
ಪ್ರತಿಯೊಬ್ಬರೂ ಕುಸ್ತಿ ಪಂದ್ಯ ದ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಎಂದು ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎ ಬಿ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ತಿಳಿಸಿದರು.
ಅವರು ಶ್ರೀರಂಗಪಟ್ಟಣ ದಸರಾ ಅಂಗವಾಗಿ ಶ್ರೀರಂಗಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕುಸ್ತಿ ಪಂದ್ಯವನ್ನು ಉದ್ಘಾಟಿಸಿ ಮಾತನಾಡಿದರು.
ರೈತಾಪಿ ವರ್ಗದವರಿಗೆ ಕುಸ್ತಿ ಎನ್ನುವುದು ಜನಪ್ರಿಯ ಕ್ರೀಡೆಯಾಗಿದೆ. ಹಿಂದೆ ಇದ್ದಂತಹ ಗರಡಿ ಪರಂಪರೆ, ಪೈಲ್ವಾನ್ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸುವ ಕೆಲಸವಾಗಬೇಕು. ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಕುಸ್ತಿ ಪಂದ್ಯವನ್ನು ಏರ್ಪಡಿಸಲಾಗುತ್ತಿದೆ.ರಾಜ್ಯದ ವಿವಿಧ ಭಾಗಗಳಾದ ಹುಬ್ಬಳ್ಳಿ, ಬೆಳಗಾಂ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕುಸ್ತಿಪಟುಗಳು ಆಗಮಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಇಂದಿಗೂ ಸಹ ಗರಡಿಗಳು ಅಸ್ತಿತ್ವದಲ್ಲಿದ್ದು, ಕುಸ್ತಿಪಟುಗಳು ಅಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿನ ಪೈಲ್ವಾನ್ ಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದಾರೆ. ಅವರಿಗೆ ದಸರಾ ಸಂದರ್ಭದಲ್ಲಿ ಅಭಿನಂದಿಸಿ ಪುರಸ್ಕರಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ ಶ್ರೀರಂಗಪಟ್ಟಣ ದಸರಾ ಹಬ್ಬವು ಅಕ್ಟೋಬರ್ 4 ರಿಂದ ಬಹಳ ಅರ್ಥಪೂರ್ಣವಾಗಿ ಹಾಗೂ ವೈಭವಯುತವಾಗಿ ಆಚರಿಸುತಿದ್ದೇವೆ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಲ್ಲಿ ಹಾಗೂ ಶಾಸಕರುಗಳ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಮಹತ್ವಪೂರ್ಣವಾಗಿ ಆಯೋಜನೆ ಮಾಡುತ್ತಿದ್ದೇವೆ. ದಸರಾ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ದೇಶಿಯ ಪಂದ್ಯಾವಳಿಯಾದ ಕುಸ್ತಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕುಸ್ತಿ ಸ್ಪರ್ಧೆಯನ್ನು ಯಾವಾಗಲೂ ಪುರುಷರೇ ವಿಭಾಗಕ್ಕೆ ಮಾತ್ರ ನಡೆಸುತ್ತಿದ್ದು, ಈ ಬಾರಿ ಮಹಿಳೆಯರಿಗೂ ಕೂಡ ಮಹಿಳಾ ಕುಸ್ತಿ ಪಂದ್ಯವನ್ನು ಆಯೋಜಿಸಿರುವುದು ವಿಶೇಷವಾಗಿದ್ದು, ಸುಮಾರು 60ಕ್ಕೂ ಹೆಚ್ಚು ಜೋಡಿಗಳು ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದಾರೆ.ಕುಸ್ತಿ ಪಂದ್ಯವು ದೇಶಿಯ ಕ್ರೀಡೆಯಾಗಿದ್ದು, ಇದೇ ರೀತಿ ನಾಡಹಬ್ಬದ ಮೂಲಕ ನಮ್ಮ ಕ್ರೀಡೆಯನ್ನು ಉಳಿಸಿಕೊಂಡು ಹೋಗಬೇಕು. ಜೊತೆಗೆ ಹೆಚ್ಚು ಉತ್ತೇಜನ ನೀಡಿ ಪ್ರೋತ್ಸಾಹಿಸಬೇಕು ಎಂದರು.

Leave a Reply