
ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯರಿಗೂ ಮಹತ್ವವಾದ ಮತ್ತು ಪವಿತ್ರವಾದ ದಿನ. ಎಲ್ಲ ಭಾರತೀಯರನ್ನು ಭಾವನಾತ್ಮಕವಾಗಿ, ಭಾಷಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಅವರು ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅನೇಕ ಮಹನೀಯರುಗಳು, ಮಹಾತ್ಮ ಗಾಂಧೀಜಿ, ಬಾಲಗಂಗಾಧರನಾಥ ತಿಲಕ್, ಗೋಪಾಲಕೃಷ್ಣ ಗೋಖಲೆ, ಲಾಲ ಲಜಪತರಾಯ್, ಜವಹಾರಲಾಲ್ ನೆಹರು, ಸುಭಾಷ್‌ಚಂದ್ರ ಬೋಸ್ ಮುಂತಾದವರ ನೇತೃತ್ವದಲ್ಲಿ ನಡೆಸಿದ ಸ್ವಾತಂತ್ರ‍್ಯ ಹೋರಾಟಗಾರರ, ತ್ಯಾಗ-ಬಲಿದಾನ ಫಲವಾಗಿ 1947 ಆಗಸ್ಟ್ 15 ರಂದು ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ದೊರಕಿತು ಎಂದರು.
ಸ್ವಾತಂತ್ರ‍್ಯಗೊಂಡ ನಂತರ, ಇಡೀ ದೇಶವನ್ನು ಭೌಗೋಳಿಕವಾಗಿ, ಭಾಷಿಕವಾಗಿ ಒಗ್ಗೂಡಿಸುವ ಅನಿವಾರ್ಯತೆ ಉದ್ಭವಿಸಿತು. ಜೊತೆಗೆ ಏಕರೂಪದ ಕಾನೂನು ಹಾಗೂ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ದೇಶದ ಏಕತೆಯನ್ನು ಬಲಪಡಿಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ “ಭಾರತ ಸಂವಿಧಾನ ಕರಡು ರಚನಾ ಸಮಿತಿ”ಯನ್ನು ರಚಿಸಲಾಯಿತು ಎಂದರು
ಎರಡು ವರ್ಷಗಳ ಸುಧೀರ್ಘ ಅವಲೋಕನ ಮತ್ತು ಚರ್ಚೆಯ ನಂತರ, ಅಂತಿಮವಾಗಿ 26 ನವೆಂಬರ್ 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ||ಬಿ.ಆರ್. ಅಂಬೇಡ್ಕರ್‌ರವರು ರಚಿಸಿದ ಸಂವಿಧಾನವನ್ನು ದೇಶಾದ್ಯಂತ 26ನೇ ಜನವರಿ 1950 ರಿಂದ ಜಾರಿಗೆ ತರಲಾದೊರೆತಿದೆಎರು.
• ಸ್ವತಂತ್ರ ಭಾರತಕ್ಕೊಂದು ಸದೃಢ ಸಂವಿಧಾನ ಕೊಟ್ಟಿದ್ದು ಡಾ.ಬಿ.ಆರ್.ಅಂಬೇಡ್ಕರ್. ಅವರ ಅವಿರತ ಪ್ರಯತ್ನ ಹಾಗೂ ಪಾಂಡಿತ್ಯದಿAದಾಗಿ ನಮಗೆ ವಿಶ್ವದಲ್ಲಿಯೇ ಅತ್ಯಂತ ಸುದೀರ್ಘವಾದ, ಉತ್ತಮವಾದ ಲಿಖಿತ ಸಂವಿಧಾನ ದೊರೆತಿದೆ ಎಂದರು.
• ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರಚಿಸಲು ಹಾಗೂ: ಅದರ ಸಮಸ್ತ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ: ವಿಚಾರ, ಅಭಿವ್ಯಕ್ತಿ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ‍್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ದೊರೆಯುವಂತೆ ಮಾಡಲು ವ್ಯಕ್ತಿಗೌರವವನ್ನು, ರಾಷ್ಟ್ರದ ಏಕತೆ ಹಾಗೂ ಅಖಂಡತೆಯನ್ನು ಖಾತ್ರಿ ಮಾಡಿ ಅವರಲ್ಲಿ ಎಲ್ಲರಲ್ಲೂ ಭ್ರಾತೃತ್ವ ಭಾವನೆಯನ್ನು ವೃದ್ಧಿಗೊಳಿಸುವುದಕ್ಕಾಗಿ.. ದೃಢ ಸಂಕಲ್ಪ ಮಾಡಿ ನಮ್ಮ ಸಂವಿಧಾನ ಸಭೆಯಲ್ಲಿ 1949ನೇ ಇಸವಿಯ ನವೆಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ. ಸಂವಿಧಾನದ ಪೂರ್ವ ಪ್ರಸ್ತಾವನೆಯಲ್ಲಿರುವ ಮೌಲ್ಯಯುತ ಅಂಶಗಳನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಸಂವಿಧಾನದ ಆಶಯಗಳಿಗನುಗುಣವಾಗಿ ದೇಶವನ್ನು ಮುನ್ನಡೆಸಿದ, ಭಾರತದ ಹದಿನಾಲ್ಕನೇ ಪ್ರಧಾನಮಂತ್ರಿ ಡಾ. ಮನಮೋಹನಸಿಂಗ್ ಹಾಗೂ ರಾಜಕೀಯ ಮುತ್ಸದ್ಧಿ ಶ್ರೀ ಎಸ್.ಎಂ.ಕೃಷ್ಣ ಅವರನ್ನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಇವರ ನಿಧನ ನಿಜಕ್ಕೂ ದೇಶಕ್ಕೆ ಹಾಗೂ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದೇ ಭಾವಿಸುತ್ತೇನೆ ಎಂದರು
• ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯಡಿ, ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದು ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊAಡು ಸಾಗುತ್ತಿರುವ ನಮ್ಮ ರಾಜ್ಯದ ಸಾಧನೆ ಇಂದು ದೇಶದ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.
ನಮ್ಮ ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಅದರಲ್ಲೂ ಜನ ಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಕನಿಷ್ಟ ಅವಶ್ಯಕತೆಗಳನ್ನು ಪೂರೈಸುವ ಆಶಯವನ್ನು ನಮ್ಮ ಸರ್ಕಾರ ಹೊಂದಿದೆ. ಅರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯೊಂದಿಗೆ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರಕ್ಕಿದೆ ಎಂದರು.
*ಶಕ್ತಿ ಯೋಜನೆ* ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರವು “ಶಕ್ತಿ ಯೋಜನೆ”ಯನ್ನು ಜಾರಿಗೆ ತಂದಿದ್ದು. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 10.83 ಕೋಟಿ ಟಿಕೆಟ್‌ಗಳನ್ನು ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ನೀಡಿ ಒಟ್ಟು ರೂ.274 ಕೋಟಿ ವೆಚ್ಚ ಭರಿಸಲಾಗಿದೆ.
*ಅನ್ನಭಾಗ್ಯ* ಪ್ರತಿಯೊಬ್ಬರಿಗೂ ಆಹಾರದ ಕೊರತೆ ನೀಗಿಸುವ ಉದ್ದೇಶದಿಂದ ನಮ್ಮ ಸರ್ಕಾರ ಬಿ.ಪಿ.ಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿಯನ್ನು ದಾಸ್ತಾನು ರೂಪದಲ್ಲಿ ಹಾಗೂ 5 ಕೆ.ಜಿ ಅಕ್ಕಿಯನ್ನು ನಗದು ರೂಪದಲ್ಲಿ ನೀಡಲಾಗುತ್ತಿದ್ದು, ಈವರೆಗೆ ಒಟ್ಟು 4,43,292 ಫಲಾನುಭವಿಗಳಿಗೆ “ಅನ್ನಭಾಗ್ಯ ಯೋಜನೆ”ಯಡಿ ರೂ.354.78 ಕೋಟಿ ಹಣವನ್ನು ನೇರ ನಗದು ಪಾವತಿ ಮೂಲಕ ನೀಡಲಾಗಿದೆ.
*ಗೃಹಜ್ಯೋತಿ* ಯೋಜನೆಯಡಿ, 5,02,889 ಗ್ರಾಹಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಡಿಸೆಂಬರ್ ಅಂತ್ಯಕ್ಕೆ ವಿದ್ಯುತ್‌ನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ ರೂ. 278.48 ಕೋಟಿಗಳನ್ನು ಪಾವತಿಸಲಾಗಿದೆ.
*ಗೃಹಲಕ್ಷ್ಮಿ* ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ 4,48,525 ಮಹಿಳೆಯರಿಗೆ ತಲಾ ರೂ.2,000 ಗಳಂತೆ ಒಟ್ಟು ರೂ.1308 ಕೋಟಿಗಳನ್ನು ಪಾವತಿಸಲಾಗಿದೆ.
*ಯುವನಿಧಿ* ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಸಿಗದ ಡಿಪ್ಲೋಮೋ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಕ್ರಮವಾಗಿ ರೂ.1,500 ಮತ್ತು ರೂ.3,000ಗಳನ್ನು ನಿರುದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷಗಳ ಅವಧಿಯವರೆಗೆ ನೀಡಲಾಗುವುದು. ಜಿಲ್ಲೆಯಲ್ಲಿ ಈವರೆಗೆ 3,592 ಅಭ್ಯರ್ಥಿಗಳಿಗೆ “ಯುವನಿಧಿ” ಯೋಜನೆಯಡಿ ರೂ.4.46 ಕೋಟಿ ಹಣ ಪಾವತಿಸಲಾಗಿದೆ.
ಈ ಬಾರಿ ದೇವರ ಕೃಪೆಯಿಂದ ಉತ್ತಮ ಮಳೆಯಾಗಿದ್ದು, ಇದೇ ಮೊದಲ ಬಾರಿಗೆ 92 ವರ್ಷಗಳ ಇತಿಹಾಸದಲ್ಲಿಯೇ ಕೃಷ್ಣರಾಜಸಾಗರ ಜಲಾಶಯವು ಒಂದು ವರ್ಷದಲ್ಲಿ ನಿರಂತರವಾಗಿ 154 ದಿನಗಳು ಭರ್ತಿಯಾಗಿದ್ದು, ರೈತರಿಗೆ ಹಾಗೂ ಜಿಲ್ಲೆಯ ಜನತೆಗೆ ಆಶಾದಾಯಕ ವಿಷಯವಾಗಿದೆ.
ರೈತರ ಬೇಡಿಕೆ ಮತ್ತು ಅಪೇಕ್ಷೆಯಂತೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಬೇಸಿಗೆ ಬೆಳೆಗಳಿಗೂ ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ನೀರನ್ನು ನೀಡಲು ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಜರುಗಿಸಲಾಗಿದೆ. ಇದಕ್ಕಾಗಿ ಹನಕೆರೆಯ ಬಳಿ ರೂ.7.90ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮೋದನೆ ದೊರಕಿರುತ್ತದೆ ಹಾಗೂ ಬಿ.ಗೌಡಳ್ಳಿಯ ಬಳಿ ರೂ.6.7 ಕೋಟಿ ವೆಚ್ಚದಲ್ಲಿ ಓವರ್ ಪಾಸ್ ನಿರ್ಮಾಣಕ್ಕೆ ಅನುಮೋದನೆ ದೊರಕಿರುತ್ತದೆ ಎಂದರು.
ಸರ್ಕಾರದಿಂದ ವಿಪತ್ತು ಉಪಶಮನ ನಿಧಿಯಡಿ ರೂ 5.54 ಕೋಟಿ ಅನುದಾನಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲಾಗಿದ್ದು, ಈ ಅನುದಾನದಲ್ಲಿ ವಿಪತ್ತು ಸಂದರ್ಭದಲ್ಲಿ ಆಗುವಂತಹ ಅಪಾಯವನ್ನು ತಗ್ಗಿಸಲು ನಾಲ್ಕು ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮವಹಿಸಲಾಗಿದೆ ಎಂದರು.
ಮಂಡ್ಯದಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2024 ರ ಡಿಸೆಂಬರ್ 20, 21 ಮತ್ತು 22 ರವರೆಗೆ ಬಹಳ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕನ್ನಡಿಗರಲ್ಲಿ ಒಂದು ಬಗೆಯ ಸಂಚಲನ ಸೃಷ್ಟಿಸಿದೆ. ಇದಕ್ಕೆ ಎಲ್ಲರ ಸಾಂಘಿಕ ಸಹಕಾರ, ಪ್ರೀತಿ ಮತ್ತು ಬೆಂಬಲ ಕಾರಣವಾಗಿದೆ. ಈ ಸಮ್ಮೇಳನದಿಂದ ನಮಗೆ ಕನ್ನಡ ನಾಡು-ನುಡಿ ಸಾಹಿತ್ಯ ಸಂಸ್ಕೃತಿಯ ಬಗೆಗೆ ಜನಮನದಲ್ಲಿರುವ ಅಪಾರ ಪ್ರೀತಿ, ಗೌರವ, ಅಭಿಮಾನದ ದರ್ಶನವಾಗಿದೆ ಹಾಗೂ ಕನ್ನಡಿಗರ ಒಗ್ಗಟ್ಟಿನ ಅಸ್ಮಿತೆಯ ಅನಾವರಣವಾಗಿದೆ ಎಂದರು.
ಈ ಸಮ್ಮೇಳನಕ್ಕೆ ಅಂದಾಜು 7 ರಿಂದ 8 ಲಕ್ಷ ಜನ ಭಾಗವಹಿಸಿ, ಸಾಹಿತ್ಯ ಸಮ್ಮೇಳನದ ಗೋಷ್ಟಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಸಾಹಿತ್ಯದ ರಸ ದೌತಣ ಸವಿದಿದ್ದಾರೆ ಎಂದರು.
*ಕನ್ನಡ ಭವನ* 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿರುವ ಹಿನ್ನೆಲೆಯಲ್ಲಿ ಅದರ ಸವಿ ನೆನಪಿಗಾಗಿ, ಸಮ್ಮೇಳನದಲ್ಲಿ ಉಳಿತಾಯವಾದ ಮೊತ್ತ ಹಾಗೂ ಸರ್ಕಾರದಿಂದ ವಿಶೇಷ ಅನುದಾನವನ್ನು ಪಡೆದು, ಕನ್ನಡ ಭವನ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರವನ್ನು ಒಟ್ಟು ರೂ.1.17 ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗಿದೆ ಎಂದರು
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಪಿ, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ಪ್ರಕಾಶ್, ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Leave a Reply