Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ವಾಹನ ನಿಲ್ದಾಣವಾದ ಅಂಡರ್‌ಪಾಸ್‌..!! ಸಾರ್ವಜನಿಕರಿಗೆ ತೊಂದರೆ..?

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಅಂಡರ್‌ಪಾಸ್‌ಗಳು ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡಿವೆ. ಅಂಡರ್‌ಪಾಸ್‌ನ ಎರಡೂ ಕಡೆ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ. ಆದರೂ, ಇದುವರೆಗೂ ಇದರ ಬಗ್ಗೆ ಪೊಲೀಸರು ಗಮನಹರಿಸಿಲ್ಲವೆಂದು ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ.

ಮಂಡ್ಯ ತಾಲೂಕಿನ ಬೂದನೂರು, ಇಂಡುವಾಳು ಸೇರಿದಂತೆ ಹಲವೆಡೆ ನಿರ್ಮಿಸಿರುವ ಅಂಡರ್‌ಪಾಸ್ ಗಳಲ್ಲಿ ಹಲವರು ಮನೆಯ ಬಳಿ ಜಾಗವಿಲ್ಲವೆಂಬ ಕಾರಣಕ್ಕೂ, ನೆರಳಿದೆ ಎಂಬ ಕಾರಣಕ್ಕೂ ಕಾರುಗಳು, ಗೂಡ್ಸ್‌ ಟೆಂಪೋ, ಮಿನಿ ಕ್ಯಾಂಟರ್‌ಗಳನ್ನು ಅಲ್ಲಿ ನಿಲ್ಲಿಸುತ್ತಿದ್ದಾರೆ. ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದು ಅಪಘಾತ ಸಂಭವಿಸುವುದಕ್ಕೆ ಎಡೆ ಮಾಡಿಕೊಟ್ಟಿದೆ.
ಅಂಡರ್‌ಪಾಸ್‌ ಗಳನ್ನು ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಬರುವ ಒಂದು ಕಡೆಯಿಂದ ಮತ್ತೊಂದು ಕಡೆಯ ಗ್ರಾಮಗಳಿಗೆ ತೆರಳುವ ವಾಹನಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಅಲ್ಲಿ ಯಾವುದೇ ವಾಹನಗಳನ್ನೂ ನಿಲ್ಲಿಸುವಂತಿಲ್ಲ.
ಇಂತಹದೊಂದು ಸಾಮಾನ್ಯ ಜ್ಞಾನವಿಲ್ಲದವರು ನಿಯಮಬಾಹಿರವಾಗಿ ಅಂಡರ್‌ಪಾಸ್‌ಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ಒಂದು ಕಡೆ ರಸ್ತೆಯಿಂದ ಮತ್ತೊಂದು ಕಡೆಯ ರಸ್ತೆಗೆ ಹೋಗುವ ವಾಹನಗಳಿಗೆ ತೀವ್ರ ಅಡಚಣೆಯಾಗುತ್ತಿದೆ. ಈ ಅಂಡರ್‌ಪಾಸ್‌ಗಳಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.

ಅಂಡರ್‌ಪಾಸ್‌ಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿರುವ ಅರಿವಿಲ್ಲದೆ ಎಷ್ಟೋ ವಾಹನಗಳು ಅಂಡರ್‌ಪಾಸ್ ಒಳಗೆ ನುಗ್ಗಿಬಂದಿವೆ. ತಕ್ಷಣವೇ ವಾಹನಗಳನ್ನು ನೋಡಿ ಗಾಬರಿಯಿಂದ ಬ್ರೇಕ್‌ಹಾಕಿ ನಿಲ್ಲಿಸಿರುವ ನಿದರ್ಶನಗಳೂ ಸಾಕಷ್ಟಿವೆ. ಅಂಡರ್‌ಪಾಸ್‌ನ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ವಾಹನಗಳು ಸುಗಮವಾಗಿ ಸಂಚರಿಸುವುದಕ್ಕೂ ಸಾಧ್ಯವಾಗುತ್ತಿಲ್ಲೆಂಬ ಕೇಳಿಬರುತ್ತಿವೆ.

ರಾತ್ರಿ ಸಮಯದಲ್ಲೂ ಖಾಸಗಿ ವಾಹನಗಳು ಅಲ್ಲೇ ನಿಲ್ಲುತ್ತಿರುವುದೂ ಅಪಘಾತಗಳು ಸಂಭವಿಸುವುದಕ್ಕೆ ಎಡೆಮಾಡಿಕೊಟ್ಟಿವೆ. ನೆರಳಿದೆ ಎಂಬಕಾರಣಕ್ಕೋ, ಅಂಡರ್‌ಪಾಸ್‌ವಿಶಾಲವಾಗಿದೆ ಎಂಬ ಕಾರಣಕ್ಕೋ ಖಾಸಗಿ ವ್ಯಕ್ತಿಗಳು ತಮ್ಮ ವಾಹನಗಳನ್ನು ತಂದು ನಿಲ್ಲಿಸಿ ಹೋಗುತ್ತಿದ್ದಾರೆ. ವಾಹನಗಳನ್ನು ನಿಲ್ಲಿಸುವುದರಿಂದ ಸ್ಥಳದಲ್ಲಿ ಉಂಟಾಗಬಹುದಾದ ಅವ್ಯವಸ್ಥೆ, ವಾಹನಗಳ ಸಂಚಾರಕ್ಕೆ ಅಡಚಣೆ, ಅಪಘಾತಗಳು ಸಂಭವಿಸಬಹುದೆಂಬ ಆತಂಕದ ಅರಿವಿಲ್ಲದೆ ನಿಲ್ಲಿಸುತ್ತಿದ್ದಾರೆ. ಈಗಲಾದರೂ ಪೊಲೀಸರು,ಸಂಬಂಧಪಟ್ಟ ಅಧಿಕಾರಿಗಳು ಅಪಘಾತ-ಅನಾಹುತಗಳು ಸಂಭವಿಸುವ ಮುನ್ನವೇ  ಎಚ್ಚೆತ್ತುಕೊಂಡು ಖಾಸಗಿ ವಾಹನಗಳನ್ನು ಅಂಡರ್ ಪಾಸ್‌ನಿಂದ ತೆರವು ಮಾಡಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!