Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಗ್ರಾಮೀಣ ಭಾಗದ ಮಕ್ಕಳಲ್ಲಿ ಮಾತೃಭಾಷಾ ಕಲಿಕೆ ಪ್ರಮಾಣ ಕುಸಿಯುತ್ತಿದೆ – ಹೆಚ್.ಡಿ.ಕುಮಾರಸ್ವಾಮಿ

ಪೋಷಕರ ಮನಸ್ಥಿತಿ ಹಾಗೂ ಪೈಪೋಟಿ ಮನೋಭಾವನೆಯಿಂದ ಗ್ರಾಮೀಣ ಭಾಗದ ಮಕ್ಕಳ ಮಾತೃಭಾಷಾ ಕಲಿಕೆ ಪ್ರಮಾಣ ಕುಸಿಯುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಸಮ್ಮೇಳನದ ಅಧ್ಯಕ್ಷ ಡಾ.ನಾಡೋಜ ಗೊ.ರು.ಚನ್ನಬಸಪ್ಪ ಅವರನ್ನು ಅಭಿನಂದಿಸಿ ಮಾತನಾಡಿದ ಅವರು ಪೋಷಕರ ಮನಸ್ಥಿತಿ ಹಾಗೂ ಪೈಪೋಟಿ ಮನೋಭಾವನೆಯಿಂದ ಗ್ರಾಮೀಣ ಭಾಗದ ಮಕ್ಕಳ ಮಾತೃಭಾಷಾ ಕಲಿಕೆ ಪ್ರಮಾಣ ಕುಸಿಯುತ್ತಿದೆ. ನಗರ ಪ್ರದೇಶಗಳ ಮಕ್ಕಳ ಜತೆ ಅವರು ಪೈಪೋಟಿ ನಡೆಸಬೇಕಿದೆ. ಹೀಗಾಗಿ ಪೋಷಕರ ಆಲೋಚನೆಯೇ ಬೇರೆಯಾಗಿದೆ. ಅವರಿಗೆ ಮಕ್ಕಳ ಭವಿಷ್ಯವನ್ನು ರೂಪಿಸುವುದೇ ಸವಾಲಿನ ಕೆಲಸವಾಗಿದೆ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆದಾಗ, ಸಾವಿರ ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲು ಹೊರಟಿದ್ದು ನಿಜ. ಕನ್ನಡಕ್ಕೆ ಅಪಾಯ ಉಂಟು ಮಾಡಬೇಕು ಎಂದು ಆ ನಿರ್ಧಾರ ಮಾಡಲಿಲ್ಲ. ನಗರ ಪ್ರದೇಶಗಳ ಮಕ್ಕಳ ಜತೆ ಪೈಪೋಟಿಗೆ ಹಳ್ಳಿ ಮಕ್ಕಳನ್ನು ಸಜ್ಜು ಮಾಡುವ ಸದುದ್ದೇಶದಿಂದ ನಾನು ಆ ನಿರ್ಧಾರ ಮಾಡಿದ್ದೆ. ಜತೆಗೆ, ಕಲಿಕೆಯಲ್ಲಿ ಕನ್ನಡಕ್ಕೆ ಒತ್ತು ಕೊಡುವ ಕೆಲಸವನ್ನು ನಾನು ಮಾಡಿದ್ದೆ ಎಂದು ಕೇಂದ್ರ ಸಚಿವರು ವಿವರಿಸಿದರು.
ಸಮ್ಮೇಳನ ಸರ್ವಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಸಮ್ಮೇಳನದ ಪ್ರಧಾನ ಭಾಷಣದಲ್ಲಿ ಅನೇಕ ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ. ನಾಡಿಗೆ ಅವರು ಕೊಟ್ಟಿರುವ ಸಂದೇಶಗಳನ್ನು ಜಾರಿಗೆ ತರಬೇಕು, ಅದು ಆಡಳಿತ ನಡೆಸುವವರ ಕರ್ತವ್ಯ. ಅವರ ಆಶಯಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವುದು ನನ್ನ ಬಲವಾದ ಒತ್ತಾಸೆಯಾಗಿದೆ ಎಂದು ಅವರು ಒತ್ತಿ ಹೇಳಿದರು.

ತ್ರಿಭಾಷಾ ಸೂತ್ರಕ್ಕಿಂತ ದ್ವಿಭಾಷಾ ಸೂತ್ರ ಅಗತ್ಯ ಎಂದು ಸಮ್ಮೇಳನ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ. ಆದರೆ, ಗ್ರಾಮಿಣ ಪ್ರದೇಶದ ಪೋಷಕರಿಗೆ ಬೃಹತ್ತಾದ ಸವಾಲು ಇದೆ. ಒಂದು ಕಡೆ ತಮ್ಮ ಮಾತೃಭಾಷೆ ಕನ್ನಡವನ್ನು ಉಳಿಸಬೇಕು, ಇನ್ನೊಂದು ಕಡೆ ಜಾಗತಿಕ ಓಟಕ್ಕೆ ಅನುಗುಣವಾಗಿ ತಮ್ಮ ಮಕ್ಕಳ ಭವಿಷ್ಯವನ್ನೂ ಕಟ್ಟಿಕೊಡಬೇಕು. ಇಂತಹ ತಳಮಳ, ಸವಾಲು, ಆತಂಕದಲ್ಲಿ ಪೋಷಕರು ಇದ್ದಾರೆ. ಅದಕ್ಕೆ ಪರಿಹಾರವೇನು ಎಂಬ ಬಗ್ಗೆ ನಾವೆಲ್ಲರೂ ಆಲೋಚನೆ ಮಾಡಬೇಕು ಎಂದು ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.

ಅನ್ಯಭಾಷೆಗಳ ಹೇರಿಕೆಯ ಬಗ್ಗೆ ಇರುವ ಆತಂಕಗಳ ಬಗ್ಗೆ ಅಧ್ಯಕ್ಷರು ಚರ್ಚೆ ಮಾಡಿದ್ದಾರೆ. ಅವರ ಅಷ್ಟೂ ಭಾಷಣವನ್ನು ಓದಿದ್ದೇನೆ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಭಾಷಣಕ್ಕೆ ಈ ವೇದಿಕೆಯನ್ನು ಬಳಕೆ ಮಾಡಿಕೊಳ್ಳಲಾರೆ, ಮಾಡಿಕೊಳ್ಳಬಾರದು ಕೂಡ. ಕನ್ನಡ ಶಾಲೆಗಳಿಗೆ ಪ್ರೋತ್ಸಾಹ ಕೊಡುವ ವಿಷಯದಲ್ಲಿ ಲೋಪಗಳಾಗಿವೆ. ಅದನ್ನು ನಾವು ಸರಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮಕ್ಕಳು, ಪೋಷಕರು ಮಾತೃಭಾಷೆಯಿಂದ ವಿಮುಖರಾಗುತ್ತಾರೆ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!