Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಭಾರತಿನಗರ : ಸ್ವಚ್ಛ ಸಂಕೀರ್ಣದ ಸುತ್ತಮುತ್ತ ಅನೈರ್ಮಲ್ಯ ; ಹೆಚ್ಚಾದ ನಾಯಿಗಳ ಕಾಟ

ಮಂಡ್ಯ ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಸೆ. 17 ರಿಂದ ಅ. 2 ರವರೆಗೆ ಸ್ವಚ್ಛತಾ ಹೀ ಸೇವಾ ಸ್ವಚ್ಛೋತ್ಸವವನ್ನು ಆಚರಿಸುತ್ತಿರುವ ಅಂಗವಾಗಿ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ತಿಳುವಳಿಕೆ ನೀಡುತ್ತಿರುವ ಅಧಿಕಾರಿಗಳೇ ಸ್ವಚ್ಛತೆ ಕಾಪಾಡದೇ ನಿರ್ಲಕ್ಷ ವಹಿಸಿರುವ ಆರೋಪವು ಮದ್ದೂರು ತಾಲೂಕಿನ ಭಾರತಿನಗರ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಕೇಳಿ ಬಂದಿದೆ.

ಭಾರತಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಕಸವನ್ನು ಮಣಿಗೆರೆ ಬಳಿ ಇರುವ ಸ್ವಚ್ಛ ಸಂಕೀರ್ಣದ ಅಕ್ಕಪಕ್ಕ ಅವೈಜ್ಞಾನಿಕವಾಗಿ ಸುರಿಯುತ್ತಿರುವುದರಿಂದ ನಾಯಿಗಳ ಕಾಟ ಹೆಚ್ಚಾಗಿ ಅಕ್ಕಪಕ್ಕದ ಜಮೀನಿಗೆ ರೈತರು ಹೋಗಲು ತೊಂದರೆಯಾಗುತ್ತಿದೆ. ಸಂಗ್ರಹಿಸಿದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಲು ಕ್ರಮ ಕೈಗೊಳ್ಳಬೇಕಾದ ಪಂಚಾಯಿತಿ ಅಧಿಕಾರಿಗಳೇ ನಿಯಮವನ್ನು ಪಾಲಿಸದೆ ಇರುವುದು ಸೂಚನೆಯ ಸಂಗತಿಯಾಗಿದೆ.

ಈ ಕುರಿತು ಕೆ ಪಿ ದೊಡ್ಡಿ ಗ್ರಾಮದ ಯೋಗೇಶ್ ಎಂಬುವವರು ಭಾರತಿನಗರ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯತಿಯಲ್ಲಿ ಪ್ರತಿ ಸೋಮವಾರ ಸಿಇಓ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕುಂದು ಕೊರತೆ ಸಭೆಯಲ್ಲಿ ದೂರು ನೀಡಿದ್ದಾರೆ.
ಸಮಸ್ಯೆಯ ಬಗ್ಗೆ ಜನರ ಧ್ವನಿ ಯೊಂದಿಗೆ ಮಾತನಾಡಿದ ಯೋಗೇಶ್ ಹಲವಾರು ತಿಂಗಳುಗಳಿಂದ ಪಂಚಾಯಿತಿ ಅಧಿಕಾರಿಗಳೇ ಕಸವನ್ನು ತಂದು ಸ್ವಚ್ಛ ಸಂಕೀರ್ಣದ ಸುತ್ತಮುತ್ತ ಸುರಿಯುತ್ತಿದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರು ಸಹ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು. ಕಸವನ್ನು ತಂದು ಸುರಿತ್ತಿರುವುದರಿಂದ ಕಸದ ರಾಶಿಯ ತುಂಬಿದ್ದು ನಾಯಿಗಳ ಕಾಟವು ಹೆಚ್ಚಾಗಿದೆ, ನಾಯಿಗಳನ್ನು ಬೇಟೆಯಾಡಲು ಚಿರತೆಯೂ ಸಹ ಓಡಾಡುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದರಿಂದಾಗಿ ರೈತರು ತಮ್ಮ ತಮ್ಮ ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಕೂಡಲೇ ಪಂಚಾಯತಿ ಅಧಿಕಾರಿಗಳು ಕಸವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ,ವಿಂಗಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸ್ವಚ್ಛತಾ ಹೀ ಸೇವಾ ಸ್ವಚ್ಛೋತ್ಸವವು ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಸಹ ವ್ಯಾಪ್ತಿಯ ಗ್ರಾಮಗಳಲ್ಲಿ ನಿಯಮತವಾಗಿ ಸ್ವಚ್ಛತೆ ಮಾಡದೇ ಇರುವ ಬಗ್ಗೆ ಹಲವು ವರದಿಗಳು ಪ್ರಕಟವಾಗುತ್ತಿರುವುದನ್ನು ಗಮನಿಸಿದರೆ, ಸ್ವಚ್ಛತಾ ಹೀ – ಸೇವಾ ಸ್ವಚ್ಛೋತ್ಸವವನ್ನು ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಆಚರಣೆ ಮಾಡುತ್ತಿರುವುದು ಫೋಟೊಕ್ಕೂ,ಪ್ರಚಾರಕ್ಕೋ, ಕಾಟಾಚಾರಕ್ಕೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ….?

Leave a Reply

Your email address will not be published. Required fields are marked *

error: Content is protected !!