಪಾವತಿಯಾಗದೆ ಜೀವನ ನಿರ್ವಹಣೆಗೆ ಸಂಕಷ್ಟ
– ಕೇಂದ್ರದಿಂದ ಅನುದಾನ ಬಿಡುಗಡೆಯಾಗಿದ್ದರೂ ತಾಂತ್ರಿಕ ಸಮಸ್ಯೆ ಕಾರಣದಿಂದ ವಿಳಂಬ


ಕಳೆದ ಆರು ತಿಂಗಳಿಂದ ವೇತನ ಪಾವತಿಯಾಗದಿರುವುದನ್ನು ವಿರೋಧಿಸಿ ಮನರೇಗಾ ನೌಕರರ
ಕ್ಷೇಮಾಭಿವೃದ್ಧಿ ಸಂಘ  ಹಾಗೂ ಕರ್ನಾಟಕ ರಾಜ್ಯ ಬೇರ್ ಪೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಕಚೇರಿ ಸೋಮವಾರ
ಪ್ರತಿಭಟನೆ ನಡೆಸಿ ಉಪ ಕಾರ್ಯದರ್ಶಿ ಲಕ್ಷ್ಮಿ ಯವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಸೇರಿದ ಹೊರಗುತ್ತಿಗೆ ನೌಕರರು ಮುಂದಿನ ಎರಡು
ದಿನಗಳೊಳಗೆ ವೇತನ ಪಾವತಿ ಮಾಡದಿದ್ದರೆ ಎಲ್ಲಾ ಕೆಲಸ-ಕಾರ್ಯಗಳನ್ನು ನಿಲ್ಲಿಸಿ ವೇತನ
ಪಾವತಿಯಾಗುವವರೆಗೆ ಅಸಹಕಾರ ಚಳವಳಿ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಜ್ಯಾದ್ಯಂತ 3632 ನೌಕರರು ಮನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ
ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿದ್ದೇವೆ. ಉದ್ಯೋಗಖಾತ್ರಿ ಯೋಜನೆಯ ಸಮರ್ಪಕ
ಅನುಷ್ಠಾನದಲ್ಲಿ ಭಾಗಿಯಾಗಿದ್ದೇವೆ. ಆದರೆ, ನೌಕರರಿಗೆ  ಕಳೆದ ಜನವರಿಯಿಂದ
ಇಲ್ಲಿಯವರೆಗೆ ವೇತನ ಪಾವತಿಯಾಗಿಲಲ್ಲ. ಇದರಿಂದ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ
ಸಿಲುಕಿದ್ದಾರೆ. ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ,
ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚ, ಪ್ರಯಾಣವೆಚ್ಚ, ಸಾಲಗಳ ಮರುಪಾವತಿ, ಇಎಂಐ
ಸೇರಿದಂತೆ ಅನೇಕ ಖರ್ಚುಗಳನ್ನು ನಿಭಾಯಿಸಲು ತೊಂದರೆ ಉಂಟಾಗುತ್ತಿದೆ ಎಂದು ಅಳಲು
ವ್ಯಕ್ತಪಡಿಸಿದರು.
ಸಕಾಲದಲ್ಲಿ ವೇತನ ಪಾವತಿಯಾಗದಿರುವುದರಿಂದ ಸ್ನೇಹಿತರು, ಸಂಬಂಧಿಕರಲ್ಲಿ ಸ್ವಾಭಿಮಾನ
ಅಡವಿಟ್ಟು ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಲೇವಾದೇವಿಗಾರರಿಂದ
ಅನಿವಾರ್ಯವಾಗಿ ಸಾಲ ಮಾಡಿ ಕುಟುಂಬ ನಿರ್ವಹಿಸುವ ದಿನನಿತ್ಯದ ಆಗುಹೋಗುಗಳನ್ನು
ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಈ ಪರಿಸ್ಥಿತಿಯು ನೌಕರ ವರ್ಗದವರನ್ನು
ಮುಜುಗರಕ್ಕೆ ತಳ್ಳುತ್ತಿದೆ. ಪ್ರತಿಯೊಬ್ಬ ನೌಕರರು ಒಂದಲ್ಲಾ ಒಂದು ರೀತಿಯಲ್ಲಿ ಆರ್ಥಿಕವಾಗಿ
ಸಂಕಷ್ಟಕ್ಕೆ ಸಿಲುಕಿ ಬಳಲುತ್ತಿದ್ದಾರೆ. ವೇತನ ಪಾವತಿಯಾಗದಿದ್ದರೆ ನೌಕರರ ಆರ್ಥಿಕ
ಪರಿಸ್ಥಿತಿ, ಮನೋಬಲ, ಆತ್ಮಸ್ಥೈರ್ಯ ಮತ್ತಷ್ಟು ಕುಸಿಯಲಿದೆ ಎಂದು ಹೇಳಿದರು.
ಬಾಕಿ ವೇತನ ಪಾವತಿ ವಿಚಾರವಾಗಿ ಮೇಲಧಿಕಾರಿಗಳು ಕೇಂದ್ರಸರ್ಕಾರದಿಂದ ಅನುದಾನ
ಬಂದಿಲ್ಲವೆಂದು ಇಲ್ಲಿಯವರೆಗೆ ಮಾಹಿತಿ ನೀಡುತ್ತಿದ್ದರು. ಪ್ರಸ್ತುತ
ಕೇಂದ್ರಸಕ್ರಾದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಿದೆ. ರಾಜ್ಯದಿಂದ ಜಿಲ್ಲಾ
ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ. ಆದರೆ, ಹೊಸ ತಂತ್ರಾಂಶದಲ್ಲಿ ವೇತನ ಪಾವತಿ
ಮಾಡಲು ತಾಂತ್ರಿಕ ಸಮಸ್ಯೆ ಬಗೆಹರಿಯದೆ ಇರುವುದರಿಂದ ವೇತನ ಪಾವತಿ ವಿಳಂಬವಾಗುತ್ತಿದೆ
ಎಂದು ಹೇಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ವೇತನ ಪಾವತಿಯಾಗದಿದ್ದರೆ ವೇತನ
ಪಾವತಿಯಾಗುವವರೆಗೂ ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ ಅವರು, ವೇತನ
ಪಾವತಿಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಯನ್ನು ನಿವಾರಿಸುತ್ತಿದ್ದು, ಮುಂದಿನ ಐದು
ದಿನಗಳೊಳಗೆ ವೇತನ ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್ ಬಾಬು,ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ರವಿಕುಮಾರ್, ಹೇಮಂತ್, ರಮೇಶ್,
ಮುನಿರಾಜು, ಕುಸುಮಾ, ಕರ್ನಾಟಕ ರಾಜ್ಯ ಬೇರ್ ಪೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ  ಜಗದೀಶ್, ರಾಜ್ಯ ಖಜಾಂಜಿ ಕಿರಣ್‌ಕುಮಾರ್, ಸರಳಾ, ಆಶಾ, ಕೌಶಲ್ಯ, ಸಂಧ್ಯಾ.
ರಶ್ಮಿ, ಶಿಲ್ಪ, ವೀಣಾ, ಶ್ವೇತಾ, ಕಲ್ಪನಾ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!