Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಹೊಸ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಪ್ರತಿಭಟನೆ

ಮಂಡ್ಯ : ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಯಲ್ಲಿರುವ ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ ಸಮೀಪ ಹಳೇ ಸೇತುವೆಗೆ ತೇಪೇ ಹಾಕುತ್ತಿರುವುದನ್ನು ವಿರೋಧಿಸಿ ರೈತರು ಹಾಗೂ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಮಂಡ್ಯ-ನಾಗಮಂಗಲ ರಸ್ತೆಯಲ್ಲಿರುವ ಎಚ್. ಕೋಡಿಹಳ್ಳಿ ಫಾರಂನ ತಿರುವಿನ ಬಳಿ ರಾಜ್ಯ ಹೆದ್ದಾರಿಯಲ್ಲಿ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಹಿಂದೆ ಪೈಪ್‌ಗಳನ್ನು ಅಳವಡಿಸಿ ಸೇತುವೆ ನಿರ್ಮಿಸಿದ್ದು, ಇದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಸುತ್ತಮುತ್ತಲ ಗ್ರಾಮಸ್ಥರು, ರೈತರು ಸಂಕಷ್ಟಪಡುವಂತಾಗಿದೆ ಎಂದು ದೂರಿದರು.
ಮಳೆಗಾಲದಲ್ಲಿ ಪೈಪ್‌ಗೆ ಅಡ್ಡಲಾಗಿ ಕಸ-ಕಡ್ಡಿಗಳು, ಮರದ ಕೊಂಬೆಗಳು ಹಾಗೂ ಇನ್ನಿತರೆ ವಸ್ತುಗಳು ಸಿಕ್ಕಿಹಾಕಿಕೊಂಡು ನೀರು ಸರಾಗವಾಗಿ ಹರಿಯದೆ ಸುತ್ತಮುತ್ತಲ ಜಮೀನುಗಳಿಗೆಲ್ಲಾ ನುಗ್ಗುತ್ತದೆ. ಇದರಿಂದಾಗಿ ರೈತರು ಬೆಳೆದ ಬೆಳೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ ನಿರ್ವಹಣೆ ಸಂದರ್ಭದಲ್ಲಿ ಹಳೆಯ ಪೈಪ್‌ಗಳನ್ನು ತೆಗೆದು ಹೊಸದಾಗಿ ಸೇತುವೆಯನ್ನೇ ನಿರ್ಮಾಣ ಮಾಡುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ರೈತರೊಂದಿಗೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಮುರುಳಿಧರ್, ಭಾನುಪ್ರಕಾಶ್, ಸೊಗಪ್ಪ, ವೆಂಕಟಪ್ಪ, ಪ್ರಕಾಶ, ಚೇತನ, ಚೆನ್ನೇಗೌಡ, ಶಿವಣ್ಣ, ಶ್ರೀಧರ, ಸುರೇಶ್, ವೆಂಕಟೇಶ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!