
ಮಂಡ್ಯ : ಸಮಾನತೆಯ ಸಮಾಜವನ್ನು ನಿರ್ಮಾಣಮಾಡಲು ಅನುಭವಮಂಟಪ ಸ್ಥಾಪಿಸಿ ಭದ್ರ ಬುನಾದಿ ಹಾಕಿದ ವಿಶ್ವಗುರು ಬಸವಣ್ಣನವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್, ಸಿದ್ದಗಂಗಾಶ್ರೀ ಸೇವಾ ಸಮಿತಿ ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ `ದಾಸೋಹ ಹುಣ್ಣಿಮೆ’ ಹಾಗೂ ಮಹಾಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಕೆಳವರ್ಗದ ಜನತೆಯನ್ನು ಮೇಲೆತ್ತುವ ಸಲುವಾಗಿ ಬಸವಣ್ಣನವರು ಮಾಡಿದ ಕ್ರಾಂತಿ ನಮ್ಮನ್ನಾಳುವ ಆಡಳಿತವರ್ಗದವರಿಗೆ ಆದರ್ಶವಾಗಬೇಕಿದೆ. ಅನುಭವಮಂಟಪದಲ್ಲಿ ಪ್ರಧಾನಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರು ಶರಣರ ಸಂಕಲ್ಪವನ್ನು ಅನುಷ್ಠಾನಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಶಿವಶರಣ ಎಂದು ಬಣ್ಣಿಸಿದರು.
ಶರಣರು, ಸೂಫಿಗಳು, ಸಂತರು ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಮಾಡಿದ ಮಹಾನ್ ಕ್ರಾಂತಿ ಇಂದಿನ ಯುವಜನತೆಗೆ ಆದರ್ಶಪ್ರಾಯವಾಗಬೇಕಿದೆ. ಈ ನಿಟ್ಟಿನಲ್ಲಿ ಕಾಯಕಯೋಗಿ ಫೌಂಡೇಶನ್ ಪ್ರತಿ ತಿಂಗಳ ಹುಣ್ಣಿಮೆಯಂದು ಅನ್ನದಾಸೋಹದಂತಹ ಶ್ರೇಷ್ಠ ಕಾಯಕ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಹಡಪದವರು ಎದುರು ಬಂದರೆ ಅಪಶಕುನ ಎಂದು ಭಾವಿಸುತ್ತಿದ್ದ ಸಂದರ್ಭದಲ್ಲಿ, ಅಣ್ಣ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. ಮಾತ್ರವಲ್ಲದೆ, ತಮ್ಮ ಎಲ್ಲ ಕಾರ್ಯಗಳನ್ನು ಅವರ ಮೂಲಕವೇ ಮಾಡಿಸುತ್ತಿದ್ದರು. ಇದು ಬಸವಣ್ಣನವರ ವಿಶಾಲ ಮನಸ್ಸಿಗೆ ಸಾಕ್ಷಿಯಾಗಿದೆ ಎಂದರು.
`ಸರ್ವೇಜನ ಸುಖಿನೋ ಭವಂತು’ ಎಂಬ ತತ್ವವಿದ್ದ ಕಾಲದಲ್ಲಿ, `ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ’ ತತ್ವವು 12ನೇ ಶತಮಾನದ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರ ಚಳುವಳಿಯ ಕಾಲ ಅಪರೂಪದ ಕಾಲವಾಗಿತ್ತು. ಒಬ್ಬರನ್ನೊಬ್ಬರು ಮುಟ್ಟಿದರೆ ಮಹಾಪಾಪವೆಂದು ಭಾವಿಸಲಾಗಿದ್ದ ಆ ಕಾಲಘಟ್ಟದಲ್ಲಿ, ಕೆಳವರ್ಗದ ಜನರನ್ನು ಒಪ್ಪಿ ಅಪ್ಪಿಕೊಂಡ ಮಹಾಪುರುಷ ಬಸವಣ್ಣನವರು. ಅವರ ಹಾದಿಯಲ್ಲಿ ಸಾಗಿ ಬಂದ ಕಾಯಕಯೋಗಿ ಸಿದ್ದಗಂಗೆಯ ಶ್ರೀ ಶಿವಕುಮಾರಮಹಾಸ್ವಾಮೀಜಿಯವರ `ತ್ರಿವಿಧ ದಾಸೋಹ’ ಕನ್ನಡನಾಡಿನಲ್ಲಿ ಮನೆಮಾತಾಗಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮAಜುನಾಥ್ ಬೆಟ್ಟಹಳ್ಳಿ, ತನ್ನ ತಾನರಿಯದೆ, ತನ್ನ ತಾನೋಡದೆ, ತನ್ನ ತಾನುಡಿಯದೆ, ಅನ್ಯರ ಸುದ್ದಿಯ ನುಡಿದಾಡುವ ಕುನ್ನಿಗಳಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಅವನು ಸರ್ವಾಪರಾಧಿ, ಅವನ ಮುಖವ ನೋಡಲಾಗದು ಬಸವಪ್ರಿಯ ಕೂಡಲಚೆನ್ನಬಸವಣ್ಣ ಎನ್ನುವ ಹಡಪದ ಅಪ್ಪಣ್ಣನವರ ವಚನ ಶರಣರ ಮೌಲ್ಯವನ್ನು ತೋರಿಸುತ್ತದೆ ಎಂದರು.
ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ಉದ್ಯಾನವನದಲ್ಲಿ ಮದ್ದೂರು ತಾಲ್ಲೂಕು ಶರಣರ ಸಂಘಟನಾ ವೇದಿಕೆ ಅಧ್ಯಕ್ಷ ಎಸ್.ಎನ್.ಗಂಗಾಧರ್, ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ಅನನ್ಯ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಅನುಪಮಾ, ಬಸರಾಳು ಬಸವರಾಜ್ ಸಸಿನೆಟ್ಟು ನೀರೆರೆದರು.
ಸಿದ್ದಗಂಗಾಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮAಜುನಾಥ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆಂಪರಾಜು, ಬಿಜೆಪಿ ಮುಖಂಡ ಜಿ.ಮಹಾಂತಪ್ಪ, ಯೋಗಶಿಕ್ಷಕ ಶಿವರುದ್ರಸ್ವಾಮಿ, ವೀರಶೈವ ಹಾಸ್ಟೆಲ್ ಟ್ರಸ್ಟಿ ಡಾ.ಮಲ್ಲಿಕಾರ್ಜುನಯ್ಯ, ಆಟೋಚಾಲಕರ ಸಂಘದ ರಾಜು, ದೀಪು ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply