Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ವಿಶೇಷ ಅನುದಾನ ಬಿಡುಗಡೆಗೆ ಅಗ್ರಹಿಸಿ ಇಓಗೆ ಮನವಿ

ಮಂಡ್ಯ : 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಯಾಗದಿರುವುದರಿಂದ ಕುಡಿಯುವ ನೀರು ಮತ್ತು ಬೀದಿ ದೀಪಗಳ ನಿರ್ವಹಣೆಗೆ ಹಣವಿಲ್ಲದೆ ಆಡಳಿತ ನಡೆಸಲು ತೊಂದರೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಬಿ ಗ್ರೇಡ್) ಹುದ್ದೆ ಉನ್ನತೀಕರಣ ಸಂಘದ ಪದಾಧಿಕಾರಿಗಳು ತಾ.ಪಂ. ಇಓಗೆ ಮನವಿ ಸಲ್ಲಿಸಿದರು.
ಮಂಡ್ಯ ತಾ.ಪಂ. ಕಚೇರಿಗೆ ಧಾವಿಸಿದ ಪದಾಧಿಕಾರಿಗಳು ಇಓ ಲೋಕೇಶ್ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಅಂಗಡಿಗಳ ಮಾಲೀಕರಿಂದ 5 ರಿಂದ 20 ಲಕ್ಷ ರೂ.ಗಳವರೆಗೆ ಸಾಮಗ್ರಿಗಳನ್ನು ಸಾಲದ ರೂಪದಲ್ಲಿ ಖರೀದಿ ಮಾಡಲಾಗಿದೆ. ಅನುದಾನ ಬಿಡುಗಡೆಯಾಗದಿರುವುದರಿಂದ ಅವರಿಗೆ ಬಾಕಿ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಬಾಕಿ ಪಾವತಿ ಮಾಡದ ಕಾರಣ ಅಂಗಡಿ ಮಾಲೀಕರು ಮತ್ತೆ ಸಾಮಗ್ರಿಗಳ ಖರೀದಿಗೆ ಸಾಲ ನೀಡದಿರುವುದರಿಂದ ಗ್ರಾಮಗಳಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆ ಮಾಡಬೇಕು ಇಲ್ಲವೇ ಸಾಮಗ್ರಿಗಳನ್ನು ಖರೀದಿಸಲು ಅನುಕೂಲವಾಗಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಜೊತೆಗೆ ಕೆಟಿಟಿಪಿ ಕಾಯಿದೆಯಲ್ಲಿ ಸಾಮಗ್ರಿಗಳ ಖರೀದಿಗೆ ವಿಶೇಷ ಅನುಮತಿ ನೀಡುವುದು ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ  ಸಂಘದ ಪದಾಧಿಕಾರಿಗಳಾದ ವಿನಯ್‌ಕುಮಾರ್, ಸುನಿಲ್‌ಕುಮಾರ್, ಕೃಷ್ಣೇಗೌಡ, ಪ್ರಸನ್ನ, ಅಶೋಕ್, ಶಿವಲಿಂಗಯ್ಯ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!