Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ಐಶ್ವರ್ಯಗೌಡರ ತನಿಖೆ ಸರಿಯಾದ ಹಾದಿಯಲ್ಲಿ ನಡೆಯಲಿ : ಕೆ ಅನ್ನದಾನಿ

ಕಿರುಗಾವಲು ಗ್ರಾಮದ ಐಶ್ವರ್ಯಗೌಡ ಅವರನ್ನು ಬಂಧಿಸಲಾಗಿದ್ದು, ಸದರಿ ವಿಷಯದ ತನಿಖೆ ಸರಿಯಾದ ಹಾದಿಯಲ್ಲಿ ಕೊಂಡೊಯ್ಯಬೇಕು ಮಾಜಿ ಶಾಸಕ ಕೆ ಅನ್ನದಾನಿ ಆಗ್ರಹಿಸಿದರು.

ಐಶ್ವರ್ಯಗೌಡ ಅಲಿಯಾಸ್ ನವ್ಯಶ್ರೀ ಅವರ ಅನಾಚಾರಗಳು ಕಿರುಗಾವಲು ಗ್ರಾಮದಿಂದಲೇ ಪ್ರಾರಂಭವಾಗಿದ್ದು, ಅವರೊಟ್ಟಿಗೆ ಇಲ್ಲಿಂದಲೇ ಹಲವು ಸ್ಥಳೀಯ ಕಾಂಗ್ರೆಸ್ಸಿಗರು ಕೈಜೋಡಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ ಅವರು, ಅವರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ಸಿಗರು ಮಾತ್ರ ಭಾಗವಹಿಸುವ ಭಾವಚಿತ್ರಗಳು ಇವೆ ಎಂದರು.
ತಾಲೂಕಿನ ಕಾಂಗ್ರೆಸ್ ನಾಯಕರು ಐಶ್ವರ್ಯ ಗೌಡ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಅವರಿಂದ ಆತಿಥ್ಯ ಸ್ವೀಕರಿಸಿದ್ದಾರೆ. ಈ ಸಂಬಂಧ ತಾಲೂಕಿನ ನಾಯಕರ ಹೆಸರು ಮಾಧ್ಯಮಗಳಲ್ಲಿ ಬಹಿರಂಗಗೊಂಡಿದ್ದು, ಕಾಲ ಕ್ರಮೇಣ ಬದಲಾಗಿವೆ ಎಂದ ಅವರು, ತಾಲೂಕಿನ ವಿನಯ್ ಕುಲಕರ್ಣಿ ಹಾಗೂ ಶಾಸಕ ನರೇಂದ್ರಸ್ವಾಮಿ ಹೆಸರುಗಳು ಬಹಿರಂಗಗೊಂಡಿದ್ದವು. ಇದು ತಾಲೂಕಿನ ಮುಖಂಡರು ಐಶ್ವರ್ಯಗೌಡ ಪ್ರಕರಣದಲ್ಲಿ ಭಾಗಿಯಾದಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಬಹಿರಂಗವಾಗಿ ಹೇಳಿದರು.
ಸದರಿ ಪ್ರಕರಣದಲ್ಲಿ ಸರ್ಕಾರದ್ದೇ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಪ್ರಕರಣದ ತನಿಖೆ ಹಾದಿ ತಪ್ಪುವ ಆತಂಕವಿದೆ. ಯಾವುದೇ ಕಾರಣಕ್ಕೂ ಸದರಿ ಪ್ರಕರಣದ ತನಿಖೆಯನ್ನು ಲಘುವಾಗಿ ಪರಿಗಣಿಸದೇ ಕಿರುಗಾವಲು ಗ್ರಾಮದಿಂದಲೇ ತನಿಖೆ ಆರಂಭಿಸಬೇಕು. ಜಿಲ್ಲೆಯಲ್ಲಿಯೂ ಐಶ್ವರ್ಯಗೌಡ ಅವರಿಂದ ವಂಚಿತರಾಗಿರುವ ೪ ಪ್ರಕರಣಗಳಿವೆ. ೨೦೨೩ರ ಸಾರ್ವತ್ರಿಕ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಐಶ್ವರ್ಯಗೌಡ ಅವರ ನಡುವೆ ಹಣದ ವ್ಯವಹಾರ ನಡೆದಿದೆ ಎಂಬ ಗುಮಾನಿಯಿದೆ ಎಂದು ಗಂಭೀರ ಆರೋಪಿಸಿದರು.
ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ ವಿರುದ್ಧ ೨-೩ ದೂರು ದಾಖಲಾಗಿದೆ. ಅವರ ಹಣಕಾಸು ಹಾಗೂ ಚಿನ್ನದ ವ್ಯವಹಾರದಲ್ಲಿ ಕಾಂಗ್ರೆಸ್ಸಿಗರು ಬೆಂಬಲ ನೀಡಿದ್ದರಿಂದಾಗಿ ಇಂದು ಐಶ್ವರ್ಯಗೌಡ ರಾಜ್ಯ ಮಟ್ಟದಲ್ಲಿ ಅನ್ಯಾಯ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ದೂರಿದರು.

ಶಾಸಕ ಸ್ಥಾನದಲ್ಲಿ ಮುಂದುವರೆಯಲು ನರೇಂದ್ರಸ್ವಾಮಿಗೆ ಯಾವ ಹಕ್ಕಿದೆ.?
ರಾಜ್ಯದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತ ಹೊರತು ಪಡಿಸಿ, ಯಾರ ಸಿದ್ದಾಂತ ನಡೆಯಬೇಕು, ಯಾವ ಸಿದ್ದಾಂತವನ್ನು ಪಾಲಿಸಬೇಕು ಎಂಬುದನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಸ್ತಾಪಿಸಿದ್ದು, ಅಂಬೇಡ್ಕರ್ ಸಿದ್ದಾಂತ ಪಾಲಿಸಿದ ಅವರು ಅಂಬೇಡ್ಕರ್ ಅವರ ಮೀಸಲಾತಿಯಿಂದ ಗೆದ್ದ ಅವರಿಗೆ ಶಾಸಕ ಸ್ಥಾನದಲ್ಲಿ ಮುಂದುವರೆಯಲು ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
ಅಮಿತ್ ಶಾ ಅವರು ಅಂಬೇಡ್ಕರ್ ವಿರುದ್ಧ ಉದ್ದೇಶ ಪೂರಕವಾಗಿ ಹೇಳಿಕೆ ನೀಡಿದ್ದರೆ ಅದನ್ನು ಖಂಡಿಸುತ್ತೇನೆ. ಆ ವಿಚಾರವಾಗಿ ಕಾಂಗ್ರೆಸ್ಸಿಗರು ರಾಜ್ಯಾದ್ಯಂತ ಬೊಬ್ಬ ಹಾಕುತ್ತಿದ್ದು, ಕಾಂಗ್ರೆಸ್ ಪಕ್ಷದ ಶಾಸಕ ಅಂಬೇಡ್ಕರ್ ಬಗ್ಗೆ ಅನಾಗರಿಕವಾಗಿ ಮಾತನಾಡಿದ್ದು, ಈ ಸಂಬಂಧ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ನರೇಂದ್ರಸ್ವಾಮಿ ಅವರಿಗೆ ಸಿದ್ದರಾಮಯ್ಯ ಅವರ ಸಿದ್ದಾಂತ ಬೇಕಾಗಿದೆ. ಅಧಿಕಾರ ಗಿಟ್ಟಿಸಿಕೊಳ್ಳಲು ಅಂಬೇಡ್ಕರ್ ಸಿದ್ದಾಂತಕ್ಕೆ ಅಪಮಾನ ಮಾಡಿದ್ದಾರೆ. ಅಂಬೇಡ್ಕರ್ ಸಿದ್ದಾಂತ ತ್ಯಜಿಸಿರುವ ಅವರಿಗೆ ಆತ್ಮಸಾಕ್ಷಿ ಎಂಬುದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ಹಾಗೂ ವಿಧಾನಸಭೆಯ ಪರಿಶಿಷ್ಠ ಶಾಸಕರ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿದರು.
ಈ ಸಂಬಂಧ ಕ್ಷೇತ್ರದಲ್ಲಿ ಅವರನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆಯ ಮಾತುಗಳನ್ನಾಡಿರುವುದಲ್ಲದೇ ಕ್ಷೇತ್ರದಲ್ಲಿ ತಾವು ಪಾಳೆಗಾರ ಇದ್ದಂತೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಳೆಗಾರಿಕೆ ಸಂಸ್ಕೃತಿ ಇಲ್ಲ, ಅದಕ್ಕೇ ಅಂಬೇಡ್ಕರ್ ಅವರು ಪಾಳೆಗಾರಿಕೆ ಅಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಪ್ರಜೆಗೂ ಪ್ರಶ್ನಿಸುವ ಹಕ್ಕು ನೀಡಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!