Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ದಾಖಲಾತಿಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿ,ಸಂರಕ್ಷಣೆ ಮಾಡಿ – ಇಓ ಲೋಕೇಶ್ ಮೂರ್ತಿ

ಗ್ರಾ.ಪಂಗಳಲ್ಲಿ ಇ-ಸ್ವತ್ವಗಳು ಹಾಗೂ ಹಣಕಾಸು ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಕ್ರಮಬದ್ಧ ವಾಗಿ ನಿರ್ವಹಿಸಿ ಸಂರಕ್ಷಣೆ ಮಾಡುವಂತೆ ಮಂಡ್ಯ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ ಮೂರ್ತಿ ತಾಲೂಕಿನ ಎಲ್ಲಾ ಗ್ರಾಪಂಗಳಿಗೆ ಪತ್ರ ಬರೆದಿದ್ದಾರೆ.

ಮಂಡ್ಯ ತಾಲೂಕಿನ ಇಂಡುವಾಳು ಗ್ರಾಪಂಸೇರಿದಂತೆ ಹಲವಾರು ಗ್ರಾಪಂಗಳಲ್ಲಿ ಇ-ಸ್ವತ್ತುಗಳಿಗೆ ಸಂಬಂಧಿಸಿದಂತೆ ದಾಖಲಾತಿ ಹಾಗೂ ಕಡತಗಳನ್ನು ಕ್ರಮಬದ್ಧವಾಗಿ ನಿರ್ವಹಿಸದಿರುವುದು ಕಂಡುಬಂದಿದ್ದು, ಇದು ಗಂಭೀರ ಸ್ವರೂಪದ ಕರ್ತವ್ಯ ನಿರ್ಲಕ್ಷ್ಯವಾಗಿದೆ. ಗ್ರಾಪಂಗಳಲ್ಲಿ ನಿರ್ವಹಿಸಲ್ಪಡುವ ಆಸ್ತಿಗಳ ಇ-ಸ್ವತ್ತು ಸೃಜನೆಗೆ ಸಂಬಂಧಿ ಸಿದಂತೆ ದಾಖಲೆಗಳು, ಸ್ವತ್ತಿನ ಮಾಲೀಕತ್ವ, ಪರಭಾರೆ ಹಾಗೂ ಹಕ್ಕುಗಳ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳಾಗಿವೆ. ಇವುಗಳನ್ನು ಕ್ರಮಬದ್ಧವಾಗಿ ನಿರ್ವಹಣೆ ಮಾಡಿ ಸಂರಕ್ಷಿಸುವುದು ಅಧಿಕಾರಿಗಳು ಮತ್ತು ಸಿಬ್ಬಂದಿ ಯ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಹಲವಾರು ಗ್ರಾ.ಪಂಗಳ ವಿವಿಧ ಸಾಲುಗಳ ಲೆಕ್ಕ ಪರಿ ಶೋಧನಾವರದಿಯನ್ನು ಪರಿಶೀಲಿಸಿದಾಗ ಪ್ರತಿಯೊಂದು ವೆಚ್ಚಗಳಿಗೆ ಹಾಗೂ ಪಾವತಿಗಳಿಗೆ ಪೂರಕವಾದ ಓಚರ್ ದಾಖಲೆ ಕ್ರಮಬದ್ದವಾಗಿ ನಿರ್ವಹಿಸಿ ಲೆಕ್ಕ ಪರಿಶೋಧನೆಗೆ ಹಾಜರುಪಡಿಸದೆ ವಸೂಲಾತಿ, ಆಕ್ಷೇಪಣೆ ಕಂಡಿಕೆಗಳು ಬಾಕಿ ಉಳಿಯಲು ಕಾರಣವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಹಾಗಾಗಿ ತಾಲೂಕಿನ ಎಲ್ಲಾ ಗ್ರಾಪಂಗಳು ಇ-ಸ್ವತ್ತು ಗಳಿಗೆ ಸಂಬಂಧಿಸಿದ ಹಾಗೂ ಹಣಕಾಸು ಲೆಕ್ಕಪತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವ್ಯವಸ್ಥಿತವಾದ ರೆಕಾರ್ಡ್ ರೂಮ್‌ನಲ್ಲಿ ರಾಕ್‌ಗಳನ್ನು ಅಳವಡಿಸಿ ಕ್ರಮಬದ್ಧವಾಗಿ ನಿರ್ವಹಿಸಿ ಸಂರಕ್ಷಣೆ ಮಾಡುವಂತೆ ಸೂಚಿಸಿದ್ದಾರೆ.

ಹಣಕಾಸು, ಲೆಕ್ಕಪತ್ರ ನಿರ್ವಹಣೆಗೆ ನಿರ್ದೇಶನ

ಗ್ರಾಪಂನಿಂದ ನಿರ್ವಹಿಸಲಾಗುವ ಪ್ರತಿ ಅಭಿವೃದ್ಧಿ ಕಾಮಗಾರಿಗೂ ಡಿ.ಸಿ.ಬಿಲ್‌ವಾರು ಪ್ರತ್ಯೇಕ ಕಡತ ನಿರ್ವಹಿಸುವುದು. ಕಾಮಗಾರಿಯ ಅನುಮೋದಿತ ಕ್ರಿಯಾಯೋಜನೆ, ಅಂದಾಜು ವೆಚ್ಚ, ಬಿಲ್ ಹಾಗೂ ಆಳತೆ ಪುಸ್ತಕದ ದೃಢೀಕೃತ ಪ್ರತಿ ಹಾಗೂ ಬಿಲ್ ಪಾವತಿಸಿರುವ ವಿವರಗಳನ್ನೊಳಗೊಂಡ ಮಾಹಿತಿಗಳನ್ನು ಕಡತದಲ್ಲಿಯೇ ನಿರ್ವಹಿಸುವುದು.
ಯಾವುದೇ ಸಾಮಗ್ರಿ ಖರೀದಿ, ಸರಕು ಸೇವೆಗಳ ಬಳಕೆ, ಇತರೆ ವಿಷಯಗಳನ್ನೂ ಅದರಲ್ಲಿಯೇ ದಾಖಲಿಸುವುದು. ಎಲ್ಲಾ ಲೆಕ್ಕಪತ್ರಗಳ ದಾಖಲೆಗಳು ಹಾಗೂ ವರದಿಗಳನ್ನು ಕಡ್ಡಾಯವಾಗಿ ಅಭಿಲೇಖಾಲಯದಲ್ಲೇ ನಿರ್ವಹಣೆ ಮಾಡಿ, ದಾಖಲೆಗಳನ್ನು ಸಂರಕ್ಷಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಇಓ ಲೋಕೇಶ್ ಮೂರ್ತಿ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!