Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಜಿಲ್ಲಾ ಕುರುಬರ ಸಂಘದ ಕಡತಗಳ ವಶಕ್ಕೆ ಪಡೆಯಲು ಡಿಆರ್ ಗೆ ಹೈಕೋರ್ಟ್ ಸೂಚನೆ

ಮಂಡ್ಯ: ಮಂಡ್ಯ ಜಿಲ್ಲಾ ಕುರುಬರ ಸಂಘದ ಆಡಳಿತ ಮಂಡಳಿಯವರ ಪರ-ವಿರೋಧದ ಜಟಾಪಟಿಗೆ ಕೊನೆಗೂ ಹೈಕೋರ್ಟ್ ಬ್ರೇಕ್ ಹಾಕಿದೆ.
ಮಳವಳ್ಳಿ ಸುರೇಶ್ ನೇತೃತ್ವದ ಮಂಡ್ಯ ಜಿಲ್ಲಾ ಕುರುಬರ ಸಂಘದ ಆಡಳಿತ ತಮ್ಮ ಅವಧಿ ಮುಗಿದರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸುಳ್ಳು ಮಾಹಿತಿ ನೀಡಿ, ಕಾನೂನುಬಾಹಿರವಾಗಿ ಅಧಿಕಾರವಧಿಯಲ್ಲಿ ಮುಂದುವರೆಯುತ್ತಿರುವ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಅಧ್ಯಕ್ಷ ಸುರೇಶ್ ನೇತೃತ್ವದ ಬಣ ಮತ್ತು ವಿರೋಧಿ ಬಣಗಳ ನಡುವೆ ಆರೋಪ-ಪ್ರತ್ಯಾರೋಪ, ಪರಸ್ಪರ ವಾಕ್ಸಮರ ಕೂಡ ಜೋರಾಗಿತ್ತು.
ಇತ್ತೀಚೆಗೆ, ಸಂಘದ ಆವರಣದಲ್ಲೇ ಅಧ್ಯಕ್ಷ ಸುರೇಶ್ ಅವರನ್ನ ಅಡ್ಡಗಟ್ಟಿದ್ದ ಗುಂಪೊಂದು ಅವರ ಮೇಲೆ ಕಪ್ಪು ಮಸಿ ಎರಚಿ ತಮ್ಮ ಆಕ್ರೋಶವನ್ನು ಹೊರಹಾಕಿತ್ತು.
ಸುರೇಶ್ ಅವರ ಏಕಪಕ್ಷೀಯ ನಡೆ ವಿರುದ್ಧ ದನಿ ಎತ್ತಿದ್ದ ನಾಲ್ವರು ನಿರ್ದೇಶಕರನ್ನು ಆಡಳಿತ ಮಂಡಳಿಯಿಂದ ವಜಾ ಮಾಡಿದ್ದರು. ಈ ಎಲ್ಲದರ ವಿರುದ್ಧ ಸಂಘದ ಮಾಜಿ ನಿರ್ದೇಶಕ ಹಾರೋಹಳ್ಳಿ ಎ.ಕೃಷ್ಣ ನೇತೃತ್ವದ ಆರು ಜನರ ತಂಡ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಂಡ್ಯ ಜಿಲ್ಲಾ ಕುರುಬರ ಸಂಘ ನಡೆ ಕಾನೂನುಬಾಹಿರವಾಗಿದೆ. ಅದಕ್ಕೆ ಪೂರಕವಾಗಿ ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಮಾಡಿರುವ ಕಾನೂನುಬಾಹಿರ ಆದೇಶಕ್ಕೆ ತಡೆ ನೀಡಿದೆ.
ಕೋರ್ಟ್ ಆದೇಶದಲ್ಲಿ ಏನಿದೆ?:.
ಅಲ್ಲದೇ, ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಈ ಕೂಡಲೇ ಮೇಲ್ಕಂಡ ಸಂಘದ ಎಲ್ಲ ದಾಖಲಾತಿಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು. ಆ ದಾಖಲಾತಿಗಳನ್ನ ಪರಿಶೀಲನೆ ಮಾಡಿ, ಆಡಳಿತ ಮಂಡಳಿಯ ಅವಧಿ ಮುಗಿದಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಬೇಕು.
ಒಂದು ವೇಳೆ ಸಂಘದ ಆಡಳಿತ ಮಂಡಳಿಯ ಅವಧಿಯು ಮುಗಿದಿದೆ ಎಂಬುದು ಕಂಡುಬಂದರೆ ಎಲ್ಲ ಅವಶ್ಯಕ ಕ್ರಮಗಳನ್ನ ತೆಗೆದುಕೊಳ್ಳಲು ಸಂಘದ ಸರ್ವ ಸದಸ್ಯರ ಸಭೆ ಕರೆಯಲು ಹಾಗೂ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವುದು ಮತ್ತು ಚುನಾವಣೆಯನ್ನು ಕಾನೂನು ರೀತ್ಯಾ ನಡೆಸಿ, ಚುನಾವಣಾ ಪ್ರಕ್ರಿಯೆಯನ್ನು ಮುಗಿಸಲೇಬೇಕೆಂದು ಕಟ್ಟುನಿಟ್ಟಾದ ಆದೇಶವನ್ನು ಏಪ್ರಿಲ್‍ 17ರಂದು ಕರ್ನಾಟಕ C ಉಚ್ಚ ನ್ಯಾಯಾಲಯ ಹೊರಡಿಸಿದೆ.
ಹೈಕೋರ್ಟ್ ಆದೇಶ ಸ್ವಾಗತಾರ್ಹ, ಸಂಘದ ಸರ್ವ ಸದಸ್ಯರಿಗೆ ಸಂದ ಜಯ.
ಈ ಸಂಬಂಧ ಮಂಗಳವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಂಘದ ಮಾಜಿ ನಿರ್ದೇಶಕ ಹಾರೋಹಳ್ಳಿ ಎ.ಕೃಷ್ಣ ಮತ್ತು ಇತರರು, ಕರ್ನಾಟಕ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ.
ಇದೊಂದು ಐತಿಹಾಸಿಕ ತೀರ್ಪು. ಕಾನೂನುಬಾಹಿರವಾಗಿ ಹೋಗುವ ಪ್ರತಿಯೊಬ್ಬರಿಗೂ ಇದು ಎಚ್ಚರಿಕೆ ಘಂಟೆ. ನ್ಯಾಯದ ಪರ ದನಿ ಎತ್ತಿದ ನಮ್ಮನ್ನ ಉಚ್ಚಾಟಿಸಿ, ಸಂಘ ವಿರೋಧಿ ಪಟ್ಟ ಕಟ್ಟಿದ್ದರು. ಅಧಿಕಾರ ಶಾಶ್ವತ ಅಲ್ಲ. ಕಾನೂನಿನ ಅಡಿ ಎಲ್ಲರು ಒಂದೇ. ಕಾನೂನಿನ ಮುಂದೆ ಅಧಿಕಾರ, ಹಣ, ಅಧಿಕಾರದ ಮದ ನಡೆಯುವುದಿಲ್ಲ ಎಂಬುದನ್ನ ಸಾಬೀತು ಮಾಡಿದೆ. ಈ ತೀರ್ಪು ಸಂಘದ ಸರ್ವ ಸದಸ್ಯರಿಗೆ ಸಂದ ಜಯ. ಈಗಲಾದರು ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು ಕೋರ್ಟ್ ಆದೇಶಕ್ಕೆ ತಲೆಬಾಗಬೇಕು. ಕೋರ್ಟ್ ಆದೇಶದಂತೆ ಸಂಘದ ಎಲ್ಲಾ ದಾಖಲಾತಿಗಳನ್ನ ತಮ್ಮ ವಶಕ್ಕೆ ಪಡೆದು, ಕಾನೂನಿನ ಪ್ರಕಾರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ.
ಸುರೇಶ್, ಶಶಿಧರ್ ಗೆ ಸವಾಲ್.
ಇತ್ತೀಚೆಗೆ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಜೆ.ಶಶಿಧರ್ ಎಂಬುವವರು ಕಾನೂನು ಹೋರಾಟ ಮಾಡಲಿ ಎಂದು ಹೇಳಿದ್ದರು. ಇವತ್ತು ಕಾನೂನು ಮೂಲಕವೇ ಅವರಿಗೆ ಉತ್ತರ ಕೊಟ್ಟಿದ್ದೇವೆ. ಕಾನೂನಿನ ಮೇಲೆ ಅವರಿಗೆ ಕಿಂಚಿತ್ತಾದರೂ ಗೌರವ ಇದ್ದರೆ ಚುನಾವಣೆಯಲ್ಲಿ ಗೆದ್ದು ಬರಲಿ. ಇನ್ನು ಇವರ ಅಧಿಕಾರವಧಿಯಲ್ಲಿ ದಾನಿಗಳು, ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ನೀಡಿರುವ ದಾನದ ರೂಪದ ದೇಣಿಗೆ ಹಣದ ವಿವರ ಬಹಿರಂಗಪಡಿಸಲಿ ಎಂದು ಸವಾಲಾಕಿದರು.
ಸುದ್ದಿಗೋಷ್ಟಿಯಲ್ಲಿ ವಕೀಲ ಶಂಕರ್, ಚಂದಹಳ್ಳಿ ಶ್ರೀಧರ್, ಬೀರೇಶ್, ರಮೇಶ್, ಶಿವರಾಮ್, ಗೋಪಾಲ್, ಮಧು ಹೆಗ್ಗಡೆ, ಮಂಜು ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

error: Content is protected !!