
ಸ್ವಂತ ಮನೆ ನಮ್ಮ ಹಕ್ಕು ಸಂಘಟನೆಯು ಬೂದನೂರು ಗ್ರಾಮ ಪಂಚಾಯಿತಿಯ ವಿರುದ್ಧ ಆಧಾರ ರಹಿತ ಭ್ರಷ್ಠಾಚಾರದ ಆರೋಪ ಮಾಡಿ, ಪ್ರತಿಭಟನೆ ಮಾಡುತ್ತಿರುವುದು ಪಂಚಾಯಿತಿಯ ಆಡಳಿತ ವ್ಯವಸ್ಥೆಯಲ್ಲಿ ಅಡಚನೆಯನ್ನು ಉಂಟು ಮಾಡುತ್ತಿದ್ದು, ಬೂದನೂರು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೆ.ಕೆಂಪೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಸಂಘಟನೆಯು ನಿರಂತರ ಭ್ರಷ್ಟಾಚಾರದ ಆರೋಪ ಮಾಡುತ್ತಾ ನಿತ್ಯ ತಕರಾರು ಸಲ್ಲಿಸುತ್ತಿದ್ದು, ಇದರಿಂದ ಪಂಚಾಯಿತಿ ಸೇವೆಯಲ್ಲಿ ಹಾಗೂ ಆಡಳಿತಕ್ಕೆ ಸಮಸ್ಯೆ ಎದುರಾಗುತ್ತಿದೆ. ಈ ರೀತಿ ಸುಮಾರು ೩೦ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದು, ಇದುವರೆಗೂ ಯಾವುದೇ ಭ್ರಷ್ಟಾಚಾರದ ಆರೋಪ ಸಾಭೀತಾಗಿಲ್ಲ ಎಂದರು.
ಗ್ರಾ.ಪಂ ವ್ಯಾಪ್ತಿಯಲ್ಲಿನ ಹೊಸ ಬಡಾವಣೆಗೆ ಹೆಸರಿಡುವ ವಿಚಾರವಾಗಿ ಶಾಸಕರ ಹೆಸರನ್ನು ಸೂಚಿಸಿದ ಸ್ವಂತ ಮನೆ ನಮ್ಮ ಹಕ್ಕು ಸಂಘಟನೆಯ ಬಿ.ಕೆ.ಸತೀಶ್ ಅವರ ಸಲಹೆ ಪಡೆಯಲಾಗಿಲ್ಲ. ಈ ಸಂಬಂಧ ಶಾಸಕರೂ ತಮ್ಮ ಹೆಸರಿಡದಂತೆ ಸೂಚಿಸಿದ್ದರು. ಗ್ರಾ.ಪಂ ಸಭೆಯಲ್ಲಿ ಸಾಹುಕಾರ್ ಬಿ.ಎಂ.ರುದ್ರಪ್ಪ ಹೆಸರು ನಾಮಕರಣ ಮಾಡಿದ ಸಂದರ್ಭದಿಂದ ಈ ರೀತಿಯ ಸಮಸ್ಯೆಗಳು ಎದುರಾಗಿದೆ ಎಂದು ದೂರಿದರು.
ಬ್ಯಾಂಕ್ ನೌಕರರ ಸಹಕಾರ ಸಂಘಕ್ಕೆ ಸಂಬಂಧಿಸಿದಂತೆ ಸರ್ವೀಸ್ ರಸ್ತೆ ವಿನ್ಯಾಸ ನಕ್ಷೆಗಾಗಿ ಅಧ್ಯಕ್ಷರಿಗೆ ಲಂಚ ನೀಡಿದ್ದಾರೆ ಎಂಬ ದೂರಿನನ್ವಯ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ವಿಚಾರಣೆಗೆ ಗ್ರಾ.ಪಂಚಾಯಿತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಂತ ಮನೆ ನಮ್ಮ ಹಕ್ಕು ಸಂಘಟನೆಯ ಬಿ.ಕೆ.ಸತೀಶ್ ಮತ್ತಿತರರು ಒಳನುಗ್ಗಿ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಇದುವರೆಗೂ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸ್ವಂತ ಮನೆ ನಮ್ಮ ಹಕ್ಕು ಸಂಘಟನೆಯ ಆಧಾರ ರಹಿತ ಆರೋಪಗಳಿಗೆ ಪುಷ್ಠಿ ನೀಡಿ, ಜಿ.ಪಂ ಸಿಇಓ ತನಿಖಾ ತಂಡ ರಚಿಸಿದ್ದು, ನ್ಯಾಯಯುತ ತನಿಖೆ ನಡೆಸಿ, ಜಿ.ಪಂ ಹಾಗೂ ತಾ.ಪಂ ವ್ಯವಸ್ಥೆಯ ಪರ ನಿಂತು ಸಂಘಟನೆ ಹಾಗೂ ಪಂಚಾಯಿತಿಯ ಎರಡೂ ಕಡೆ ತನಿಖೆ ನಡೆಸಲಿ. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ ಗ್ರಾ.ಪಂಚಾಯಿತಿ ಸದಸ್ಯರುಗಳು ಸೇರಿ ಗ್ರಾಮ ಪಂಚಾಯಿತಿ ಒಕ್ಕೂಟದ ಮುಂದಾಳತ್ವದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ ಅಧ್ಯಕ್ಷ ಮಾನಸ, ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ಪೂರ್ಣಿಮ, ಅರುಣ, ಹೆಚ್.ಎಸ್.ಮಧು, ತಿದಿಗೌಡ ಇದ್ದರು.

Leave a Reply