
ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ಒಂದು ದಿನದ ವೇತನವನ್ನು ಕಟಾಯಿಸಿ ವಂತಿಗೆಯಾಗಿ ನೀಡಿರುವುದು ಸಂಪೂರ್ಣವಾಗಿ ಸಾಹಿತ್ಯ ಸಮ್ಮೇಳನಕ್ಕೆ ನೀಡಲಾಗಿದೆ ಎಂಬ ಮಾಹಿತಿಯು ಕೆಲವರಲ್ಲಿ ಗೊಂದಲವನ್ನು ಉಂಟು ಮಾಡಿದೆ.
ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ದಿನಾಂಕ 14.11.2024ಲ್ಲಿ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ, ದಿನಾಂಕ 20.12.2024 ರಿಂದ ದಿನಾಂಕ 22.12.2024ರ ವರೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಜಿಲ್ಲೆಯ ನೌಕರರ ಒಂದು ದಿನದ ವೇತನವನ್ನು ವಂತಿಗೆಯಾಗಿ ನೀಡಲು ಸೂಕ್ತ ಆದೇಶ ಹೊರಡಿಸಬೇಕೆಂದು ಕೋರಿದ್ದರು.
ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರಿ ನೌಕರರ ವೇತನವನ್ನು ಕಟಾಯಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಉಮಾ ಕೆ. ಸರ್ಕಾರದ ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-2) ಇವರು ಮಂಡ್ಯ ಜಿಲ್ಲಾಧಿಕಾರಿಗಳ ಪತ್ರ ದಿನಾಂಕ 14/11/2024 ಉಲ್ಲೇಖಿಸಿ, 27/11/2024 ರಲ್ಲಿ ಆದೇಶವನ್ನು ಹೊರಡಿಸಿದ್ದಾರೆ.
ಅದರಂತೆ ಸಾಹಿತ್ಯ ಸಮ್ಮೇಳನಕ್ಕಾಗಿ ಸಂಗ್ರಹವಾಗುವ ಕ್ರೋಢೀಕೃತ ವಂತಿಗೆ ಮೊತ್ತದ ಶೇ.70 ರಷ್ಟನ್ನು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆಯಾಗಿ ನೀಡಿ, ಉಳಿದ ಶೇಕಡ 30ರಷ್ಟು ಮೊತ್ತವನ್ನು ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಮುದಾಯಭವನದ ನಿರ್ಮಾಣದ ಉದ್ದೇಶಕ್ಕೆ ಬಳಸಿಕೊಳ್ಳಲು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಮಂಡ್ಯ ಜಿಲ್ಲೆಯ ಸರ್ಕಾರಿ ನೌಕರರು ಸಾಹಿತ್ಯ ಸಮ್ಮೇಳನಕ್ಕಾಗಿ ನೀಡುತ್ತಿರುವ ಒಂದು ವೇತನವು ಸಂಪೂರ್ಣವಾಗಿ ಸಾಹಿತ್ಯ ಸಮ್ಮೇಳನಕ್ಕಾಗಿ ಅಲ್ಲ. ಸಾಹಿತ್ಯ ಸಮ್ಮೇಳನದ ಜೊತೆಗೆ ಸರ್ಕಾರಿ ನೌಕರರ ಸಮುದಾಯ ಭವನದ ನಿರ್ಮಾಣಕ್ಕೂ ಬಳಕೆ ಆಗುತ್ತದೆ.

Leave a Reply