
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ಮತ್ತು ಸಿಬ್ಬಂದಿಯ ಸಮಯಪಾಲನೆಯನ್ನು ಖಚಿತಪಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೊಸ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬಯೋಮೆಟ್ರಿಕ್ ವ್ಯವಸ್ಥೆಯ ಬದಲಿಗೆ ಕೃತಕ ಬುದ್ಧಿಮತ್ತೆ (ಎಐ ) ಹಾಗೂ ಜಿಪಿಎಸ್ ಆಧಾರಿತ ಹಾಜರಾತಿ ದಾಖಲಾತಿಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕೃತ ಆದೇಶ ಹೊರಡಿಸಿದ್ದು, ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ಜೂನ್ 4ರಂದು ನಡೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ನೀಡಿದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ “ಕರ್ತವ್ಯ (KAAMS) ಆಪ್ ನಲ್ಲಿ ಎಚ್ ಆರ್ ಎಂ ಎಸ್ ನಲ್ಲಿ ಇರುವ ಮಾಹಿತಿ ಆಧಾರದ ಮೇಲೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿವರಗಳನ್ನು ನೋಂದಾಯಿಸಲಾಗಿದೆ. ಆದರೆ ಹಲವಾರು ಅಧಿಕಾರಿ ಸಿಬ್ಬಂದಿಗಳು ಆ್ಯಪ್ ಅನ್ನು ನಿಯಮಿತವಾಗಿ ಬಳಸುತ್ತಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಆದೇಶದ ಪ್ರಕಾರ, ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಆಗಮಿಸಿದಾಗ “ಚೆಕ್ ಇನ್ ” ಹಾಗೂ ಕಚೇರಿಯಿಂದ ನಿರ್ಗಮಿಸುವಾಗ “ಚೆಕ್ ಔಟ್ ” ದಾಖಲಿಸಬೇಕು. ಇ-ಆಡಳಿತ ಇಲಾಖೆ ಪ್ರತಿದಿನ ಬೆಳಗ್ಗೆ 10 ಗಂಟೆಯ ಹಾಜರಾತಿ ಮಾಹಿತಿಯನ್ನು ಎಐ ಆಧಾರಿತ ವ್ಯವಸ್ಥೆಯ ಮೂಲಕ ಸಂಗ್ರಹಿಸಿ, ಜಿಲ್ಲಾವಾರು ಮತ್ತು ಕಚೇರಿವಾರು ವರದಿಗಳನ್ನು ಸಂಬಂಧಿತ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ ಕಳುಹಿಸಲಿದೆ.
ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ಜಾರಿಯಲ್ಲಿರುವ ಆ್ಯಪ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಇದೀಗ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ವಿಸ್ತರಿಸಲಾಗಿದೆ.
ಹೊಸ ವ್ಯವಸ್ಥೆಯಿಂದ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯ ಹಾಜರಾತಿ ಮೇಲ್ವಿಚಾರಣೆ ಹೆಚ್ಚು ಪರಿಣಾಮಕಾರಿಯಾಗಲಿದ್ದು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿತನ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.
ಹೊಸ ವ್ಯವಸ್ಥೆಯಿಂದ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯ ಹಾಜರಾತಿ ಮೇಲ್ವಿಚಾರಣೆ ಹೆಚ್ಚು ಪರಿಣಾಮಕಾರಿಯಾಗಲಿದ್ದು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿತನ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.

Leave a Reply