
ಮಂಡ್ಯ : ಬಿಹಾರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ವಿಜಯದ ನಗೆ ಬೀರಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ‌್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ಮಹಾವೀರ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ‌್ಯಕರ್ತರು, ಬಿಹಾರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಅಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್ ಮಾತನಾಡಿ, ಬಿಹಾರ ಚುನಾವಣಾ ಫಲಿತಾಂಶ ಹೊರಬಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ತಂದಿಕೊಟ್ಟಿದೆ. ಕಾಂಗ್ರೆಸ್ ದೇಶಾತ್ಯಂತ ಮತಗಳ್ಳತನ ನಡೆಯುತ್ತಿದೆ ಎಂದು ಆರೋಪಿಸಿ ದೇಶದಾದ್ಯಂತ ಅಭಿಯಾನ ನಡೆಸಿದ್ದರು. ಆದರೆ, ಮತದಾರರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಮತದಾರರು ಎನ್‌ಡಿಎ ಮೈತ್ರಿಕೂಟಕ್ಕೆ ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಮಹಾಘಟಬಂಧನ್ ಪಕ್ಷಗಳು ಮತದಾರರಿಗೆ ಏನೆಲ್ಲಾ ಗೊಂದಲ ಮೂಡಿಸಿದ್ದರೂ ಸಹ ಯಾವುದನ್ನೂ ಲೆಕ್ಕಿಸದೆ ಎನ್‌ಡಿಎ ಮೈತ್ರಿಕೂಟಕ್ಕೆ ಮತ ನೀಡುವ ಮೂಲಕ ಅಭೂತಪೂರ್ವ ಗೆಲುವು ತಂದುಕೊಟ್ಟಿರುವ ಅಲ್ಲಿನ ಮತದಾರರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಇದೇ ವೇಳೆ ಎನ್‌ಡಿಎ ಮೈತ್ರಿಕೂಟದಿಂದ ಆಯ್ಕೆಯಾಗಿರುವ ನಮ್ಮ ಪಕ್ಷದ ಮತ್ತು ಮೈತ್ರಿ ಪಕ್ಷದ ಎಲ್ಲ ನಾಯಕರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಮಾತನಾಡಿ, ಬಿಹಾರ ಚುನಾವಣೆ ಬಿಜೆಪಿಗೆ ದೊಡ್ಡ ಮಟ್ಟದ ಗೆಲುವನ್ನು ತಂದುಕೊಟ್ಟಿದೆ. ಜಂಗಲ್‌ರಾಜ್ಯ ಎಂಬ ಹೆಸರು ಪಡೆದುಕೊಂಡಿದ್ದ ಬಿಹಾರದಲ್ಲಿ ನಿತೀಶ್‌ಕುಮಾರ್ ಅವರ ಆಡಳಿತವೈಖರಿ ಎಲ್ಲವನ್ನೂ ಬದಲಾಣೆ ಮಾಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್‌ಕುಮಾರ್ ಅವರ ಜೋಡಿ ಒಳ್ಳೆಯ ಕೆಲಸ ಮಾಡುವುದರೊಂದಿಗೆ ಅಲ್ಲಿನ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಮನೆಗೊಂದು ಕೆಲಸ ಎಂಬ ಕಿವಿ ಮೇಲೆ ಹೂ ಮುಡಿಸುವ ಕೆಲಸವನ್ನು ಮಹಾಘಟಬಂಧನ್ ಮಾಡಿತ್ತು. ಇದು ಸಾಧ್ಯವಾಗದ ಮಾತು. ಆದರೂ ಮತದಾರರು ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಎಂದರು.
ಕರ್ನಾಟಕದಲ್ಲಿ ಟನ್ ಕಬ್ಬಿನ ಬೆಲೆಯನ್ನು 100 ರೂ. ಹೆಚ್ಚಳ ಮಾಡುವಂತೆ ರೈತರು ಪ್ರತಿಭಟನೆ ನಡೆಸಿದ್ದರು. ಆದರೆ ಸರ್ಕಾರ ಅದನ್ನು ಮಾಡದ ಕಾರಣ ರೈತರ ಕಟ್ಟೆ ಒಡೆದಿದೆ. ಇದರಿಂದ ಏನೆಲ್ಲಾ ಆಗಿದೆ ಎಂಬುದನ್ನು ರಾಜ್ಯದ ಜನತೆ ನೋಡಿದ್ದಾರೆ. ಇನ್ನಾದರೂ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮುಂದಿನ ಚುನಾವಣೆಯಲ್ಲಿ ಮಂಡ್ಯದಲ್ಲೂ ಸಹ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಪ್ರಧಾನ ಕಾರ‌್ಯದರ್ಶಿ ವಿವೇಕ್, ನಗರ ಅಧ್ಯಕ್ಷ ವಸಂತ್‌ಕುಮಾರ್, ಗ್ರಾಮಾಂತರ ಅಧ್ಯಕ್ಷ ಭೀಮೇಶ್, ಮುಖಂಡರಾದ ಸಿ.ಟಿ. ಮಂಜುನಾಥ್, ನಾಗಣ್ಣ ಮಲ್ಲಪ್ಪ, ಹೊಸಹಳ್ಳಿ ಶಿವು, ಶಿವಕುಮಾರ್ ಆರಾಧ್ಯ, ಆನಂದ, ಮಹಂತಪ್ಪ, ವಿನಯ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿ ಸಿಹಿ ವಿತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Leave a Reply