Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಪಿಎಸ್ಐ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಎಸ್ಪಿ  ಗೆ ದೂರು

ಮಂಡ್ಯ : ಪೊಲೀಸ್ ಠಾಣೆಗೆ ಹೋಗಿದ್ದ ಪತಿ, ಪತ್ನಿ ಹಾಗೂ ಮಗನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಲ್ಲಾಘಟ್ಟ ಗ್ರಾಮಸ್ಥರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಆಗಮಿಸಿದ ಗ್ರಾಮಸ್ಥರು, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ತಿಮ್ಮಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಕೆರಗೋಡು ಪಿಎಸ್‌ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಗ್ರಾಮದ ಮಂಗಳಮ್ಮ, ಗಿರೀಗೌಡ ಹಾಗೂ ಇವರ ಮಗ ಅವಿರಾಜ್ ಮೇಲೆ ಕೆರಗೋಡು ಪಿಎಸ್‌ಐ ಕಾಶಿನಾಥ್ ಬಗಲಿ ಅವರು ಬೂಟು ಕಾಲಿನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಗಿರೀಗೌಡನ ಒಂದು ಹಲ್ಲು ಮುರಿದಿದೆ. ಕಪಾಳ, ಸೊಂಟ ಮತ್ತಿತರ ಕಡೆಗಳಲ್ಲಿ ತೀವ್ರವಾಗಿ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್‌ಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಮಂಗಳಮ್ಮ, ಗಿರೀಗೌಡ ಹಾಗೂ ಅವಿರಾಜ್ ಅವರನ್ನು ಠಾಣೆಗೆ ಕರೆಯಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದೂ ಅಲ್ಲದೆ, ಜಮೀನಿನ ಕಡೆಗೆ ಹೋದಲ್ಲಿ ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಜಮೀನು ವಿವಾದ ನ್ಯಾಯಾಲಯದಲ್ಲಿದ್ದರೂ ಸಹ ಅನಗತ್ಯವಾಗಿ ಪಿಎಸ್‌ಐ ನಮ್ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ವಯೋವೃದ್ಧರಾದ ಗಿರೀಗೌಡರ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮಹಿಳೆ ಎಂಬುದನ್ನೂ ಲೆಕ್ಕಿಸದೆ ನನ್ನ ಮೇಲೂ ಸಹ ಬೂಟು ಕಾಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಪಿಎಸ್‌ಐ ಕಾಶಿನಾಥ ಬಗಲಿ ಅವರಿಂದ ಜೀವಬೆದರಿಗೆ ಇರುವ ಕಾರಣ ತಕ್ಷಣ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಗ್ರಾಮಸ್ಥರಾದ ಮಂಗಳಮ್ಮ, ಎಸ್.ಪಿ. ಶಿವಪ್ಪ, ರಮೇಶ, ಜಯಶಂಕರ, ಸಿದ್ದೇಗೌಡ, ರಮೇಶ, ನರಸಮ್ಮ, ಭವಾನಿ, ನಾಥಮ್ಮ, ಗೌರಮ್ಮ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!