
ಮಂಡ್ಯ: ದುದ್ದ ಗ್ರಾಪಂ ಪಿಡಿಒ ಶಿವಲಿಂಗೇಗೌಡ ಅವರನ್ನು ಅಮಾನತು ಮಾಡಬೇಕು ಮತ್ತು ಶಾಲಾ-ಕಾಲೇಜು ಸಮೀಪವೇ ತೆರೆದಿರುವ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಮುಚ್ಚಿಸುವಂತೆ ಆಗ್ರಹಿಸಿ ದುದ್ದ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮಂಡ್ಯ ತಾಲೂಕಿನ ದುದ್ದ ಗ್ರಾಮದಲ್ಲಿರುವ ದುದ್ದ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮಸ್ಥರು ಜಮಾವಣೆಗೊಂಡು ಗ್ರಾಮದ ರಸ್ತೆ ಹಂಚಿನಲ್ಲಿಯೇ ನೂತನವಾಗಿ ಬಾರ್ ಓಪನ್ ಮಾಡಿರುವುದನ್ನು ವಿರೋಧಿಸಿ ಹಾಗೂ ಭಾರ್ ತೆರೆಯಲು ಅನುಮತಿ ನೀಡಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿದರು.
ವಿಷಯ ತಿಳಿದ ತಕ್ಷಣೇ ಸ್ಥಳಕ್ಕೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಮೇನಕಾ ದೇವಿ, ಯೋಜನಾ ಅಧಿಕಾರಿ ವೆಂಕಟರಾವ್, ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಮಾಹಿತಿಯನ್ನು ಪಡೆದು ನಂತರ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ತೇಜಸ್, pdo ಶಿವಲಿಂಗೇಗೌಡ ಅವರು ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಯಾವುದೇ ಮಾಹಿತಿ ನೀಡದೆ ಬಾರ್ ನಡೆಸಲು ಲೈಸೆನ್ಸ್ ನೀಡಿರುವುದು ಕಂಡು ಬಂದಿದೆ, ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಕೇಳಿದರೆ ಹಲವು ದಿನಗಳಿಂದ ಕೊಡುತ್ತಿಲ್ಲ ಎಂದು ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.
ಪಂಚಾಯಿತಿ ಅನುಮತಿ ಇಲ್ಲದೆ ಯಾವುದೇ ವಾಣಿಜ್ಯ ಮಳಿಗೆ ಆಗಲಿ ಅಥವಾ ಅಂಗಡಿಗಳಿಗೆ ಲೈಸೆನ್ಸ್ ಪತ್ರವಿಲ್ಲದೆ ತೆರೆಯದೆ ಸಾಧ್ಯವಿಲ್ಲ ಶಾಲೆ ಮತ್ತು ಕಾಲೇಜು ಹಾಗೂ ಕುಟುಂಬಗಳು ವಾಸಿಸುವ ಜಾಗದ ಸಮೀಪದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಪಂಚಾಯಿತಿಗೆ ನೀಡಿರುವ ದಾಖಲಾತಿಯಲ್ಲಿ ಸವಿತಾ ಬೋರ್ಡ್ಜಿಂಗ್ ಲಾಡ್ಜಿಂಗ್ ಮತ್ತು ರೆಸ್ಟೋರೆಂಟ್ ನಡೆಸಲು ಅನುಮತಿಗಾಗಿ ಪತ್ರ ಸಲ್ಲಿಸಿದ್ದಾರೆ ಆದರೆ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಕಿಡಿ ಕಾರಿದರು.
ಬಾರ್ ನಡೆಸಲು ಅನುಮತಿಯನ್ನು ಪಂಚಾಯಿತಿಯಿಂದ ಅಬಕಾರಿ ಇಲಾಖೆಯವರು ಪಡೆದು ಅವರಿಗೆ ನೀಡಬೇಕಿದೆ ಆದರೆ ಪಿಡಿಒ ಶಿವಲಿಂಗೇಗೌಡ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಪ್ಪು ಎಸಗಿರುವ ಪಿಡಿಒ ಶಿವಲಿಂಗೇಗೌಡ ಅವರನ್ನು ಅಮಾನತು ಮಾಡಬೇಕು ಇಲ್ಲದಿದ್ದರೆ ತಾಲೂಕು ಪಂಚಾಯಿತಿ ಇಓ ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿಸಸ್ಥರಿಗೆ ಶಿಕ್ಷೆ ನೀಡುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಅವರು ಭೇಟಿ ನೀಡಿ ನಮಗೆ ನ್ಯಾಯ ಕೊಡಿಸುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ ಎಂದು ತಿಳಿಸಿದರು.
ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರು, ತಾಲೂಕು ಪಂಚಾಯಿತಿ ಕಚೇರಿಯ AD ಅಧಿಕಾರಿ ಮೇನಕಾ ದೇವಿ, ಯೋಜನಾ ಅಧಿಕಾರಿ ವೆಂಕಟರಾವ್,
ಪಿಡಿಓ ಶಿವಲಿಂಗೇಗೌಡ, ಕಾರ್ಯದರ್ಶಿ ಎಸ್.ಪಿ ನಾರಾಯಣ ಹಾಜರಿದ್ದರು.
ಪ್ರತಿಭಟನಾ ಧರಣಿಯಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯ ಶ್ರೇಯಸ್ ಹಾಗೂ ಬಸವಲಿಂಗಪ್ಪ, ಶ್ವೇತಾ , ಬಸಮ್ಮಣಿ, ಗ್ರಾಮದ ಮುಖಂಡರಾದ ನರಸಿಂಹೇಗೌಡ, ಡಿ.ಮಹೇಶ್, ಯೋಗನರಸಿಂಹಗೌಡ, ಮಾಜಿ ಅಧ್ಯಕ್ಷೆ ಗಜಲಕ್ಷ್ಮಿ, ಪೂರ್ಣಿಮಾ, ಕಮಲ, ಜ್ಯೋತಿಶಿವು , ಯಜಮಾನರು ಅಕ್ಕ ಪಕ್ಕದ ಗ್ರಾಮಸ್ಥರು ಸೇರಿದಂತೆ ಹಲವರು ಭಾಗವಹಿಸಿದ್ದರು .

Leave a Reply