
ಕಳೆದ ಅಕ್ಟೋಬರ್ 10, 2022ರಲ್ಲಿ ಮಳವಳ್ಳಿ ಪಟ್ಟಣದಲ್ಲಿ ನಡೆದ 10 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಟ್ಯೂಷನ್ ಶಿಕ್ಷಕ ಕಾಂತರಾಜು(52) ಗೆ ಮಂಡ್ಯ ಜಿಲ್ಲಾ 1ನೇ ತ್ವರಿತಗತಿ ನ್ಯಾಯಾಲಯವು ಶನಿವಾರ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ ತೀರ್ಪುನೀಡಿದೆ .
ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸೆಂಟರ್ ನಡೆಸುತ್ತಿದ್ದ ಕಾಂತರಾಜು, ಟ್ಯೂಷನ್ ಗೆ ಬಂದ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಸಮೀಪದಲ್ಲೇ ಇದ್ದ ಗಲ್ಲಿಯಲ್ಲಿ ಅತ್ಯಾಚಾರ ನಡೆಸಿ, ಕೊಲೆ ಮಾಡಿ ಶವವನ್ನು ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪಿಗೆ ಹಾಕಿದ್ದನು.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಮಳವಳ್ಳಿ ಪಟ್ಟಣ ಠಾಣೆಯ ಪೋಲಿಸರು ಕಾಂತರಾಜನನ್ನು ಬಂಧಿಸಿ ವಿಚಾರಣೆ ನಡೆಸಿ, ಹಲವು ಸಾಕ್ಷ್ಯಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮಂಡ್ಯ ಜಿಲ್ಲಾ 1ನೇ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದರು.
ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದಂತೆ ಅತ್ಯಾಚಾರಕ್ಕೊಳಕ್ಕಾಗಿ ಕೊಲೆಯಾದ ಬಾಲಕಿಯ ಕುಟುಂಬದ ಪರವಾಗಿ ವಿ.ಎಸ್.ಭಟ್ ಅವರು ಸಮರ್ಥವಾಗಿ ವಾದ ಮಂಡಿಸಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply