
ಮಂಡ್ಯ : ಸೂರ್ಯೋದಯಕ್ಕೂ ಮುನ್ನ ನಗರವನ್ನು ಸ್ವಚ್ಚಗೊಳಿಸುವ ಕಾಯಕದಲ್ಲಿ ನಿರತವಾಗುವ ಶ್ರಮಜೀವಿ ಪೌರಕಾರ್ಮಿಕರು ನಿಜವಾದ ಕಾಯಕ ಯೋಗಿಗಳು ಎಂದ ನಗರಸಭೆ ಅಧ್ಯಕ್ಷ ನಾಗೇಶ್ ಹೇಳಿದರು.
ನಗರದ ಪರಮಪೂಜ್ಯ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ ಉದ್ಯಾನವನದಲ್ಲಿ ಸೇವಾನಿವೃತ್ತಿ ಹೊಂದಿದ ಪೌರಕಾರ್ಮಿಕ ಹಾಗೂ ಕರಾಟೆ ತರಬೇತುದಾರರಾದ ನಾರಾಯಣ್ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರನ್ನು ಯಾರೂ ಸಹ ಕೀಳಾಗಿ ಕಾಣಬಾರದು. ಪ್ರತಿದಿನ ನಗರದ ಕಸವನ್ನು ಸ್ವಚ್ಚಗೊಳಿಸುವ ಕೆಲಸದಲ್ಲಿ ಶ್ರಮವಹಿಸುವ ಅವರ ಕಾಯಕ ಇಲ್ಲದಿದ್ದರೆ ನಗರದಲ್ಲಿ ಅನೈರ್ಮಲ್ಯ ತಾಂಡವವಾಡುತ್ತದೆ ಎಂದರು.
ಪೌರಾಯುಕ್ತರಾದ ಪಂಪಶ್ರೀ ಮಾತನಾಡಿ, ಕರಾಟೆಯ ಜೊತೆಗೆ ನಗರದ ಸ್ವಚ್ಚತೆಯಲ್ಲೂ ಉತ್ತಮ ಹೆಸರು ಮಾಡಿರುವ ನಾರಾಯಣ್ ಅವರ ಕಾಯಕ ಶ್ರದ್ಧೆ ಎಲ್ಲರಿಗೂ ಅನುಕರಣೀಯವಾಗಿದೆ.ಪೌರಕಾರ್ಮಿಕ ನಾರಾಯಣ್ ಅವರು ಶಿಸ್ತಿನ ಸಿಪಾಯಿಯಂತೆ ತಮ್ಮ ಸೇವೆಯನ್ನು ಮಂಡ್ಯ ನಗರಸಭೆಯಲ್ಲಿ ಸಲ್ಲಿಸಿದ್ದಾರೆ. ಪೌರಕಾರ್ಮಿಕ ವೃತ್ತಿಯ ಜೊತೆಯಲ್ಲೇ ಕರಾಟೆಯನ್ನು ಮೈಗೂಡಿಸಿಕೊಂಡು ಹಲವಾರು ಮಂದಿಗೆ ಸಾಹಸಕ್ರೀಡೆಯಾದ ಕರಾಟೆಯ ತರಬೇತಿಯನ್ನು ನೀಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿರುವುದು ಎಲ್ಲಾ ಪೌರಕಾರ್ಮಿಕರಗೂ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಪೌರಕಾರ್ಮಿಕರ ಸಂಘನೆಯ ರಾಜ್ಯ ಉಪಾಧ್ಯಕ್ಷರಾದ ನಾಗೇಶ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಕಸಗುಡಿಸುವ ಮಂದಿಯನ್ನೂ ಶರಣರನ್ನಾಗಿಸಿ ಅವರಿಗೆ ಧರ್ಮದೀಕ್ಷೆ ನೀಡಿ ಗೌರವಿಸಿ ಕಾಯಕದಲ್ಲೇ ಕೈಲಾಸ ಕಾಣಬೇಕೆಂಬ ದಿವ್ಯ ಸಂದೇಶವನ್ನು ಸಾರಿದರು. ಅದೇ ಹಾದಿಯಲ್ಲಿ ಇಂದು ಪೌರಕಾರ್ಮಿಕರು ಸಾಗುತ್ತಿರುವುದು ಶ್ಲಾಘನೀಯ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಮಂಜು ಮಾತನಾಡಿ, ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ನಾರಾಯಣ್ ಅವರು ಮಂಡ್ಯ ನಗರದಲ್ಲಿ ಅತ್ಯುತ್ತಮ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಆಶಿಸಿದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಪೌರಾಯುಕ್ತರಾದ ಪಂಪಶ್ರೀ ಹಾಗೂ ಪೌರಕಾರ್ಮಿಕ ನಾರಾಯಣ್ ಅವರಿಗೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ನೀಡಿ ಅಭಿನಂದಿಸಿ ಮಾತನಾಡಿದರು. ನಗರಸಭೆ ಸದಸ್ಯರಾದ ರಜನಿ, ಲಲಿತಾ, ಮುಖಂಡರಾದ ಎಂ.ಆರ್.ರಘು, ಅಶ್ವಥ್, ಪ್ರಕಾಶ್, ನಂಜುAಡಪ್ಪ, ಮುತ್ತಾಲಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply