Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಿಇಓ ವಿರುದ್ಧ ಅವಹೇಳನಕಾರಿ ಹೇಳಿಕೆ ; ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಜಿಲ್ಲಾ ಪಂಚಾಯಿತಿ ಸಿಇಓ ವಿರುದ್ಧ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ
ಎಂ.ಪುಟ್ಟಮಾದು ಅವಹೇಳನಕಾರಿ ಘೋಷಣೆ ಕೂಗಿದ್ದಾರೆಂದು ಆರೋಪಿಸಿ ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ,
ಹೊರಗುತ್ತಿಗೆ ನೌಕರರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಆವರಣದ ಎದುರು ಸೇರಿದ ಸಂಘದ ಪದಾಧಿಕಾರಿಗಳು ಅಲ್ಲಿಂದ
ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನಾ ಧರಣಿ ನಡೆಸಿದರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಸಿಇಓ ವಿರುದ್ಧ ಅವಹೇಳನಕಾರಿ
ಘೋಷಣೆ ಕೂಗಿರುವ ಎಂ.ಪುಟ್ಟಮಾದು ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ಜು.4 ರಂದು ಪ್ರಾಂತ ಕೃಷಿ ಕೂಲಿಕಾರರ ಸಂಘದವರು ವಿವಿಧ ಬೇಡಿಕೆಗಳನ್ನು
ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವ ವೇಳೆ ಅಹವಾಲು ಸ್ವೀಕರಿಸಲು ಬಂದ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಕುರಿತು ಪುಟ್ಟಮಾದು ಅವರು ನೀವು ಈ
ಜಿಲ್ಲೆಗೆ ಬಂದು ಜಿಲ್ಲೆಯನ್ನು ಹಾಳು ಮಾಡಿದ್ದೀರಿ ಎಂದು ಅವಹೇಳನಕಾರಿಯಾಗಿ ಹಾಗೂ
ನಿಂದನಾತ್ಮಕವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಈ ಮಾತುಗಳು ಪ್ರಾಮಾಣಿಕ
ಅಧಿಕಾರಿಯೊಬ್ಬರ ಮನಸ್ಸಿಗೆ ಘಾಸಿ ಉಂಟುಮಾಡಿದೆ ಎಂದು ಆರೋಪಿಸಿದರು.
ಸಿಇಓ ಕೆ.ಆರ್.ನಂದಿನಿ ಅವರು ಕೇಂದ್ರ ಮತ್ತು ರಾಜ್ಯಸರ್ಕಾರದ ಹಲವಾರು ಯೋಜನೆ,
ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನರೇಗಾ
ಯೋಜನೆಯಡಿ ಹಲವಾರು ವರ್ಷಗಳಿಂದ ಬಾಕಿ ಇದ್ದ ಕೂಲಿ ಮತ್ತು ಸಾಮಗ್ರಿ ಮೊತ್ತಗಳನ್ನು
ಪಾವತಿಸಲು ಅನುಕೂಲವಾಗುವಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡು ರೈತರು  ಮತ್ತು
ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ. ಕ್ರಿಯಾಯೋಜನೆ ಸಿದ್ಧಪಡಿಸುವ ವೇಳೆ ಇದ್ದ
ಗೊಂದಲಗಳನ್ನು ಪರಿಹರಿಸಿ ಸರ್ಕಾರದ ಅನುಮೋದನೆಗೆ ಸಲ್ಲಿಸಲು ಸೂಕ್ತ ಮಾರ್ಗದರ್ಶನ
ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಮನರೇಗಾ ಸೇರಿದಂತೆ ಇತರೆ ಯೋಜನೆಗಳ ಅನುಷ್ಠಾನದಲ್ಲಿ ಗಣನೀಯ ಪ್ರಗತಿ
ಸಾಧಿಸಿರುವುದನ್ನು ಗಮನಿಸಿ ಸಿಇಓ ಕೆ.ಆರ್.ನಂದಿನಿ ಅವರಿಗೆ ಸರ್ಕಾರದ
ಮುಖ್ಯಕಾರ್ಯದರ್ಶಿಗಳು ಪ್ರಶಂಸಾಪತ್ರ ನೀಡಿದ್ದಾರೆ. ಇಂತಹ ದಕ್ಷ ಅಧಿಕಾರಿಯನ್ನು
ಅವಹೇಳನಕಾರಿಯಾಗಿ ನಿಂದಿಸಿರುವ ಪುಟ್ಟಮಾದು ನಿಷ್ಠಾವಂತ ಅಧಿಕಾರಿಯ ಕರ್ತವ್ಯ
ನಿರ್ವಹಣೆಗೆ ಧಕ್ಕೆ ಉಂಟುಮಾಡಿದ್ದಾರೆ. ಇದರಿಂದ ಕೆಳವರ್ಗದ ನೌಕರರು ಸಹ ಆತ್ಮಸ್ಥೈರ್ಯ
ಕಳೆದುಕೊಂಡು ತಮ್ಮ ಕರ್ತವ್ಯದಲ್ಲಿ ಆಸಕ್ತಿ ಕಳೆದುಕೊಂಡು ಕುಗ್ಗಿಹೋಗುವ ಪರಿಸ್ಥಿತಿ
ಉಂಟಾಗಿದೆ ಎಂದು ದೂರಿದರು.
ಮಹಿಳಾ ಅಧಿಕಾರಿ ಎಂಬುದನ್ನು ಲೆಕ್ಕಿಸದೆ ಹಗುರವಾಗಿ ಮಾತನಾಡಿ ಅವಮಾನ ಮಾಡಿರುವ
ಎಂ.ಪುಟ್ಟಮಾದು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ,
ಹೊರಗುತ್ತಿಗೆ ನೌಕರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಉಪ ಕಾರ್ಯದರ್ಶಿಗಳಾದ ಲಕ್ಷ್ಮೀ, ಧನರಾಜ್, ಪಂಚಾಯತ್‌ರಾಜ್
ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಟಿ.ಎ.ಪ್ರಶಾಂತಬಾಬು,
ಸುರೇಶ್, ಸುನೀಲ್‌ಕುಮಾರ್, ಹರೀಶ, ಹೆಚ್.ಸಿ.ಕುಮಾರ,  ಹೆಚ್.ಎಂ.ಸೋಮಶೇಖರ್,
ಬಿ.ದಿನೇಶ್, ಸಿ.ರುದ್ರಯ್ಯ, ಹೆಚ್.ಆರ್.ರವಿಕುಮಾರ್, ಕೆ.ಆರ್.ಕೃಷ್ಣಪ್ಪಗೌಡ,
ಪಿ.ಆರ್.ಹರೀಶ್ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!