Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಸಕಾಲಕ್ಕೆ ಕಚೇರಿಗೆ ಹಾಜರಾಗದ ಗ್ರಾ.ಪಂ ಅಧಿಕಾರಿಗಳು – ಕ್ರಮ ಕೈಗೊಳ್ಳದ ಜಿಲ್ಲಾ,ತಾಲೂಕು ಪಂಚಾಯಿತಿ ಅಧಿಕಾರಿಗಳು

 

ವರದಿ – ಎಂ. ಚಾಮರಾಜು

ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಸಕಾಲಕ್ಕೆ ಕಚೇರಿಗೆ ಹಾಜರಾಗದೆ ತೊಂದರೆಯಾಗುತ್ತಿರುವ ಬಗ್ಗೆ ಹಲವು ದೂರುಗಳಿದ್ದರೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆದೇಶ ಸಂಖ್ಯೆ ಗ್ರಾಅಪ/ 62/ ಇ-ಆಡಳಿತ/ 2023 ದಿನಾಂಕ 8.07.2024ರಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಸರ್ಕಾರಿ ಸಿಬ್ಬಂದಿಗಳು ದಿನಕ್ಕೆ ಎರಡು ಬಾರಿ ಬಯೋಮೆಟ್ರಿಕ್ ಹಾಜರಾತಿ ನೀಡುವುದು ಕಡ್ಡಾಯವಾಗಿರುತ್ತದೆ.ಆದರೆ ಬಯೋಮೆಟ್ರಿಕ್ ವರದಿಗಳನ್ನು ಗಮನಿಸಿದಾಗ ಬಹಳಷ್ಟು ಸರ್ಕಾರಿ ಸಿಬ್ಬಂದಿಗಳು ವಿಳಂಬವಾಗಿ ಕಚೇರಿಗೆ ಆಗಮಿಸುವುದು ಮತ್ತು ಎರಡನೇ ಬಾರಿ ಬಯೋಮೆಟ್ರಿಕ್ ಹಾಜರಾತಿ ನೀಡದೇ ಇರುವುದು ದಾಖಲೆಗಳಿಂದ ಕಂಡುಬಂದಿದೆ.

ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಪಿಡಿಒ, ಕಾರ್ಯದರ್ಶಿ, ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳು ಕೇಂದ್ರ ಸ್ಥಾನದಲ್ಲಿ ವಾಸ ಇರಬೇಕೆಂಬ ಸರಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ, ಗ್ರಾಮ ಪಂಚಾಯಿತಿ ಅಧಿಕಾರಿಗಳು ವಾಸವಿರದ ಬಗ್ಗೆ ಪ್ರಶ್ನಿಸಬೇಕಾದ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಹಲವು ಅಧಿಕಾರಿಗಳೇ ಕೇಂದ್ರ ಸ್ಥಾನದಲ್ಲಿ ವಾಸವಿರದೇ ಬೆಂಗಳೂರು- ಮೈಸೂರು ಸೇರಿದಂತೆ ಹಲವು ಕಡೆಗಳಿಂದ ಕಚೇರಿಗಳಿಗೆ ಬಂದು ಹೋಗುತ್ತಿದ್ದಾರೆ.
( ಬೆಳಗಿನ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಬಸ್ ನಿಲ್ದಾಣಗಳ ಬಳಿ ಗಮನಿಸಿದರೆ ಈ ಬಗ್ಗೆ ಗೊತ್ತಾಗುತ್ತದೆ )

ಕೆಲವು ಪ್ರಬಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಗದಿತ ಅವಧಿಗೆ ಬಯೋಮೆಟ್ರಿಕ್ ಹಾಜರಾತಿ ನೀಡಿ ಕಚೇರಿಯಿಂದ ಹೊರಟರೆ, ಯಾವಾಗ ಮತ್ತೆ ಕಚೇರಿಗೆ ಬರುತ್ತರೋ ಯಾರಿಗೂ ಗೊತ್ತಿರುವುದಿಲ್ಲ, ಯಾರಾದರೂ ಕೇಳಿದರೆ, ಫೀಲ್ಡ್ ವರ್ಕ್ ನಲ್ಲಿದ್ದೇನೆ, ತಾಲೂಕು ಪಂಚಾಯತಿ ಕಚೇರಿಗೆ ಹೋಗಿದ್ದೇನೆ, ಎಂಬ ಹಲವು ಕಾರಣಗಳ ಉತ್ತರಗಳು ಸಿಗುತ್ತವೆ.
ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ, ಆದರೆ ಕೆಲವು ( ಬಡ ) ಅಧಿಕಾರಿಗಳ ವಿರುದ್ಧ ಮಾತ್ರ ಇವರ ಅಧಿಕಾರ ಚಲಾಯಿಸಲು ಮುಂದಾಗುತ್ತಾರೆ.
ತಡವಾಗಿ ಹೋಗುವ ಅಧಿಕಾರಿಗಳು ಇಲ್ಲಸಲ್ಲದ ಸಬೂಬುಗಳನ್ನು ಬಯೋಮೆಟ್ರಿಕ್ ಹಾಜರಾತಿ ನೀಡುವ ಸಂದರ್ಭದಲ್ಲಿ ದಾಖಲಿಸುವುದನ್ನು ನೋಡಿದರೆ ಎಂತವರಿಗೂ ನಗು ಬರುತ್ತದೆ.ಕಚೇರಿಗೆ ತಡವಾಗಿ ಹೋಗಿದ್ದಕ್ಕೆ ಇಂಟರ್ನೆಟ್ ಸಮಸ್ಯೆ, ಫೀಲ್ಡ್ ವರ್ಕ್ ಹೋಗಿದ್ದೆ, ತಾಲೂಕು ಪಂಚಾಯಿತಿ ಕಚೇರಿಗೆ ಹೋಗಿದ್ದೆ, ವಕೀಲರನ್ನು ನೋಡಿಲು ಹೋಗಿದ್ದೆ, ಎಂಬ ಮಾಹಿತಿಗಳನ್ನು ನೀಡುತ್ತಾ ಇದ್ದಾರೆ.
ಸರ್ಕಾರವು ಕಚೇರಿಗೆ ತೆರಳಿ ಬಯೋಮೆಟ್ರಿಕ್ ಹಾಜರಾತಿ ನೀಡಿದ ನಂತರ ವಿವಿಧ ಕೆಲಸಗಳಿಗೆ ಕರ್ಚೆರಿಯಿಂದ ಹೊರ ಹೋಗಬೇಕಾದರೆ, ಕಚೇರಿಯ ಚಲನವಲನ ಪುಸ್ತಕದಲ್ಲಿ ನಮೂದಿಸಿ ಹೋಗಬೇಕೆಂದು ಹಲವು ಆದೇಶಗಳನ್ನು ಮಾಡಿದ್ದರೂ ಸಹ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ,ಗ್ರಾಮ ಪಂಚಾಯಿತಿ ಅಧಿಕಾರಿಗಳು  ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ.

ಇನ್ನು ಸರ್ಕಾರ ನೀಡಿರುವ ಮೊಬೈಲ್ ಸಿಮ್ ಗಳನ್ನು ಬಳಸದಿರುವ ಬಗ್ಗೆ ಹಲವು ಹೋರಾಟಗಾರರು ದೂರು ನೀಡಿದ್ದರೂ ಸಹ ಇದುವರೆಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳಾಗಲಿ, ತಾಲೂಕು ಪಂಚಾಯಿತಿ ಅಧಿಕಾರಿಗಳಾಗಲಿ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿಯು ಮಂಡ್ಯ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳು ಡಿಜಿಟಲೀಕರಣಕ್ಕೆ ಒತ್ತು ನೀಡದೆ ನಿರ್ಲಕ್ಷ ತೋರಿವೆ. ಸರ್ಕಾರದ ಲೆಕ್ಕಾಚಾರದಲ್ಲಿ ಗ್ರಾಮ ಪಂಚಾಯಿತಿಗಳು ಡಿಜಿಟಲಿಕರಣ ವಾಗಿವೆ. ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯತಿಗಳು ಸ್ವತಹ ವೆಬ್ ಸೈಟ್ ರಚನೆ ಮಾಡಿ, ಸಾರ್ವಜನಿಕರಿಗೆ ಎಲ್ಲಾ ಮಾಹಿತಿಯನ್ನು ನೀಡಲು ವಿಫಲವಾಗಿವೆ ( ಹಿಂದೆ ಸರ್ಕಾರದ ಆದೇಶದಂತೆ ರಚನೆಯಾಗಿದ್ದ ವೆಬ್ ಸೈಟ್ ಗಳನ್ನು ಗ್ರಾಮ ಪಂಚಾಯಿತಿಗಳು ಸರಿಯಾಗಿ ನಿರ್ವಹಣೆ ಮಾಡಲಿಲ್ಲ )

ಸರ್ಕಾರದ, ಜಿಲ್ಲಾ, ತಾಲೂಕು ಪಂಚಾಯಿತಿ ಕಚೇರಿಯ ಆದೇಶವನ್ನು ಪಾಲಿಸದೇ ನಿರ್ಲಕ್ಷ ತೋರಿಸುತ್ತಿರುವ ಗ್ರಾಮ ಪಂಚಾಯಿತಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ಕೆಸಿಎಸ್ಆರ್ ನಿಯಮದಂತೆ ಕ್ರಮ ಕೈಗೊಳ್ಳಲು ವಿಫಲವಾಗುತ್ತಿರುವುದು ಏಕೆ ಎಂಬುದೇ ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿದೆ.

ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗುವವರೇ ಎಂಬುದನ್ನು ಕಾದು ನೋಡಬೇಕಾಗಿದೆ….

Leave a Reply

Your email address will not be published. Required fields are marked *

error: Content is protected !!