Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಅಪರಾಧ,ಮಾದಕ ವಸ್ತುಗಳ ಮಾರಾಟ ವಿರುದ್ಧ ಕಠಿಣ ಕ್ರಮ :ಎಸ್ಪಿ ಶೋಭರಾಣಿ

ಮಂಡ್ಯ : ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆ, ಮಾದಕ ವಸ್ತುಗಳ ಮಾರಾಟ, ಪುಡಿ ರೌಡಿಗಳ ಹಾವಳಿಯನ್ನು  ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದರೊಂದಿಗೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭರಾಣಿ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಔಪಚಾರಿಕವಾಗಿ ಮಾತನಾಡಿದ ಅವರು, ಮಂಡ್ಯ ನಗರ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಲ್ಲಿ ಸುಗಮ ಸಂಚಾರಕ್ಕೆ ಇರುವಂತಹ ಸಮಸ್ಯೆಗಳು ಇರುವುದು ಕಂಡುಬಂದಿದ್ದು, ಸುಗಮ ಸಂಚಾರಕ್ಕೆ ಕುರುಕ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ವಹಿಸಲಾಗವುದು ಎಂದರು.
ಅಪರಾಧ ಪ್ರಕರಣಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲಾಗುವುದು. ಪುಡಿ ರೌಡಿಗಳ ಹಾವಳಿ ಕುರಿತಂತೆ ಮಾಹಿತಿ ಪಡೆದ ಅವರು, ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕಡಿವಾಣ ಹಾಕಲಾಗುವುದು  ಎಂದು ಹೇಳಿದರು.
ಮಾದಕ ವಸ್ತುಗಳು ಹಾಗೂ ಇಸ್ಪೀಟ್ ದಂಧೆ, ಕ್ರಿಕೆಟ್ ಬೆಟ್ಟಿಂಗ್, ಸರಗಳ್ಳತನಗಳ ಬಗ್ಗೆ ಸಾರ್ವಜನಿಕರು ತಮಗೆ ಮಾಹಿತಿ ನೀಡಿದಲ್ಲಿ ತಕ್ಷಣ ಅಗತ್ಯ ಕ್ರಮ ಕೈಗೊಂಡು ಅದನ್ನು ಮಟ್ಟ ಹಾಕಲಾಗುವುದು. ಮಾಹಿತಿ ನೀಡುವವರ ಹೆಸರನ್ನೂ ಸಹ ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.
ಸಿಸಿಟಿವಿ ಕ್ಯಾಮೆರಾ ಅಳವಡಿಕೆ :
ನಗರ ಮತ್ತು ಜಿಲ್ಲಾದ್ಯಂತ ಪ್ರಸ್ತುತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಗಳ ಕಾರ‌್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಅವರು, ಕೆಲವು ಕ್ಯಾಮೆರಾಗಳ ವಾರ್ಷಿಕ ನಿರ್ವಹಣೆ ಅವಧಿ ಮುಗಿದಿದ್ದು, ಈ ಬಗ್ಗೆ ಸಂಬಂಧಿದವರಿಂದ ಮಾಹಿತಿ ಪಡೆದು ಸರಿಪಡಿಸಲಾಗುವುದು ಎಂದರು.
ಸಾರ್ಜಜನಿಕ ಭದ್ರತಾ ಕಾಯಿದೆಯನ್ವಯ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬಹುದು ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗ್ರಾಮಾಂತರ ಪ್ರದೇಶಗಳು ಮತ್ತು ಹಳ್ಳಿಗಳಲ್ಲಿರುವ ಪೆಟ್ಟಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಅಬಕಾರಿ ಜಿಲ್ಲಾ ಅಧಿಕಾರಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರೆಸ್ಟೋರೆಂಟ್‌ಗಳಲ್ಲಿ ಅಕ್ರಮ ಮದ್ಯ ಸರಬರಾಜು ಮಾಡುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರು  ಪೊಲೀಸ್ ಠಾಣೆಗೆ ದೂರು ನೀಡಲು ಬಂದಲ್ಲಿ ಅವರ ಸಮಸ್ಯೆ ಕೇಳಿ ದೂರು ಪಡೆದು ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ವರ್ತಿಸಿ ನ್ಯಾಯ ಕೊಡಿಸುವ ಬಗ್ಗೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಡಿವೈಎಸ್ಪಿ ಹಾಗೂ ಅಪರ ಪೊಲೀಸ್ ಅಧೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇದೆ. ಜೊತೆಗೆ ಅಂದು ಕಾವೇರಿ ಸಮಸ್ಯೆ ಉಲ್ಬಣಗೊಂಡಿದ್ದ ಸಂದರ್ಭದಲ್ಲಿ ನಾನು ಕರ್ತವ್ಯದಲ್ಲಿದ್ದೆ. ಆದರೆ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಪ್ರಸ್ತುತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಅವುಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಬಳ್ಳಾರಿ ಜಿಲ್ಲೆಯ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದು ತಮಗೆ ಖುಷಿ ನೀಡಿದೆ. ಅಲ್ಲಿನ ಜನರು ಪ್ರೀತಿ ವಿಶ್ವಾಸದಿಂದ ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!