
15ನೇ ಹಣಕಾಸು ಯೋಜನೆಯ 56 ಲಕ್ಷ ರು. ಅನುದಾನದಲ್ಲಿ ಲಕ್ಷಾಂತರ ರು. ಹಣವನ್ನು ಪಿಡಿಒ ಮತ್ತು ಅಧ್ಯಕ್ಷ ಅಧ್ಯಕ್ಷ ಜೊತೆಗೂಡಿ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ತಾಲೂಕಿನ ಗೊಂಡೇನಹಳ್ಳಿ ಗ್ರಾಮ ಪಂಚಾಯಿತಿ ಎದುರು ಸದಸ್ಯರು ಸಂಬಂಧಿಸಿದ ದಾಖಲೆ ಬಿಡುಗಡೆಗೊಳಿಸಿ ಪ್ರತಿಭಟನೆ ನಡೆಸಿದರು.
ಗ್ರಾ.ಪಂ ಕಚೇರಿ ಆವರಣದಲ್ಲಿ ಅಕ್ರಮಗಳ ಕುರಿತು ದಾಖಲೆಗಳನ್ನು ಬಿಡುಗಡೆಗೊಳಿಸಿ, ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಗ್ರಾ.ಪಂ ಸದಸ್ಯ ಮಧು ಮಾತನಾಡಿ, ಕಳೆದ ಏಪ್ರಿಲ್ 24 ರಿಂದ ಮೇ 1ರವರೆಗೆ ಕೇವಲ 15 ದಿನಗಳ ಅಂತರದಲ್ಲಿ 15,71,528 ರು. ಗಳನ್ನು ಸೆಸ್ಕ್ ಬಿಲ್ ಪಾವತಿಗೆಂದು ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದ್ದಾರೆ. ಆದರೆ, ಇಷ್ಟು ದೊಡ್ಡ ಮೊತ್ತದ ಸೆಸ್ಕ್ ಬಿಲ್ ನಮ್ಮ ಪಂಚಾಯಿತಿಗೆ ಬಂದೇ ಇಲ್ಲ. ಈ ಬಗ್ಗೆ ಸೆಸ್ಕ್ ಕಚೇರಿಯಲ್ಲಿ ವಿಚಾರಿಸಲಾಗಿ 2.48 ಲಕ್ಷ ರು. ಗಳನ್ನು ಮಾತ್ರ ಸೆಸ್ಕ್ ಬಿಲ್ಗೆ ಪಾವತಿಸಿರುವುದಾಗಿ ತಿಳಿದುಬಂದಿದೆ.
ಇನ್ನುಳಿದ ಸುಮಾರು 13 ಲಕ್ಷ ರು. ಹಣವನ್ನು ಪಿಡಿಒ ಮತ್ತು ಅಧ್ಯಕ್ಷ ಇಬ್ಬರೂ ಜೊತೆಗೂಡಿ ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಾಪಂ ಇಒ ಹಾಗೂ ಜಿಪಂ ಸಿಇಒಗೆ ದೂರು ಸಲ್ಲಿಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈ ವಿಚಾರವಾಗಿ ಸಾಮಾನ್ಯ ಸಭೆಗಳಲ್ಲಿ ಪ್ರಶ್ನಿಸಿದರೆ ಅಧ್ಯಕ್ಷರು ಉಡಾಫೆ ಉತ್ತರ ನೀಡುವ ಜೊತೆಗೆ ಮಾಹಿತಿ ನೀಡದೆ ಸಬೂಬು ಹೇಳಿಕೊಂಡು ಸಭೆಯನ್ನು ಮುಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೂ ಈ ಹಣ ವಿನಿಯೋಗವಾಗಿಲ್ಲ. ಆದ್ದರಿಂದ ಸರ್ಕಾರದ ಲಕ್ಷಾಂತರ ರೂ ಹಣ ದುರುಪಯೋಗವಾಗಿದ್ದು, ಜನರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸದಿದ್ದರೆ ಜಿಪಂ ಕಚೇರಿ ಮುಂದೆ ಸದಸ್ಯರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ ಸದಸ್ಯರಾದ ಯೋಗೇಶ್, ನರಸಿಂಹಚಾರಿ, ರಂಗಣ್ಣ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply