Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಂಕ್ರಾಂತಿ ಎಂದರೆ ಶ್ರಮ,ಸಂಸ್ಕೃತಿ, ಸಹಭಾಗಿತ್ವದ ಸುಂದರ ಸಂಗಮ – ಡಾ.ಈ.ಸಿ ನಿಂಗರಾಜ್ ಗೌಡ

ಮಂಡ್ಯ :ಸಂಕ್ರಾಂತಿ ಎಂದರೆ ಶ್ರಮ, ಸಂಸ್ಕೃತಿ, ಸಹಭಾಗಿತ್ವದ ಸುಂದರ ಸಂಗಮವಾಗಿದ್ದು,  ಈ ಹಬ್ಬದಲ್ಲಿ ಎಳ್ಳು–ಬೆಲ್ಲದ ಸಿಹಿ, ಕಬ್ಬಿನ ಮಧುರತೆ, ಹೊಸ ಬೆಳೆಯ ಸಮೃದ್ಧಿ ಪ್ರತಿಯೊಬ್ಬರ ಜೀವನವನ್ನೂ ತುಂಬಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ ನಿಂಗರಾಜ್ ಗೌಡ ತಿಳಿಸಿದರು.

ಭಾನುವಾರ ನಗರದ ಕರ್ನಾಟಕ ಸಂಘ ಆವರಣದ ಕೆ.ವಿ.ಶಂಕರಗೌಡ ಶಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ, 15ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯನ್ನು ಸುಗ್ಗಿ ಅಥವಾ ಸುಗ್ಗಿ ಹಬ್ಬ ಎಂದು ಕರೆಯುತ್ತಾರೆ. ಇದು ಹೊಸ ಬೆಳೆ ಕೊಯ್ಲು, ಸೂರ್ಯನ ಉತ್ತರಾಯಣ ಪ್ರಾರಂಭದ ಸಂಕೇತವಾಗಿದೆ. ರೈತರೊಡನೆ ಎಲ್ಲರೂ ಪ್ರಕೃತಿ, ಭೂಮಿ, ಸೂರ್ಯನಿಗೆ ಕೃತಜ್ಞತೆ ಸಲ್ಲಿಸುವ ಸಮೃದ್ಧಿಯ ಹಬ್ಬವಾಗಿ ಇದನ್ನು ಆಚರಿಸುತ್ತೇವೆ ಎಂದು ಡಾ.ಈ.ಸಿ. ನಿಂಗರಾಜ್ ಗೌಡ ರವರು ತಿಳಿಸಿದರು.

ಎಳ್ಳು–ಬೆಲ್ಲ ಹಂಚಿಕೊಳ್ಳುವುದು, ಗಾಳಿಪಟ ಹಾರಿಸುವುದು, ಕಿಚ್ಚು ಹಾಯಿಸುವುದು, ಬಂಧು–ಮಿತ್ರರ ಮನೆಗಳಿಗೆ ತೆರಳಿ ಶುಭಾಶಯ ಹೇಳಿಕೊಳ್ಳುವುದು ಸಂಕ್ರಾಂತಿ ಸಂಭ್ರಮದ ಭಾಗವಾಗಿದೆ. ಎಳ್ಳು, ಬೆಲ್ಲ, ಕಡಲೆ, ಒಣಕೋಬ್ಬರಿ ಮಿಶ್ರಣವೇ ಎಳ್ಳು–ಬೆಲ್ಲ. ಇದನ್ನು ಹಂಚಿಕೊಳ್ಳುತ್ತಾ “ಎಳ್ಳು ಬೆಲ್ಲ ತಿನ್ನಿ, ಒಳ್ಳೆ ಮಾತಾಡಿ” ಎಂದು ಜನರು ಹೇಳುತ್ತಾರೆ.  ಸಿಹಿಯಾದ ಈ ಮಿಶ್ರಣದಂತೆಯೇ ಸಂಬಂಧಗಳೂ ಸಿಹಿಯಾಗಲಿ, ದ್ವೇಷಗಳು ದೂರವಾಗಿ, ಸ್ನೇಹ–ಸೌಹಾರ್ದ ಹೆಚ್ಚಾಗಲಿ ಎಂಬುದು ಇದರ ಒಳಾರ್ಥವಾಗಿದೆ ಎಂದು ಹೇಳಿದರು.

ಸುಗ್ಗಿ ಸಂಭ್ರಮ ಶುರುವಾಗಿದೆ, ನಿಮ್ಮ ಪ್ರಯತ್ನಗಳೆಲ್ಲ ಫಲ ನೀಡಲಿ, ನಿಮ್ಮ ಜೀವನ ಸಮೃದ್ಧಿಯಿಂದ ತುಂಬಿರಲಿ, ಎಳ್ಳು –ಬೆಲ್ಲದ ಸಿಹಿಯಂತೆ ನಿಮ್ಮ ದಿನಗಳು ಮಧುರವಾಗಲಿ, ಗಾಳಿಪಟಗಳಂತೆ ನಿಮ್ಮ ಕನಸುಗಳು ಎತ್ತರಕ್ಕೆ ಹಾರುವಂತಾಗಲಿ.  ಸಂಕ್ರಾಂತಿ ನಮ್ಮ ನೆಲದ ಹಬ್ಬ. ರೈತನ ಶ್ರಮಕ್ಕೆ ಫಲ ಸಿಕ್ಕಿ  ಸುಗ್ಗಿಯ ಸಂತಸವನ್ನು ಸಂಕ್ರಾಂತಿ ಸಂಭ್ರಮಿಸುತ್ತದೆ ಎಂದರು.

ಹೊಸ ಅಕ್ಕಿ, ಜೋಳ, ಎಳ್ಳು, ಬೆಲ್ಲದ ಸಿಹಿ ಎಲ್ಲವೂ ಕೃತಜ್ಞತೆಯ ಸಂಕೇತವಾಗಿದೆ. ಎತ್ತು-ರಾಸುಗಳಿಗೆ ಅಲಂಕಾರ, ಗಂಗಾ ಪೂಜೆ ಮಾಡುವುದು ಹಬ್ಬದ ಭಾಗವಾಗಿದೆ. ಸಂಕ್ರಾಂತಿ ಎಂದರೆ ಶ್ರಮ, ಸಂಸ್ಕೃತಿ, ಸಹಭಾಗಿತ್ವಗಳ ಸುಂದರ ಸಂಗಮವಾಗಿದೆ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ರವರು ಹೇಳಿದರು.

ಶಾಂತಧೂತ ಭಾರತ ದೇಶ ವಿಶ್ವಕ್ಕೆ ಹಲವು ವಿಚಾರದಲ್ಲಿ ಮಾದರಿಯಾಗಿದೆ. ವಿಶ್ವದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ಆತಂಕ ಸೃಷ್ಟಿಸಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮಾರಣಹೋಮ ಒಂದೆಡೆಯಾದರೆ, ಸ್ವಯಂಘೋಷಿತ ದೊಡ್ಡಣ್ಣ ಎನಿಸಿಕೊಂಡವರು ಒಂದು ದೇಶದ ಅಧ್ಯಕ್ಷರನ್ನೇ ಮಕ್ಕಳನ್ನು ಅಪಹರಿಸಿದಂತೆ ಕಿಡ್ನಾಪ್ ಮಾಡುವುದು ಇರಾನ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ ನಿಜಕ್ಕೂ ಬೇಸರದ ಸಂಗತಿ ಎಂದು ಡಾ.ಈ.ಸಿ. ನಿಂಗರಾಜ್ ಗೌಡ ರವರು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷ ಹಾಗೂ ಖ್ಯಾತ ಇತಿಹಾಸಕಾರ ಡಾ.ಹೆಚ್.ಶ್ರೀಧರ ಮಾತನಾಡಿ, ಕನ್ನಡ ಭಾಷೆಯು ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಚಾರಿತ್ರಿಕ ಭಾಷೆಯಾಗಿದೆ. ಕನ್ನಡ ಭಾಷೆಗೆ ಸರ್ವ ಭಾಷೆಗಳ ಜನರನ್ನು ಆಕರ್ಷಿಸುವ, ಸೆಳೆಯುವ ಆಯಸ್ಕಾಂತದಂತ ಶಕ್ತಿ ಇದೆ. ಅದು ಕನ್ನಡದ ಶಕ್ತಿ ಮತ್ತು ತಾಕತ್ತು ಎಂದು ಪ್ರತಿಪಾದಿಸಿದರು.

ಕನ್ನಡಕ್ಕೆ ಕನ್ನಡವೇ ಸಾಕ್ಷಿ. ಕನ್ನಡ ಭಾಷೆ ಕೇವಲ ಹಾಡು ಭಾಷೆಯಾಗಬಾರದು. ಅದು ಹಸಿವಿನ ಭಾಷೆ. ಉಸಿರಿನ ಭಾಷೆ. ಮನಸ್ಸಿನ ಭಾಷೆ. ಹೃದಯದ ಭಾಷೆ ಹಾಗೂ ಬದುಕಿನ ಭಾಷೆಯಾಗಬೇಕು. ಪ್ರತಿಯೊಬ್ಬ ಕನ್ನಡಿಗನು ತನ್ನ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗಟ್ಟಿ ಮನಸ್ಸು ಮತ್ತು ನಿರ್ಧಾರ ಮಾಡಬೇಕು ಎಂದು ಹೇಳಿದರು.

ಕನ್ನಡ ಭಾಷೆಯು ದಕ್ಷಿಣದ ದ್ರಾವಿಡ ಭಾಷೆಗಳಲ್ಲಿ ಪ್ರಧಾನ ಸ್ಥಾನವನ್ನು ಹೊಂದಿದೆ. ಕನ್ನಡ ಸಾಹಿತ್ಯ ಸಾರಸ್ವತ ಲೋಕ ಒಂದು ಬೃಹದಾಕಾರದ ಆಲದ ಮರವಿದ್ದಂತೆ. ಇಲ್ಲಿ ಕಥೆ, ಕಾದಂಬರಿ, ನಾಟಕ, ವಿಮರ್ಶೆ, ಮಿಮಾಂಸೆ, ಕಾವ್ಯ, ಕವನ, ಚುಟುಕು ಎಲ್ಲವೂ ಮೇಳೈಸಿವೆ. ಕರ್ನಾಟಕವನ್ನಾಳಿದ ಅನೇಕ ರಾಜಮನೆತನಗಳು, ಸಾಮ್ರಾಜ್ಯಗಳು, ಕನ್ನಡ ಭಾಷೆ, ಸಾಹಿತ್ಯವನ್ನು ಪೋಷಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಹಲ್ಮಿಡಿ ಶಾಸನದ ಮೂಲಕ ಅಧಿಕೃತ ಕನ್ನಡದ ಅಸ್ಮಿತೆ ಕಂಡು ಬಂದರೂ ಅದರ ಹಿಂದಿನ ಸರಿಸುಮಾರು 400- 500 ವರ್ಷಗಳ ಕಾಲಘಟ್ಟದಲ್ಲಿ ಕನ್ನಡದ ಅಸ್ತಿತ್ವವನ್ನು ನಾವು ಗುರುತಿಸಬಹುದು ಎಂದು ತಿಳಿಸಿದರು.

ಸಂಗಮ ಯುಗದಲ್ಲಿಯೇ ಕನ್ನಡ ಭಾಷೆಯ ಮೂಲ ಸ್ವರೂಪವನ್ನು ಕೆಲವು ಶಾಸನಗಳಲ್ಲಿ ಪತ್ತೆ ಹಚ್ಚಬಹುದು. 2ನೇ ಶತಮಾನದ ಶಲಪಾಧಿಕಾರಂ ಕೃತಿಯಲ್ಲಿ ಕನ್ನಡ ಪದಗಳ ಉಲ್ಲೇಖವಾಗಿದೆ. ಭಕ್ತಿ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ ಸೇರಿದಂತೆ ಆಧುನಿಕ ಕಾಲಘಟ್ಟದಲ್ಲಿ ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ, ಸ್ತ್ರೀ ವಾದದಂತ ಸಾಹಿತ್ಯ ಪ್ರಕಾರದಲ್ಲಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಗುರುತಿಸಬಹುದು ಎಂದು ಹೇಳಿದರು.

ಕವಿರಾಜಮಾರ್ಗದಲ್ಲಿ ಕರ್ನಾಟಕದ ಗಡಿಗಳ ಪ್ರಸ್ತಾಪದಲ್ಲಿ ಕಾವೇರಿಯಿಂದ ಗೋಧಾವರಿವರೆಗೆ ಉಲ್ಲೇಖದ ಜೊತೆ ಗದ್ಯ ಮತ್ತು ಪದ್ಯ ಸಾಹಿತ್ಯ ಹಾಗೂ ಪೂರ್ವದ ಕವಿ ಮತ್ತು ವಿದ್ವಾಂಸರ ಬಗ್ಗೆ ಉಲ್ಲೇಖವಾಗಿದೆ. ಬೇರೆ ಭಾಷೆಗಳನ್ನು ಕಲಿತರೂ ನಮ್ಮ ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಗೌರವ ಮತ್ತು ಅಭಿಮಾನವನ್ನು ಹೊಂದಿರಬೇಕು. ಕರ್ನಾಟಕವನ್ನು ಆಳಿದ ಅನೇಕ ರಾಜಮನೆತನಗಳು ಧರ್ಮ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ಪರಂಪರೆ ಹಾಗೂ ಆಡಳಿತದ ಜೊತೆಗೆ ವಿವಿಧ ಭಾಷೆಗಳಲ್ಲಿ ಅದರಲ್ಲೂ ಕನ್ನಡದಲ್ಲಿ ಅಭೂತಪೂರ್ವ ಸಾಹಿತ್ಯದ ಲೋಕವನ್ನು ಸೃಷ್ಟಿಸಿ ಕನ್ನಡ ಸಾಹಿತ್ಯ ಪರ್ವತವನ್ನೇ ನಿರ್ಮಿಸಿದೆ. ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಸಾಧಕರಿಗೆ ಕರ್ನಾಟಕ ಸೇವಾ ಭೂಷಣ, ಕನ್ನಡ ರತ್ನ ಹಾಗೂ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಖ್ಯಾತ ವೈದ್ಯ ಹಾಗೂ ಸಾಹಿತಿ ಡಾ.ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಬನ್ನಂಗಾಡಿ ಸಿದ್ದಲಿಂಗಯ್ಯ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ವೇದಿಕೆಯ ಪದಾಧಿಕಾರಿಗಳಾದ ರಾಗಿಮುದ್ದನಹಳ್ಳಿ ನಾಗೇಶ್, ಮಂಗಲ ಶಿವಣ್ಣ, ರೂಪಾ ಹೊಸಹಳ್ಳಿ, ನೇತ್ರಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!