
ಮಂಡ್ಯ : ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಆ ಮೂಲಕ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಿಸಿದರು.
ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಆವರಣದಲ್ಲಿ ನಡೆದ ಮುಟ್ಟಿನ ಕಪ್ ಕುರಿತ ಅರಿವು ಮತ್ತು ವಿತರಣಾ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮಾಡಿ ಮಾತನಾಡಿದ ಅವರು, ಪ್ರತಿಯೊಬ್ಬ ಮಹಿಳೆಗೂ ಋತುಚಕ್ರ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರು ಆರೋಗ್ಯವನ್ನೂ ಕಾಪಾಡಿಕೊಳ್ಳುವುದರ ಜೊತೆಗೆ ಪರಿಸರವನ್ನೂ ರಕ್ಷಣೆ ಮಾಡುವಂತಹ ಅನಿವರ್ಯತೆಯೂ ಇದೆ ಎಂದು ಹೇಳಿದರು.
ನಾನೂ ಸಹ ನಮ್ಮ ಮನೆಯಲ್ಲಿ ನೋಡಿಕೊಂಡೇ ಬೆಳೆದಿದ್ದೇನೆ. ಮೊದಲೆಲ್ಲಾ ಬಟ್ಟೆಯನ್ನು ಉಪಯೋಗಿಸುತ್ತಿದ್ದರು. ನಂತರದ ದಿನಗಳಲ್ಲಿ ಸ್ಯಾನಿಟರ್ ಪ್ಯಾಡ್ಗಳನ್ನು ಬಳಕೆ ಮಾಡಲಾಗುತ್ತಿತ್ತು. ಇದನ್ನು ಬಹಳ ಮುಚ್ಚಿಟ್ಟುಕೊಂಡೇ ಬಳಸಲಾಗುತ್ತಿತ್ತು. ಜೊತೆಗೆ ಉಪಯೋಗಿಸಿದ ಪ್ಯಾಡ್ಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೆ, ಸುಟ್ಟು ಹಾಕುತ್ತಿದ್ದನ್ನು ನೋಡಿದ್ದೇನೆ. ಇದರಿಂದಾಗಿ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತಿದನ್ನು ಗಮನಿಸಿದ ವಿಜ್ಞಾನಿಗಳು ಮುಟ್ಟಿನ ಕಪ್ನ್ನು ಸಂಶೋಧಿಸಿದ್ದಾರೆ. ಇದು ಪರಿಸರ ಸ್ನೇಹಿಯೂ ಆಗಿದೆ. ಇದನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬುದನ್ನು ಸಂಬಂಧಿಸಿದ ವೈದ್ಯರು, ಆರೋಗ್ಯ ಸಹಾಯಕರಿಂದ ಮಾಹಿತಿ ಪಡೆದು ಉಪಯೋಗಿಸುವಂತೆ ಸಲಹೆ ನೀಡಿದರು.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಪಂಚಾಯಿತಿಯವರು ಮುಂದೆ ಬಂದು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗೂ ಮುಟ್ಟಿನ ಕಪ್ಗಳನ್ನು ವಿತರಿಸುವುದರ ಜೊತೆಗೆ ಮಾಹಿತಿಯನ್ನೂ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ಮೂರ್ತಿ ಮಾತನಾಡಿ, ಮುಟ್ಟಿನ ಕಪ್ ಬಳಕೆ ಹೇಗೆ, ಮತ್ತು ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಈಗಾಗಲೇ ಆರೋಗ್ಯ ಸಹಾಯಕರಿಗೆ, ವೈದ್ಯರು ಮಾಹಿತಿ ನೀಡಿದ್ದಾರೆ. ಅವರು ಹೇಳಿರುವಂತೆ ಅದನ್ನು ಅನುಸರಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸ್ಯಾನಿಟರಿ ಪ್ಯಾಡ್ಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲಾಗದ ಕಾರಣ ಪರಿಸರಕ್ಕೆ ಹೆಚ್ಚು ಸಮಸ್ಯೆಯಾಗುತ್ತಿತ್ತು. ಮುಟ್ಟಿನ ಕಪ್ನ್ನು ವೈಜ್ಞಾನಿಕವಾಗಿ ಮಾಡಲಾಗಿಆದೆ. ಅದು ಪರಿಸರ ಸ್ನೇಹಿಯೂ ಆಗಿದೆ. ಕಳೆದ ವರ್ಷ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ೮೪೦ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮಾಡಲಾಗಿತ್ತು. ಇದೀಗ ೧೦೮೦ ಮಹಿಳೆಯರಿಗೆ ವಿತರಿಸುವ ಮೂಲಕ ಶಿವಳ್ಳಿ ಗ್ರಾಮ ಪಂಚಾಯಿತಿ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಜವರೇಗೌಡ, ಸಹಾಯಕ ನಿರ್ದೇಶಕ ಶ್ರೀಧರ್, ಡಾ. ಪ್ರಕೃತಿ, ಡಾ. ನಿರ್ಮಲ ಜಯಂತಿ, ಪಿಡಿಓ ಶಿವಕುಮಾರ್, ಕರ್ಯದರ್ಶಿ ಪ್ರಕಾಶ್ ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Leave a Reply