Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ, ರೈತರನ್ನು ಉಳಿಸಿ : ಡಿಸಿಗೆ ಮನವಿ


ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣಗೊಳಿಸುವುದರ ಮೂಲಕ ಕಬ್ಬು  ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರವನ್ನು  ದೊರಕಿಸಿ ಕೊಡಿಸುವಂತೆ ಆಗ್ರಹಿಸಿ  ವಿವಿಧ ಭಾಗಗಳಿಂದ ಆಗಮಿಸಿದ್ದ ಕಬ್ಬು ಬೆಳೆಗಾರರು ಹಾಗೂ ಹೋರಾಟಗಾರರು  ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಂಡ್ಯ ಭಾಗದ ರೈತರಿಗೆ ಆಸರೆಯಾಗಿದ್ದ ಮೈಷುಗರ್ ಸಕ್ಕರೆ ಕಾರ್ಖಾನೆಗೆ ದಶಕಗಳಿಂದ ಗ್ರಹಣ ಬಡಿದಿದೆ. ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ನಡೆಸಲು ಪ್ರತೀ ವರ್ಷ ಸಾರ್ವಜನಿಕ ಹಣ ಬಿಡುಗಡೆಗೊಳ್ಳುತ್ತಿದ್ದು, ಈವರೆಗೂ ತೆರಿಗೆದಾರರ ದುಡ್ಡು ಸಾಕಷ್ಟು ಪ್ರಮಾಣದಲ್ಲಿ ವ್ಯಯವಾಗಿದ್ದರೂ ಸಹ, ಕಬ್ಬು ಬೆಳೆದ ರೈತನಿಗೆ ಬೆಲೆಯಿಲ್ಲದಂತಾಗಿ,ಕಬ್ಬು ಬೆಳೆಗಾರರಾದ ನಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದರು.

ರೈತರು ಪ್ರಸ್ತುತ ಮಂಡ್ಯ ತಾಲೂಕಿನಲ್ಲಿ 6 ರಿಂದ 8 ಲಕ್ಷ ಟನ್ ಕಬ್ಬು ಬೆಳೆಯುತ್ತಿದ್ದು,ಸಕ್ಕರೆ ಕಾರ್ಖಾನೆಯ ಅವ್ಯವಸ್ಥೆಯಿಂದಾಗಿ ಸಕಾಲದಲ್ಲಿ ಕಬ್ಬು ಕಟಾವಾಗದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಪ್ರತೀ ವರ್ಷ ಸರ್ಕಾರಿ ಅನುದಾನ ಪಡೆದು ಕೇವಲ 1 ರಿಂದ 2 ಲಕ್ಷ ಟನ್ ಕಬ್ಬು ಅರೆಯುವ ಕೆಲಸ ನಡೆಯುತ್ತಿದೆ. ಸರಿಯಾದ ರೀತಿಯಲ್ಲಿ ಕಾರ್ಖಾನೆಯೂ ನಡೆಯದೆ ಸಕ್ಕರೆ ಉತ್ಪಾದನೆಯೂ ಆಗದೆ ಎಲ್ಲಾ ತರಹದಲ್ಲಿ ತೊಂದರೆಯಾಗುತ್ತಿದೆ.

ನಮ್ಮ ಸುತ್ತಲಿನ ಖಾಸಗಿ ಕಾರ್ಖಾನೆಗಳು ವ್ಯವಸ್ಥಿತವಾಗಿ ನಡೆದು ರೈತರಿಗೆ ಅನುಕೂಲ ಆಗುತ್ತಿರುವುದನ್ನು ನಾವೆಲ್ಲರೂ ನೋಡುತ್ತಾ ಇದ್ದೇವೆ. ಅಲ್ಲದೇ ನಾಲೈದು ವರ್ಷಗಳ ಹಿಂದೆ ಇದೇ ರೀತಿ. ಸಹಕಾರಿ-ಸರಕಾರಿ ವ್ಯವಸ್ಥೆಯಿಂದ ಜರ್ಝರಿತವಾಗಿದ್ದ ಪಕ್ಕದ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಲೀಸ್ ನೀಡಿದಾಗ ಕಾರ್ಖಾನೆಯನ್ನು ವಹಿಸಿಕೊಂಡ ನಿರಾಣಿ ಶುಗರ್ಸ್ ಕಂಪನಿಯವರು ವರ್ಷದಿಂದ ವರ್ಷಕ್ಕೆ ಕಾರ್ಖಾನೆಯ ವ್ಯವಸ್ಥೆಗಳನ್ನು ಸರಿಪಡಿಸುವ ಮೂಲಕ ರೈತರ ಕಬ್ಬು ಸಕಾಲದಲ್ಲಿ ಕಟಾವಾಗಿ ಸರಿಯಾದ ಸಮಯದಲ್ಲಿ ಕಬ್ಬಿನ ಬಿಲ್ಲು ದೊರೆಯುವಂತೆ ಮಾಡಿ ಬೆಳೆಗಾರರ ಮುಖದಲ್ಲಿ ನಗು ಮೂಡಿಸಿರುವುದು ಜೀವಂತ ಉದಾಹರಣೆಯಾಗಿದೆ ಎಂದರು.

ಆದ್ದರಿಂದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಸಹ ಯಾವುದಾದರೂ ವ್ಯವಸ್ಥಿತವಾಗಿ ಕಾರ್ಖಾನೆ ನಡೆಸಿ ಸಕಾಲದಲ್ಲಿ ಹಣ ಪಾವತಿಸುವಂತಹ ಖಾಸಗಿ ಸಂಸ್ಥೆಗೆ ವಹಿಸಿದಲ್ಲಿ ಈ ಭಾಗದ ಕಬ್ಬು ಬೆಳೆಗಾರರು, ಕಬ್ಬು ಕಟಾವುದಾರರು ಹಾಗೂ ಸಾಗಾಣಿಕೆದಾರರಿಗೆ ನಿರಂತರ ಉದ್ಯೋಗ ಮತ್ತು ಸಂಪಾದನೆಗೆ ದಾರಿಯಾಗುವುದು.
ಕಬ್ಬು ಬೆಳೆಗಾರರ ಬದುಕು ಹಸನಾಗುವಂತೆ ಮಾಡಲು ಸರಕಾರ ಕೂಡಲೇ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಕರಣಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಾತನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ, ನೀರು ಬಳಕೆದಾರರ ಸಂಘದ ಮಾಜಿ ಅಧ್ಯಕ್ಷ ಕೊತ್ತತ್ತಿ ಮಹೇಶ್,  ಸತೀಶ್, ಶ್ರೀಕಾಂತ್, ವಿಕಾಸ್,ಪವನ್,ಮಹದೇವಯ್ಯ, ದ್ಯಾವಣ್ಣ,ಕುಮಾರ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

error: Content is protected !!