Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಂಡರೆ ಬದುಕು ಸಾರ್ಥಕ – ಸಂತೋಷ್ ಹೆಗ್ಡೆ

ಮಂಡ್ಯ:ಹಿರಿಯರು ಕಟ್ಟಿಕೊಟ್ಟ ಮಾನವೀಯತೆ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿ ಮುಂದುವರೆದರೆ ನಮ್ಮ ಬದುಕು ಸಾರ್ಥಕ ಆಗುವುದು ಮಾತ್ರವಲ್ಲ,ಸಮಾಜ ಹಾಗೂ ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಯುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.
ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್ ಹತ್ತಿರವಿರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ದಶಮಾನೋತ್ಸವ ಸಂಭ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳಿಗೆ ವ್ಯಕ್ತಿಗಳು ಕಾರಣರಲ್ಲ.ಇದಕ್ಕೆಲ್ಲ ಸಮಾಜವೇ ಕಾರಣ.ಹಿಂದೆ ಒಳ್ಳೆಯದು ಮಾಡಿದವರನ್ನು ಗುರುತಿಸಿ ಸನ್ಮಾನಿಸುವ ಹಾಗೂ ತಪ್ಪು ಮಾಡಿದವರನ್ನು ಬಹಿಷ್ಕರಿಸುವ ಸಮಾಜ ಇತ್ತು.ಆದರೆ ಈಗ ಸಮಾಜದ ಭಾವನೆಯಲ್ಲಿ ಬದಲಾವಣೆಯಾಗಿದೆ.ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವು ಇದ್ದೇವೆ ಎಂದರು.
ಇಂತಹ ಸಮಾಜದಲ್ಲಿ ಇಂದು ಶ್ರೀಮಂತರಾಗುವುದಕ್ಕೆ ಪೈಪೋಟಿ ಆರಂಭವಾಗಿದೆ.ಶ್ರೀಮಂತರಾಗು ವುದು ತಪ್ಪಲ್ಲ.ಆದರೆ ಕಾನೂನಿನ ಚೌಕಟ್ಟಿನಲ್ಲಿ ಸಂಪತ್ತು ಗಳಿಸಬೇಕೆ ಹೊರತು ಇನ್ನೊಬ್ಬರ ಜೇಬಿಗೆ ಕೈ ಹಾಕಿ ಅಥವಾ ಹೊಟ್ಟೆಗೆ ಕಲ್ಲು ಹಾಕಿ ಆಗುವುದಲ್ಲ.ಅಂತಹ ಸಂಪತ್ತಿನಿಂದ ಸಂತೋಷ ಬರುವುದಿಲ್ಲ ಎಂದು ಅವರು ತಿಳಿಸಿದರು.
ದೇಶದಲ್ಲಿ ಬಹಳಷ್ಡು ಅಭಿವೃದ್ಧಿ ಆಗಿದೆ.ಅದರಲ್ಲಿ ಬಹಳಷ್ಟು ದುರಾಸೆಯ ಅಭಿವೃದ್ಧಿಯೂ ಆಗಿದೆ. ಹಿಂದೆ ನಡೆದಿರುವಂತಹ ಜೀಪ್ ಹಗರಣ, ಬೋಪೋರ್ಸ್ ಹಗರಣ, ಕಾಮನ್ ವೆಲ್ತ್ ಹಗರಣ, 2 ಜಿ ಹಗರಣ, ಕೋಲ್ಗೇಟ್ ಹಗರಣ ಹೀಗೆ ಸಾಲು ಸಾಲು ಹಗರಣಗಳಲ್ಲಿ ಕೋಟಿ ಕೋಟಿ ಹಣಗಳು ಸುರಿದು ಹೋದರೆ ದೇಶ ಎಲ್ಲಿ ತಲುಪ ಬಹುದು ಎಂಬುದನ್ನು ನಾವೇ ಯೋಚನೆ ಮಾಡಬೇಕಿದೆ.ದುರಾಸೆ ಇನ್ನೂ ಕಡಿಮೆ ಆಗಿಲ್ಲ.ಇದೆಲ್ಲ ಬದಲಾವಣೆಯಾಗಬೇಕಿದೆ ಎಂದರು.
ದುರಾಸೆ, ಭ್ರಷ್ಟಾಚಾರದ ಮೂಲಕ ಸೋರಿಕೊಂಡು ಹೋಗುವ ಹಣ ಕಮ್ಮಿಯಾದರೆ ನಮ್ಮ ದೇಶವು ಖಂಡಿತವಾಗಿಯೂ ಮೊದಲನೆಯ ಸ್ಥಾನಕ್ಕೆ ಹೋಗುತ್ತದೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು.ದುರಾಸೆಯ ಹಣದಿಂದ ಶಾಂತಿ ಸೌಹಾರ್ದತೆ ಖಂಡಿತವಾಗಿಯೂ ನೆಲೆಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದಿನ ಸಮಾಜದಲ್ಲಿ ತಂದೆ ತಾಯಿಗಳಿಬ್ಬರೂ ಕೆಲಸಕ್ಕೆ ಹೋಗುತ್ತಾರೆ,ಸದಾ ಕೆಲಸದ ಒತ್ತಡದಲ್ಲಿರುತ್ತಾರೆ.ಮಕ್ಕಳಲ್ಲಿ ಮಾತನಾಡಲೂ ಸಮಯವಿರು ವುದಿಲ್ಲ.ಮಕ್ಕಳ ಕೈಯಲ್ಲಿ ಐಪೋನ್ ಮೊಬೈಲ್ ಗಳಿರುತ್ತವೆ.ಮಕ್ಕಳು ದಾರಿ ತಪ್ಪುವ ಮೊದಲು ಪಾಲಕರು‌ ದಿನದಲ್ಲಿ ಸ್ವಲ್ಪವಾದರೂ ಮಕ್ಕಳಿ ಗಾಗಿ ಸಮಯ ಕೊಡಿ ಎಂದರು.
ಜನರು ಸೇವೆಗಾಗಿ ರಾಜಕೀಯಕ್ಕೆ ಬರಬೇಕೇ ಹೊರತು ಹಣ ಗಳಿಸಲು ಅಲ್ಲ. ದುರದೃಷ್ಟವಶಾತ್‌ ಇಂದು ರಾಜಕೀಯವು ಒಂದು ವೃತ್ತಿಯಾಗಿ ಮಾರ್ಪಟ್ಟಿದೆ.ವಿದ್ಯಾರ್ಥಿಗಳಲ್ಲಿ ಶಾಂತಿ, ಸೌಹಾರ್ದತೆ ಇರಬೇಕಾದರೆ ಮಾನವೀಯತೆ ಇರಬೇಕು ದುರಾಸೆಗಳನ್ನು ತ್ಯಜಿಸಿ ಜೀವನದಲ್ಲಿ ತೃಪ್ತಿ,ಮಾನವೀಯ ಮೌಲ್ಯಗಳು ಹಾಗೂ ಶಾಂತಿ ಸಹಬಾಳ್ವೆ ಅಳವಡಿಸಿಕೊಂಡು ದೇಶದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡಲು ಶ್ರಮಿಸಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ ಮಾತನಾಡಿ ಜಗತ್ತಿಗೆ ಬೇಕಾದ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಶೋಧನೆಗಳು ನಡೆಯಬೇಕು. ಅವು ರಾಷ್ಟ್ರದ ಬೆಳವಣಿಗೆಗೆ ಪೂರಕವಾಗಿರಬೇಕು ಹೊಸ ಆವಿಷ್ಕಾರಗಳು ಯಾರಿಗೂ ಅಪಾಯವನ್ನುಂಟುಮಾಡದೆ ಒಳಿತನ್ನು ಉಂಟುಮಾಡುವಂತಿದ್ದರೆ ಅವು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದು ಉದ್ಯೋಗ ಗಳಿಸುವುದನ್ನೇ ಗುರಿಯಾಗಿಸಿ ಕೊಳ್ಳಬಾರದು.ನಿರಂತರ ಕಲಿಕೆಯೊಂದಿಗೆ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಂಡು ನಿರ್ಧಿಷ್ಟ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವುದಕ್ಕೆ ಯುವ ಮನಸ್ಸುಗಳು ಮುಂದಾಗಬೇಕು. ಅದರಿಂದ ರಾಷ್ಟ್ರದ ಅಭಿವೃದ್ಧಿಯಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ ಎಂದು ಹೇಳಿದರು.
ಹಿಂದೆಲ್ಲಾ ಶಿಕ್ಷಣ ಕಲಿಯಲು ಹೆಚ್ಚಿನ ಅನುಕೂಲಗಳಿರಲಿಲ್ಲ.ಈಗ ಅವಕಾಶಗಳ ಬಾಗಿಲು ಎಲ್ಲೆಡೆ ತೆರೆದುಕೊಂಡಿದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಬೆಳವಣಿಗೆಯನ್ನು ಕಂಡುಕೊಳ್ಳಬೇಕು.ತಾವು ಕಲಿತ ವಿದ್ಯೆ ಸಮಾಜದ ಹಾಗೂ ರಾಷ್ಟçದ ಬೆಳವಣಿಗೆಗೆ ಪೂರಕವಾಗುವಂತೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾಮಾನ್ಯವಾಗಿ ಅಕಾಡೆಮಿಕ್ ಇನ್ಸ್ಟಿಟ್ಯೂಟ್ಗಳಲ್ಲಿ ರಿಸರ್ಚ್ ಗೆ ಒತ್ತು ಕೊಡುವುದು ಕಡಿಮೆ,ಇಂತಹ ಸಂದರ್ಭಗಳಲ್ಲಿ ಮಕ್ಕಳು ಓದಬೇಕಾದರೆ ರಿಸರ್ಚ್ ಬಂದರೆ ವಿಜ್ಞಾನಿಗಳಾಗುತ್ತಾರೆ.
ಕಾವೇರಿ ತಾಂತ್ರಿಕ ಮಹಾವಿದ್ಯಾ ಲಯವನ್ನು ಮಂಗಳವಾರ ಪ್ರಾರಂಭ ಮಾಡಿ ಸಮಸ್ಯೆಯನ್ನು ಹಾದಿ ಹತ್ತನೇ ವರ್ಷಕ್ಕೆ ಪಾದರ್ಪಣೆ ಮಾಡಿ ಈ ಸಂಸ್ಥೆ ನೂರು ವರ್ಷ ಪೂರೈಸಲಿ ಎಂದು ಹೇಳಿದರು.
ಸಿಇಆರ್ ಟಿ ಕಾರ್ಯದರ್ಶಿ ಪ್ರೊ.ಟಿ.ನಾಗೇಂದ್ರ ಮಾತನಾಡಿ ಕಾವೇರಿ ಎಜುಕೇಶನ್ ಅಂಡ್ ರಿಸರ್ಚ್ ಟ್ರಸ್ಟ್ ನ್ನು 2010ರಲ್ಲಿ ಸೈನ್ಸ್ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣವನ್ನು ತಲುಪಿಸುವ ಸದುದ್ದೇಶದಿಂದ ಪ್ರಾರಂಭಿಸ ಲಾಯಿತು ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಸಂಶೋಧನೆ ಕಡೆ ಗಮನ ಸೆಳೆಯುವುದು, ಪ್ರಯೋಗಗಳನ್ನು ಮಾಡಿಸುವುದು. ಒಂದು ದೇಶದ ಅಭಿವೃದ್ಧಿಗೆ ವಿಜ್ಞಾನ ತಂತ್ರಜ್ಞಾನ,ಸಂಶೋಧನೆ ಮುಖ್ಯ ಕಾರಣ ಎಂದು ಹೇಳಿದರು.
ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ ನಂದನಾಥಸ್ವಾಮಿ,ಸಿಇಆರ್ ಟಿ ಅಧ್ಯಕ್ಷ ಡಾ.ಹೆಚ್.ಪಿ.ರಾಜು, ಆಡಳಿತ ಮಂಡಳಿಯ ನಿರ್ದೇಶಕರಾದ ಡಿ.ಕೃಷ್ಣೇಗೌಡ, ಗಂಗಾಧರ್ ಗೌಡ, ಕೆ.ಎಸ್. ಶಿವಕುಮಾರ್,ಕೆ.ಟಿ.ಶ್ರೀಧರ್, ಕೆ.ಮಲ್ಲಿಕಾರ್ಜುನ, ಬಿ.ಎಂ.ತಮ್ಮಣ್ಣ, ಶ್ರೀಕಂಠಪ್ಪ, ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!