Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ವಾಣಿವಿಲಾಸ ಆಸ್ಪತ್ರೆಯ “ಅಮೃತಧಾರೆ” ಕೇಂದ್ರಕ್ಕೆ ಸಿಇಓ ನೇತೃತ್ವದ ತಂಡ ಭೇಟಿ


ಮಂಡ್ಯ:  ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮಾದರಿಯಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ತಾಯಿ ಹಾಲಿನ ಬ್ಯಾಂಕ್ ತೆರೆಯಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿನ ಅಮೃತಧಾರೆ ತಾಯಿ ಹಾಲು ಸಂಗ್ರಹ ಕೇಂದ್ರಕ್ಕೆ ಜಿ.ಪಂ. ಸಿಇಓ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆಯಿತು.

ತಾಯಿ ಹಾಲು ಕೊರತೆಯುಳ್ಳ ಮಕ್ಕಳಿಗೆ ಬೇರೆ ತಾಯಂದಿರಿಂದ ಸುರಕ್ಷಿತವಾಗಿ ಸಂಗ್ರಹಿಸಲ್ಪಟ್ಟ ಹಾಲನ್ನು ನೀಡುವುದರಿಂದ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದ್ದು, ಈಗಾಗಲೇ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ತಾಯಿ ಹಾಲಿನ ಬ್ಯಾಂಕ್ ತೆರೆಯಲಾಗಿದೆ. ಇದೇ ಮಾದರಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿಯೂ ತಾಯಿ ಹಾಲಿನ ಬ್ಯಾಂಕ್ ತೆರೆಯಲಾಗುತ್ತಿದೆ.
  ಜಿ.ಪಂ. ಸಿಇಓ ನಂದಿನಿ ಕೆ.ಆರ್. ಮಾತನಾಡಿ ಶಿಶುಗಳ ಆರೋಗ್ಯ ಮತ್ತು ಪೌಷ್ಠಿಕತೆಗೆ ತಾಯಿ ಹಾಲು ಮಹತ್ವವಾದುದಾಗಿದ್ದು, ತಾಯಿ ಹಾಲು ದೊರೆಯದ ನವಜಾತ ಶಿಶುಗಳಿಗೆ ಸಂಗ್ರಹಿಸಿದ ಹಾಲು ಪೂರೈಸುವುದರಿಂದ ಮಕ್ಕಳ ಜೀವ ಉಳಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ತಾಯಿ ಹಾಲಿನ ಬ್ಯಾಂಕ್ ಮಹತ್ವದ ಪಾತ್ರ ವಹಿಸುತ್ತದೆ ಎಂದು  ತಿಳಿಸಿದರು.

ಎಂ.ಎಲ್.ಸಿ.ಯು ಸ್ಥಾಪನೆಗೆ ಕ್ರಮ

ಕಡಿಮೆ ಅಪಾಯವಿರುವ ಹೆರಿಗೆಗಳನ್ನು ಸ್ವಾಭಾವಿಕವಾಗಿ ಹೆರಿಗೆ ಮಾಡಿಸಲು ಪ್ರತ್ಯೇಕ  Midwifery Led Labour Care Unit ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಈ ಘಟಕದಲ್ಲಿ ಸ್ವಾಭಾವಿಕ ಹೆರಿಗೆಗಳನ್ನು ಮಾಡಿಸಲು ನುರಿತ ಪ್ರಸವ ಸಹಾಯಕಿಯರನ್ನು ನಿಯೋಜಿಸಿ ಶಸ್ತ್ರ ಚಿಕಿತ್ಸೆಗಳ ಪ್ರಮಾಣವನ್ನು ಕಡಿಮೆ ಮಾಡಲು ಯೋಜಿಸಲಾಗಿದೆ ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಿಳಿಸಿದರು.

ವಾಣಿ ವಿಲಾಸ ಆಸ್ಪತ್ರೆಯ ಭೇಟಿಯ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ, ಮಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ನರಸಿಂಹ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ನಾಗರಾಜು, ಆರೋಗ್ಯ ಇಲಾಖೆಯ ಆರ್.ಸಿ.ಹೆಚ್. ಡಾ. ಅಶ್ವಥ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ. ಮನೋಹರ್, ಶಿಶು ವೈದ್ಯರಾದ ಡಾ. ಕೀರ್ತಿ ಮತ್ತು ಡಾ. ಚೇತನ್ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!