Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಕಾಲದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಿ – ಗ್ರಾ.ಪಂ ಸದಸ್ಯರ ಒಕ್ಕೂಟ ಅಗ್ರಹ

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಅವಧಿಯು ಶೀಘ್ರದಲ್ಲಿ  ಮುಗಿಯಲಿದ್ದು, ಸರ್ಕಾರ ಸಕಾಲಕ್ಕೆ ಗ್ರಾ.ಪಂ ಚುನಾವಣೆಯನ್ನು ನಡೆಸಲು ಮುಂದಾಗಬೇಕು ಎಂದು ಕರ್ನಾಟಕ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಉಪ್ಪರಕನಹಳ್ಳಿ ನಾಗೇಶ್ ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮಪಂಚಾಯಿತಿ ಚುನಾವಣೆಯನ್ನು ಸರ್ಕಾರವೇ ನಡೆಸಬೇಕು. ಫೆಬ್ರವರಿ 2026ಕ್ಕೆ ಅವಧಿ ಮುಗಿಯುವುದರಿಂದ ಈಗಾಗಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ ಡಿಸೆಂಬ‌ರ್ ಮಾಹೆಯೊಳಗೆ ಚುನಾವಣೆ ನಡೆಯಬೇಕಾಗಿತ್ತು ಎಂದರು.

ಇದುವರೆಗೂ ಸರ್ಕಾರದಿಂದ ಮೀಸಲಾತಿ ಪ್ರಕಟವಾಗಿಲ್ಲ. ಈ ಸಂಬಂಧ ಹಲವು ಗೊಂದಲಗಳು ಸೃಷ್ಟಿಯಾಗಿರುವುದರಿಂದ ಒಕ್ಕೂಟದ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿ ಮೂಲಕ ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದರು.

ಸರ್ಕಾರ ಇನ್ನೂ ಮೀಸಲಾತಿ ಪ್ರಕಟ ಮಾಡಿಲ್ಲ ಎಂದು ಚುನಾವಣಾ ಆಯೋಗವು ಸುದ್ದಿಗೋಷ್ಠಿ ಮೂಲಕ ತಿಳಿಸಿದೆ.
ಡಿಸೆಂಬರ್‌ನಲ್ಲಿ ಚುನಾವಣೆ ನಡೆಸುವುದೇ ಆದರೆ, 45 ದಿನಗಳ ಹಿಂದೆಯೇ ಮೀಸಲಾತಿ ಪ್ರಕಟಿಸಬೇಕಿತ್ತು. ಕ್ಷೇತ್ರಗಳ ವಿಂಗಡನೆ ಮಾಡುವುದು. ಪಕ್ಷದ ಮೂಲಕ ಚುನಾವಣೆ ನಡೆಸುವ ಸಂಬಂಧ ಚರ್ಚೆ ಪ್ರಾರಂಭವಾಗಿದ್ದು. ನಿಗದಿತ ಸಮಯಕ್ಕೆ ಚುನಾವಣೆ ನಡೆಯದಿರುವುದು ಆತಂಕ ಮೂಡಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಚುನಾವಣೆಯೂ ನಿಗದಿ ಸಮಯಕ್ಕೆ ನಡೆಯದಂತಾಗಿದೆ. ಆದ ಕಾರಣ ನ್ಯಾಯಾಲಯದ ಮೂಲಕ ಹೋರಾಟ ನಡೆಸುವ ಘಟನೆಯು ಸಂಭವಿಸಿದೆ. ಗ್ರಾ.ಪಂಚಾಯಿತಿ ಚುನಾವಣೆ ನಿಗದಿತ ಸಮಯಕ್ಕೆ ನಡೆಸದೇ ಹೋದಲ್ಲಿ ಗ್ರಾ.ಪಂಚಾಯಿತಿ ಸದಸ್ಯರು ಹೋರಾಟದ ಹಾದಿ ಹಿಡಿಯಲಿದ್ದು, ಅಗತ್ಯ ಬಿದ್ದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುವುದರ ಜೊತೆಗೆ, ಜನರಿಗೆ ಅಂದೋಲನ  ಮೂಲಕ ಜನ ಜಾಗೃತಿ ಮೂಡಿಸಲು ಒಕ್ಕೂಟವು ಮುಂದಾಗುತ್ತದೆ  ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಎಸ್.ಪ್ರದೀಪ್, ಗೌರವಾಧ್ಯಕ್ಷ ಬಿ.ಎಂ.ಮಹೇಶ್, ಪ್ರಧಾನ ಕಾರ್ಯದರ್ಶಿ ಕೆಂಪೇಗೌಡ, ಉಪಾಧ್ಯಕ್ಷೆ ಸುವರ್ಣಾವತಿ, ಮಾಧ್ಯಮ ಸಲಹೆಗಾರ ಎಂ.ಚಾಮರಾಜು ಇದ್ದರು.

Leave a Reply

Your email address will not be published. Required fields are marked *

error: Content is protected !!