
ಕೆ.ಆರ್. ಪೇಟೆ ಪಟ್ಟಣದ ಸಿಪಿಐ ಸುಮಾ ರಾಣಿ ಸಾರ್ವಜನಿಕರ ಮೇಲೆ ನಡೆಸುತ್ತಿರುವ ದರ್ಪ, ದೌರ್ಜನ್ಯ ಹಾಗೂ ಬೆದರಿಕೆ ವರ್ತನೆಯನ್ನು ಖಂಡಿಸಿ, ಇಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಕಾರ್ಯಕರ್ತರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರಿಗೆ ದೂರು ನೀಡಿದರು.
ಕೆ.ಆರ್. ಪೇಟೆಯಲ್ಲಿ ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಸಿಪಿಐ ಸುಮಾ ರಾಣಿ, ಅಲ್ಲಿನ ಯುವಕ ಚಂದ್ರು ಎಂಬುವವರ ಮೇಲೆ ಏಕವಚನದಲ್ಲಿ ದರ್ಪ ಪ್ರದರ್ಶಿಸಿದ್ದಾರೆ. “ನೀನು ವಿಡಿಯೋ ಮಾಡಿದರೆ ನಿನ್ನ ಮೇಲೆ ಸುಳ್ಳು ಕೇಸ್ ಹಾಕಿ ನಿನ್ನ ಜೀವನವನ್ನೇ ಹಾಳು ಮಾಡುತ್ತೇನೆ, ಡೈರಿಯಲ್ಲಿ ನಿನ್ನ ಹೆಸರನ್ನು ಈಗಾಗಲೇ ಕೆತ್ತಿದ್ದೇನೆ” ಎಂದು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಗೌಡ ಹಾಗೂ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ಹಾಗೂ ಪದಾಧಿಕಾರಿಗಳು ಇಂದು ಎಸ್‌ಪಿ ಅವರನ್ನು ಭೇಟಿ ಮಾಡಿ ಪೊಲೀಸರು ಜನಸ್ನೇಹಿಯಾಗಿರಬೇಕು. ಆದರೆ ಸುಮಾ ರಾಣಿ ಸಮವಸ್ತ್ರವಿಲ್ಲದೆಯೇ ಕರ್ತವ್ಯಕ್ಕೆ ಹಾಜರಾಗಿ ಜನರನ್ನು ಹೆದರಿಸುತ್ತಿದ್ದಾರೆ. ಹಣ ಪಡೆದು ಸಿವಿಲ್ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಿ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಾನೂನುಬದ್ಧ ಹೋರಾಟಗಾರರ ಮೇಲೆ ದಬ್ಬಾಳಿಕೆ ಎಸಗುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಇಂತಹ ಅಧಿಕಾರಿಗಳಿಂದ ಇಡೀ ಪೊಲೀಸ್ ಇಲಾಖೆಗೆ ಅವಮಾನವಾಗುತ್ತಿದೆ. ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಸಿಪಿಐ ಸುಮಾ ರಾಣಿ ವಿರುದ್ಧ ಶಿಸ್ತು ಕ್ರಮ ಜರುಗಿಸದಿದ್ದರೆ, ಕೆ.ಆರ್. ಪೇಟೆಯಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಈಗಾಗಲೇ ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ರಮೇಶ್‌ಗೌಡ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ, ಕೆಆರ್ ಪೇಟೆ ತಾಲೂಕು ಅಧ್ಯಕ್ಷ ನಾಗರಾಜು ಶಿವಪುರ, ಯುವ ಘಟಕ ಜಿಲ್ಲಾಧ್ಯಕ್ಷ ಪ್ರಮೋದ್, ಮಂಡ್ಯ ತಾಲೂಕು ಅಧ್ಯಕ್ಷ ರವೀಂದ್ರ, ಜಯರಾಮ್, ದೀಪಿಕಾ ಹಾಗೂ ಹಲವು ಪದಾಧಿಕಾರಿಗಳು ಹಾಜರಿದ್ದರು.

Leave a Reply