
ಮಂಡ್ಯ: ಯುಗಾದಿ ಕೇವಲ ಒಂದು ಹಬ್ಬವಲ್ಲ, ಅದು ಪ್ರಕೃತಿ ಮತ್ತು ಸಂಸ್ಕೃತಿಯ ಸಂಗಮದ ಮಹಾಪರ್ವವಾಗಿದ್ದು, ಕೇವಲ ಹಿಂದೂಗಳಿಗೆ ಮಾತ್ರವಲ್ಲದೇ ಸಮಸ್ತ ಮನುಕುಲಕ್ಕೆ ಹೊಸ ಹುರುಪು, ಹೊಸ ಚೈತನ್ಯವನ್ನು ತುಂಬುವ ಶಕ್ತಿ ಈ ಹಬ್ಬಕ್ಕಿದೆ ಎಂದು ಬಿಜೆಪಿ ಪಕ್ಷದ ಮೈಸೂರು ವಿಭಾಗದ ಸಹ ಪ್ರಭಾರಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಅಭಿಪ್ರಾಯಿಸಿದರು.
ಭಾನುವಾರ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ 16ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಮತ್ತು ಯುಗಾದಿ ಕವಿಗೋಷ್ಟಿ ಹಾಗೂ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಕೃತಿ ಇಲ್ಲದೆ ಜೀವನವಿಲ್ಲ, ಪ್ರಕೃತಿಯೇ ಮಾನವನ ಬದುಕಿಗೆ ಮೂಲಾಧಾರ. ಚೈತ್ರ ಮಾಸದಲ್ಲಿ ಪ್ರಕೃತಿ ತನ್ನ ಸಂಪೂರ್ಣ ಹೊಸತನವನ್ನು ಪ್ರಕಟಿಸಿಕೊಳ್ಳುತ್ತದೆ. ಈ ಸತ್ಯವನ್ನು ವಿಜ್ಞಾನವೂ ಅಲ್ಲಗಳೆಯಲಾರದು ಎಂದು ತಿಳಿಸಿದರು.
ಯುಗಾದಿ ಎಂದರೆ ಯುಗಗಳ ಆದಿ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ. ಈ ನಾಲ್ಕು ಯುಗಗಳನ್ನು ದಾಟಿ ಬಂದಿರುವ ಜೀವಾತ್ಮನಿಗೆ ಆದಿ-ಅಂತ್ಯಗಳ ಅರಿವು ಮುಖ್ಯ. ಆ ಅರಿವೇ ಮುಕ್ತಿ. ಅರಿವಿಲ್ಲದಿದ್ದರೆ ಯಾವ ಧರ್ಮ-ಕರ್ಮಕ್ಕೂ ಬೆಲೆಯಿಲ್ಲ. ಪಾಡ್ಯದ ಸಮಯದಲ್ಲಿ ಸೂರ್ಯನು ವಸಂತ ಸಂಪಾತದ ಬಿಂದುವಿನ ಮೇಲೆ ಬರುತ್ತಾನೆ. ಸಂಪಾತ ಬಿಂದು ಎಂದರೆ ಮಕರ ಮತ್ತು ಕರ್ಕಾಟಕ ವೃತ್ತಗಳು ಪರಸ್ಪರ ಛೇದಿಸುವ ಬಿಂದು. ಈ ಸಂದರ್ಭದಲ್ಲಿಯೇ ವಸಂತಋತು ಪ್ರಾರಂಭವಾಗುತ್ತದೆ ಎಂದು ಯುಗಾದಿ ಬಗ್ಗೆ ವಿಶ್ಲೇಷಿಸಿದರು.
ಎಲ್ಲಾ ಋತುಗಳಲ್ಲಿ ಕುಸುಮಾಕರಿ ವಸಂತ ಋತುವು ನನ್ನ ವಿಶೇಷ ಶಕ್ತಿಯಾಗಿದೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದದಾಯಕ ಹವಾಗುಣವಿರುತ್ತದೆ. ಶಿಶಿರಋತುವಿನಲ್ಲಿ ಮರಗಳ ಎಲೆಗಳು ಉದುರಿದರೆ, ಪಾಡ್ಯದ ಹೊತ್ತಿಗೆ ಮರಗಳಿಗೆ ಹೊಸ ಚಿಗುರು ಬರುತ್ತಿರುವುದರಿಂದ ವೃಕ್ಷ-ಬಳ್ಳಿಗಳು ಚೈತನ್ಯಮಯವಾಗಿ ಕಂಗೊಳಿಸುತ್ತವೆ ಎಂದರು.
ಯುಗಾದಿ ಬಂತೆಂದರೆ ಸಾಕು, ಪ್ರಕೃತಿಯಲ್ಲಿ ಹೊಸ ಪುಳಕ. ಗಿಡ-ಮರಗಳು ಚಿಗುರಿ ಹಸಿರೆಲೆಗಳಿಂದ ಕಂಗೊಳಿಸುತ್ತಿದ್ದರೆ, ಸುಡುಬಿಸಿಲ ನಡುವೆಯೂ ಆಗಾಗ ಬೀಸುವ ತಂಗಾಳಿ ಮನಕ್ಕೆ ಮುದ ನೀಡುತ್ತದೆ. ಅರಳಿ ನಿಂತು ಸುವಾಸನೆ ಬೀರುವ ಕುಸುಮಗಳು, ಅವುಗಳ ಮೇಲೆ ಹಾರಾಡಿ ಮಕರಂದ ಹೀರುವ ಜೇನುನೊಣಗಳ ಝೇಂಕಾರ ಎಲ್ಲೆಡೆ ಕಂಡುಬರುತ್ತದೆ. ಯುಗಾದಿ ಎನ್ನುವುದು ನಿಸರ್ಗಕ್ಕೊಂದು ಮರುಹುಟ್ಟು, ಮುಂದೆ ಬರಲಿರುವ ಎಲ್ಲ ಹಬ್ಬಗಳಿಗೆ ಮುನ್ನುಡಿ ಡಾ.ಈ.ಸಿ.ನಿಂಗರಾಜ್ ಗೌಡ ರವರು ಎಂದು ತಿಳಿಸಿದರು.
ಯುಗಾದಿ ಆಚರಣೆ ವೇದಗಳ ಕಾಲದಿಂದಲೂ ನಡೆದುಬಂದಿದೆ. ಅಥರ್ವವೇದ, ಶತಪಥ ಬ್ರಾಹ್ಮಣ, ಧರ್ಮಸಿಂಧು, ನಿರ್ಣಯ ಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಯುಗಾದಿಯ ಉಲ್ಲೇಖವಿದೆ. ಸಮಾಜದ ಪ್ರತಿಯೊಬ್ಬರೂ ಬೇವು- ಬೆಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಕರೆ ನೀಡಿದರು.
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚಾಟದಿಂದ ವಿಶ್ವದ ಹಲವು ದೇಶಗಳು ನಲುಗುವಂತಾಗಿದೆ. ಅನೇಕ ದೇಶಗಳಲ್ಲಿ ಸಾವು- ನೋವಾಗಿ ತೈಲ ಸಂಕಷ್ಟ ಎದುರಾಗಿದೆ. ಆದರೆ ವಿಶ್ವದಲ್ಲಿ ಏನೇ ಸಮಸ್ಯೆ ಆದರೂ ಭಾರತ ಮಾತ್ರ ಸುಭೀಕ್ಷವಾಗಿದೆ. ಅದಕ್ಕೆ ದೇಶದ ಪ್ರಧಾನಿ ಮೋದಿ ನಾಯಕತ್ವವೂ ಕಾರಣ ಎಂದು ಡಾ.ಈ.ಸಿ.ನಿಂಗರಾಜ್ ಗೌಡ ಶ್ಲಾಘಿಸಿದರು.
*ನನ್ನ ಕೆಲಸ ಪ್ರಧಾನಿ ಮೋದಿ ತಲುಪಿರುವುದು ಖುಷಿಯ ವಿಚಾರ:* ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಯಾವ ಕ್ಷೇತ್ರದಲ್ಲಿ ಬೆಳೆಯುತ್ತಾನೋ ಆ ಕ್ಷೇತ್ರವನ್ನು ತಾತ್ಸಾರ ಮಾಡದೇ ಅದೇ ಕ್ಷೇತ್ರದಲ್ಲಿ ಮುಂದುವರೆದರೆ ಸಾಧನೆ ಸಾಧ್ಯ. ಪ್ರತಿಯೊಬ್ಬರೂ ಪುಸ್ತಕವನ್ನು ಓದುವುದರಿಂದ ಮನುಷ್ಯನ ಪ್ರಬುದ್ಧತೆ ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ನಾನು ನನ್ನ ಮನೆಯನ್ನೇ ಪುಸ್ತಕದ ಮನೆ ಮಾಡಿ 25 ಲಕ್ಷ ಪುಸ್ತಕ ಸಂಗ್ರಹಿಸಿದ್ದೇನೆ. ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುಸ್ತಕ ಸೇರಿ ವಿಶ್ವದ ಅನೇಕ ಸಾಹಿತಿಗಳ ಪುಸ್ತಕ ಸಂಗ್ರಹಿಸಿದ್ದೇನೆ. ನನ್ನ ಈ ಪುಸ್ತಕ ಸಂಗ್ರಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿರುವುದು ನನ್ನ ಕೆಲಸಕ್ಕೆ ಸಾರ್ಥಕತೆ ಸಿಕ್ಕಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.
*ಟ್ರಂಪ್ ಮನಸ್ಥಿತಿಯೇ ಯುದ್ಧಕ್ಕೆ ಕಾರಣ:* ಕವಿ ಹಾಗೂ ಖ್ಯಾತ ವೈದ್ಯ ಡಾ.ಚಂದ್ರಶೇಖರ್ ಮಾತನಾಡಿ, ಪರಾಭವ ಸಂವತ್ಸರದಲ್ಲಿ ಈ ಬಾರಿಯ ಯುಗಾದಿ ಬಂದಿದೆ. ಏಕೆಂದರೆ ವಿಶ್ವದ ಕೆಲವೆಡೆ ಯುದ್ದ ನಡೆಯುತ್ತಿದೆ. ಈ ಯುದ್ದಕ್ಕೆ ಡೊನಾಲ್ಡ್ ಟ್ರಂಪ್ ಕಾರಣವಲ್ಲ, ಅವರ ಮನಸ್ಥಿತಿ ಕಾರಣವಾಗಿದೆ. ಯುದ್ದದ ಮೂಲಕ ಏನು ಪಡೆಯಲು ಸಾಧ್ಯವಿಲ್ಲ. ಕೇವಲ ಜನರಿಗೆ ಸಮಸ್ಯೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯುದ್ಧ ಗೆದ್ದವನು ಚಕ್ರವರ್ತಿಯಾದ ಸೋತವನು ಗೊಮ್ಮಟನಾದ ಎಂಬ ಮಾತಿದೆ. ಈ ಯುದ್ಧದಲ್ಲಿ ಯಾರು ಚಕ್ರವರ್ತಿ ಮತ್ತು ಗೊಮ್ಮಟನಾಗುತ್ತಾರೋ ಕಾಲವೇ ಉತ್ತರ ಕೊಡಲಿದೆ ಎಂದರು.
*ಸಾಮಾಜಿಕ ಜಾಲತಾಣಗಳ ವ್ಯಾಮೋಹದಿಂದ ಜನರಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಣ್ಮರೆ:* ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡ ಭಾವನೆಗಳ ಬಣ್ಣ, ಹೊಸಭಾವ ಕೃತಿಗಳ ಕುರಿತು ಲೇಖಕ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ ಮಂಗಲ ಮಾತನಾಡಿ, ಜಗತ್ತು ಶೀಘ್ರ ಗತಿಯಲ್ಲಿ ಬದಲಾವಣೆ ಕಾಣುತ್ತಿದೆ, ವಾಟ್ಸಪ್, ಫೇಸ್ಬುಕ್, ಯ್ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಜನ ಹೆಚ್ಚಿನ ಸಮಯ ವ್ಯಯಮಾಡುತ್ತಿದ್ದಾರೆ, ಆಗಾಗಿ ಅವುಗಳ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಅದರಲ್ಲೂ ಮಹಿಳೆಯರು ಸಾಹಿತ್ಯ ಲೋಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾದಾರ್ಪಣೆ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಆದರೆ ಕವಿತೆ ಬರೆಯುವುದರಲ್ಲಿ, ಪುಸ್ತಕ ಬಿಡುಗಡೆ ಮಾಡುವುದರಲ್ಲಿ ಆತುರತೆ ಸಲ್ಲದು ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.
ಕೇವಲ ಪುಸ್ತಕ ಬರೆದು ಪ್ರಕಟಣೆ ಮಾಡಿದವರು ಮಾತ್ರ ಸಾಹಿತಿಗಳು ಎನ್ನುವ ಮಾತಿದೆ. ಆದರೆ ಅಂತಹ ಪುಸ್ತಕಗಳನ್ನು ನಿರಂತರವಾಗಿ ಓದುವವರು, ಸಾಹಿತ್ಯದ ಕಾರ್ಯಕ್ರಮಗಳನ್ನು ಆಗಾಗ್ಗೆ ಸಂಘಟಿಸುವವರೂ, ಕವಿ ಮಿತ್ರರಿಗೆ ಅವಕಾಶಗಳನ್ನು ಒದಗಿಸುವವರೂ ಕೂಡ ಸಾಹಿತಿಗಳೇ ಆಗಿದ್ದಾರೆ. ಆದ್ದರಿಂದ ಸಾಹಿತಿ ಎನ್ನುವ ತಲೆಬರಹ ಕೆಲವರಿಗೆ ಮಾತ್ರ ಸೀಮಿತವಲ್ಲ ಮೇಲಿನ ಎಲ್ಲರಿಗೂ ಅನ್ವಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಾವು ಎಷ್ಟು ಪುಸ್ತಕಗಳನ್ನು ಬರೆದಿದ್ದೇವೆ ಎನ್ನುವುದಕ್ಕಿಂತ, ಎಷ್ಟು ಪುಸ್ತಕಗಳು ಮರು ಮುದ್ರಣಗಳನ್ನು ಕಂಡಿವೆ, ಆ ಪುಸ್ತಕಗಳ ಮಾರಾಟದಿಂದ ಎಷ್ಟು ಹಣಗಳಿಸಿದ್ದೇವೆ, ಎಷ್ಟು ಮಂದಿ ಹಣ ಕೊಟ್ಟು ಪುಸ್ತಕ ಖರೀದಿ ಮಾಡಿ ಓದಿದ್ದಾರೆ ಹಾಗೂ ಸರ್ಕಾರ ಅಥವಾ ಪುಸ್ತಕ ಪ್ರಾಧಿಕಾರದಿಂದ ನನ್ನ ಪುಸ್ತಕಕ್ಕೆ ಅಥವಾ ಬಹುಮಾನ ದೊರೆತಿದೆಯೇ ಎನ್ನುವುದನ್ನು ಕವಿಗಳು ಸ್ವ ಅವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ವೈ.ಎಸ್.ಮಾಣಿಕ್ಯ ರಚನೆಯ ಭಾವನೆಗಳ ಬಣ್ಣ ಹಾಗೂ ಮಂಡ್ಯ ಯಶು ರಚನೆಯ ಹೊಸಭಾವ ಕೃತಿಗಳನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪುಸ್ತಕ ಮನೆ ಅಂಕೇಗೌಡ ಲೋಕಾರ್ಪಣೆ ಮಾಡಿದರು.
ಕನ್ನಡ ಅಕ್ಷರ ಜಾತ್ರೆಯ ಸಾಹಿತಿ ಹಾಗೂ ಕಲಬುರಗಿ ಜಿಲ್ಲಾ ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕ ಸಂತೋಷಕುಮಾರ ಕರಹರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಗಣ್ಯರಿಗೆ ನಾಗರೀಕ ಅಭಿನಂದನೆ, ಕರ್ನಾಟಕ ಸೇವಾ ಭೂಷಣ ಹಾಗೂ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿನಕುರಳಿ ಲೋಕೇಶ್, ಆಚಾರ್ಯ ಗುರುಕುಲದ ವ್ಯವಸ್ಥಾಪಕ ನಿರ್ದೇಶಕ ಡಾ.ಮೋಹನ ಕುಮಾರ ಶಾಸ್ತ್ರಿ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಬನ್ನಂಗಾಡಿ ಸಿದ್ದಲಿಂಗಯ್ಯ, ಎಸ್.ಕೃಷ್ಣ ಸ್ವರ್ಣಸಂದ್ರ, ರಾಗಿಮುದ್ದನಹಳ್ಳಿ ನಾಗೇಶ್, ರೂಪಾ ಹೊಸಹಳ್ಳಿ ಉಪಸ್ಥಿತರಿದ್ದರು.

Leave a Reply