
ಮಂಡ್ಯ ತಾಲೂಕಿನ ಎಸ್.ಐ. ಕೋಡಿಹಳ್ಳಿ ಗ್ರಾಮದ ಆಲೆಮನೆಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ತಪ್ಪಿಸುವಂತೆ ಒತ್ತಾಯಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮದಿಂದ ಆಗಮಿಸಿದ ಹಲವಾರು ಮಂದಿ ಗ್ರಾಮಸ್ಥರು ಪರಿಸರ ಮಾಲಿನ್ಯ ಇಲಾಖೆಗೆ ತೆರಳಿ ವಾಯು ಮಾಲಿನ್ಯ ತಡೆಗಟ್ಟುವಂತೆ ಒತ್ತಾಯಿಸಿದರು.
ಗ್ರಾಮದ ಕೆ.ಬಿ. ಸಿದ್ದಲಿಂಗಪ್ಪ ಎಂಬುವರ ಆಲೆಮನೆಯಿಂದ ನಿತ್ಯ ವಾಯುಮಾಲಿನ್ಯವಾಗುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡು ವಾಯು ಮಾಲಿನ್ಯ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಆಲೆಮನೆಯಲ್ಲಿ ಬೆಲ್ಲ ತಯಾರಿಕೆಗೆ ಚಪ್ಪಲಿ ಕಾರ್ಖಾನೆಗಳಿಂದ ತಂದ ರಬ್ಬರ್, ಪ್ಲಾಸ್ಟಿಕ್, ಇತರೆ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದಾಗಿ ಸುತ್ತಮುತ್ತಲ ಪರಿಸರಕ್ಕೆ ತೊಂದರೆಯುAಟಾಗುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈಗಾಗಲೇ ಹಲವಾರು ಮಂದಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ ಸದರಿ ಆಲೆಮನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್, ಮುಖಂಡರಾದ ವಿಕಾಸ್, ಪುಟ್ಟೇಗೌಡ, ಲೋಕೇಶ್, ಶಿವಶಂಕರ್, ಬೋರೇಗೌಡ ಸೇರಿದಂತೆ ಇತರರು ಹಾಜರಿದ್ದರು.

Leave a Reply