
ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ ಯೋಜನೆಯಡಿ 9,260 ಜನರಿಗೆ ಕನ್ನಡಕ ವಿತರಣೆ ಮಾಡಲಾಗಿದ್ದು,
ನವೆಂಬರ್ ಅಂತ್ಯದೊಳಗೆ ಉಳಿಕೆ 81,020 ಜನರಿಗೆ ವಿತರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆಶಾಕಿರಣ ಫಲಾನುಭವಿಗಳಿಗೆ ಕನ್ನಡಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಅನೇಕ ಜನಪಯೋಗಿ ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಗಳ ಮೂಲಕ ಮಾಡಲಾಗುತ್ತಿದೆ. ಇದರ ಜೊತೆಗೆ ಆರೋಗ್ಯ ಇಲಾಖೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಜನರ ಅನುಕೂಲಕ್ಕಾಗಿ ತರಲಾಗಿದೆ. ಸರ್ಕಾರವು ಕೇವಲ ಒಂದು ಕಾರ್ಯಕ್ರಮಕ್ಕೆ ಸೀಮಿತವಾಗದೆ ನಿರಂತರವಾಗಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿತ್ತಿದೆ ಎಂದರು.
ಜನ ಸಾಮಾನ್ಯರಿಗೆ ಕಣ್ಣಿನ ಸಮಸ್ಯೆಯ ಅರಿವಿನ ಕೊರತೆ ಇದ್ದು, ಕಣ್ಣಿನ ಸಮಸ್ಯೆಯ ಬಗ್ಗೆ ತಿಳಿಸುವ ಅವಶ್ಯಕತೆ ಇದೆ. ದೂರದೃಷ್ಟಿ ಸಮಸ್ಯೆ, ಸಮೀಪ ದೃಷ್ಟಿ ಸಮಸ್ಯೆ ಮುಂತಾದ ಕಣ್ಣಿನ ಸಮಸ್ಯೆಯನ್ನು ಹೋಗಲಾಡಿಸಲು ಆಸ್ಪತ್ರೆಗೆ ತೆರಳಲು ಕೆಲವು ಜನರಿಗೆ ಆರ್ಥಿಕ ಪರಿಸ್ಥಿತಿಯ ತೊಂದರೆ ಇರುತ್ತದೆ. ಆರೋಗ್ಯ ಇಲಾಖೆ ಅವರು ಅರಿವು ಮೂಡಿಸಿ ಎಲ್ಲಾ ವಯಸ್ಸಿನವರಿಗೆ ಕಣ್ಣಿನ ತಪಾಸಣೆ ಮಾಡಿ ದೃಷ್ಟಿದೋಷ ಇರುವವರಿಗೆ ಉಚಿತ ಕನ್ನಡಕ ವಿತರಣೆ ಹಾಗೂ ಆವಶ್ಯಕತೆಯಿರುವವರಿಗೆ ಕಣ್ಣಿನಪೊರೆ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದಾರೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಂಧತ್ವ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ‘ಆಶಾಕಿರಣ’ ಕಾರ್ಯಕ್ರಮವು ಆರಂಭದಲ್ಲಿ 2022-23ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ, ಚಾಮರಾಜನಗರ ಹಾಗೂ 2023-24ನೇ ಸಾಲಿನಲ್ಲಿ ಮಂಡ್ಯ, ಚಿತ್ರದುರ್ಗ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ ಎಂದರು
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ‘ಆಶಾಕಿರಣ’ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಫೆಬ್ರವರಿ 18 ರಂದು ಹಾವೇರಿಯಲ್ಲಿ ಚಾಲನೆ ನೀಡಿದರು. ಆಶಾಕಿರಣ ಕಾರ್ಯಕ್ರಮದಡಿ ಆಯೋಜಿಸಲಾಗುವ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು ಜನಸಾಮಾನ್ಯರಿಗೆ ವರದಾನವಾಗಲಿದ್ದು, ಕಣ್ಣಿನ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ, ಡಾ ಸೋಮಶೇಖರ್ ಮಾತನಾಡಿ ಪ್ರಾಥಮಿಕ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ಮೂಲಕ ಮಂಡ್ಯ ಜಿಲ್ಲೆಯ 18,06,589 ಜನರಿಗೆ ನೇತ್ರ ತಪಾಸಣೆಯನ್ನು ನಡೆಸಿರುತ್ತಾರೆ. ಪ್ರಾಥಮಿಕ ಹಂತದಲ್ಲಿ ಸಮಸ್ಯೆ ಕಂಡುಬಂದ 2,85,029 ಜನರಿಗೆ ನೇತ್ರ ಸಹಾಯಕರ ಮೂಲಕ ಆರೋಗ್ಯ ಕೇಂದ್ರಗಳಲ್ಲಿ ದ್ವಿತೀಯ ಹಂತ ತಪಾಸಣೆ ನಡೆಸಿ 92,080 ಜನರಿಗೆ ದೃಷ್ಟಿದೋಷ, 21,000 ಜನರಿಗೆ ಕಣ್ಣಿನ ಪೊರೆ ಸಮಸ್ಯೆ ಇರುವುದು ಕಂಡುಬಂದಿದೆ. ಆಶಾಕಿರಣ ಕಾರ್ಯಕ್ರಮದಡಿ ಈಗಾಗಲೇ 9,260 ಜನರಿಗೆ ಕನ್ನಡಕಗಳನ್ನು ವಿತರಿಸಿದ್ದು, ಉಳಿಕೆ 81,020 ಜನರಿಗೆ ನವೆಂಬರ್ ಅಂತ್ಯದವರೆಗೆ ವಿತರಿಸಲು ಆಗತ್ಯಕ್ರಮ ಕೈಗೊಳ್ಳಲಾಗಿದೆ ಎಂದರು
ಕಣ್ಣಿನಪೊರೆ ಸಮಸ್ಯೆ ಕಂಡುಬಂದ 21,000 ಜನರಲ್ಲಿ ಈಗಾಗಲೇ 5,000 ಜನರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಗಿದ್ದು, ಉಳಿದ 16,000 ಜನರಿಗೆ ಶಸ್ತ್ರಚಿಕಿತ್ಸೆಗೊಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಯೋಜನೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಪಿ ರವಿಕುಮಾರ್, ವಿಧಾನ ಪರಿಷತ್ ನ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ ಕುಮಾರ, ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಮ್ಮಯ್ಯ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಆರ್ ಸಿ ಹೆಚ್ ಅಧಿಕಾರಿ ಡಾ ಕೆ ಪಿ ಅಶ್ವಥ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply