Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ದುರಾಹಂಕಾರದ ವರ್ತನೆ : ಪಿಡಿಓ ವಿರುದ್ಧ ಸದಸ್ಯೆ ಪ್ರತಿಭಟನೆ

ಕೆ.ಆ‌ರ್.ಪೇಟೆ  ತಾಲ್ಲೂಕಿನ ತೆಂಡೆಕೆರೆ ಗ್ರಾ.ಪಂ ಪಿಡಿಓ ಹಾಗೂ ಕಾರ್ಯದರ್ಶಿ  ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಜನಸಾಮಾನ್ಯರಿಗೆ ಸ್ಪಂದಿಸದೆ,ಚುನಾಯಿತ ಸದಸ್ಯರ ಸ್ಥಾನಕ್ಕೂ ಗೌರವ ನೀಡದೆ ಬೇಜವಾಬ್ದಾರಿ ಹಾಗೂ ದುರಾಹಂಕಾರದ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ ಸದಸ್ಯೆ ಸವಿತಾ ಗೋವಿಂದಶೆಟ್ಟಿ  ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಏಕಾಂಗಿಯಾಗಿ ಕುಳಿತು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.

ಬಳಿಕ ಮಾತನಾಡಿದ ಗ್ರಾ.ಪಂ ಸದಸ್ಯೆ ಸವಿತಾ ಗೋವಿಂದಶೆಟ್ಟಿ ನಮ್ಮ ಗ್ರಾ.ಪಂ ಪಿಡಿಓ ಕುಮಾರ್ ನಾನು ಪ್ರತಿನಿಧಿಸುವ ಮಲ್ನೋನಹಳ್ಳಿ ಗ್ರಾಮದ ಜನರ ಸಮಸ್ಯೆಗೆ ಸ್ಪಂದನೆಯಾಗಿ ಕಾರ್ಯನಿರ್ವಹಿಸದೆ ಸಮಸ್ಯೆ ಹೇಳಲು ಬಂದ ಜನರ ವಿರುದ್ಧ ಅಸಡ್ಡೆ, ಉಡಾಫೆ ಉತ್ತರದ ಜೊತೆಗೆ ನನ್ನ ಗ್ರಾಮದ ಜನರ ಸಮಸ್ಯೆ ಆಲಿಸುವಂತೆ ಮನವಿ ನೀಡಲು ಹೋದರೆ ನನ್ನ ಮನವಿ ಸ್ವೀಕರಿಸಿದೆ ಉಡಾಫೆ ಉತ್ತರ ನೀಡುವ ಮೂಲಕ ದುರಹಂಕಾರದ ವರ್ತನೆ ತೋರುತ್ತಿದ್ದಾರೆ ಎಂದು ದೂರಿದರು.
ಜನಪ್ರತಿನಿಧಿಯಾದ ನನಗೆ ಸ್ಪಂದಿಸದ ಇಂತಹ ಅಧಿಕಾರಿಗಳಿಂದ ಜನಸಾಮಾನ್ಯರ ಅಭಿವೃದ್ಧಿಯಾಗಲು ಸಾಧ್ಯವಾ….?ಎಂದು ಪ್ರಶ್ನಿಸುವಂತಾಗಿದೆ ಕೂಡಲೇ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಅಧಿಕಾರಿಗಳು ಇಂತಹ ದುರಹಂಕಾರಿ ಪಿಡಿಓ ಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಿಡಿಕಾರಿದರು.

ಬಳಿಕ ಗ್ರಾ.ಪಂ ಸದಸ್ಯೆ ಸವಿತಾ ಗೋವಿಂದ ಶೆಟ್ಟಿ ಅವರ ಪ್ರತಿಭಟನೆಗೆ ಮಣಿದು ಕಂಪ್ಯೂಟರ್ ಆಪರೇಟರ್ ಜಗದೀಶ್ ರವರ ಮೂಲಕ ಮನವಿ ಸ್ವೀಕರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!