Janaradwani

ಸುದ್ದಿ, ಮಾಹಿತಿ, ರಾಜಕೀಯ, ಸಮಸ್ಯೆ

ನಗರಸಭೆ ವ್ಯಾಪ್ತಿಯ ಆಸ್ತಿಗಳಿಗೆ ಗ್ರಾ.ಪಂ.ಗಳಲ್ಲಿ  ಖಾತೆ…? 

ಮಂಡ್ಯ ನಗರಸಭೆಯ ಗಡಿ ವ್ಯಾಪ್ತಿಗೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳು ಹಾಗೂ  ಗ್ರಾಮ ಪಂಚಾಯತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಜಂಟಿ ಸರ್ವೆ ನಡೆಸಲಾಗುವುದು ಎಂದು ನಗರಸಭೆ ಅಧ್ಯಕ್ಷ ನಾಗೇಶ್ ತಿಳಿಸಿದರು.

ಮಂಡ್ಯ ನಗರಸಭೆ ಕಛೇರಿಯಲ್ಲಿ  ಬೂದನೂರು,ಬೇವಿನಹಳ್ಳಿ, ಇಂಡುವಾಳು,ಮಂಡ್ಯ ಗ್ರಾಮಾಂತರ,ಸಾತನೂರು, ಉಮ್ಮಡಹಳ್ಳಿ, ಸಂತೆ ಕಸಲಗೆರೆ ಬೇಲೂರು ಹಳುವಾಡಿ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು,

ಮಂಡ್ಯ ಸುತ್ತಮುತ್ತಲಿನ 9 ಗ್ರಾಮ ಪಂಚಾಯಿತಿಗಳಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಆಸ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಖಾತೆ ಮಾಡಿಕೊಡುವ ಸಮಯದಲ್ಲಿ ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ನಗರಸಭೆ ಸರಹದ್ದು, ನಕಾಶೆ ಅನ್ವಯ ಆಸ್ತಿಗಳನ್ನು ಸರಿಯಾದ ಕ್ರಮದಲ್ಲಿ ಗುರುತಿಸದೇ ಏಕಾಏಕಿ ಖಾತೆಗಳನ್ನು ಮಾಡಿಕೊಟ್ಟಿರುವುದು ಹಲವು ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ ಎಂದರು.

2.000 ಕ್ಕೂ ಅಧಿಕ ಅಕ್ರಮ ಖಾತೆಗಳು…?

ಮಂಡ್ಯ ಸುತ್ತಲಿನ ಒಂಬತ್ತು ಪಂಚಾಯಿತಿಗಳಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು 2000ಕ್ಕೂ ಹೆಚ್ಚು ಆಸ್ತಿಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗಿದೆ .


ನಗರಸಭೆಯಲ್ಲಿ ಆಸ್ತಿ ಖಾತೆಯಾಗಬೇಕಾದರೆ ನಿವೇಶನದ ಅಲಿಲೇಷನ್, ಮುಡಾ ಅನುಮತಿ ಪತ್ರ ಸೇರಿದಂತೆ ಹಲವು ದಾಖಲಾತಿಗಳನ್ನು ಕೇಳುತ್ತಾರೆ. ಜೊತೆಗೆ ಒಂದು ಬಡಾವಣೆಯಲ್ಲಿ ನಿವೇಶನ ಅಥವಾ ಮನೆ ಖಾತೆಯಾಗಬೇಕಾದರೆ ಸಂಪೂರ್ಣ ವಿಳಾಸವನ್ನು ಕ್ರಮಬದ್ಧವಾಗಿ ನೀಡಬೇಕಾಗಿದೆ . ಆದರೆ ಗ್ರಾಮ ಪಂಚಾಯಿತಿಯಲ್ಲಿ  ಕ್ರಯಪತ್ರವಿದ್ದರೆ ( ಸರ್ವೇ ನಂಬರ್ ಗಳ ಅನುಗುಣವಾಗಿ ) ಸುಲಭವಾಗಿ ಖಾತೆ ಮಾಡಿಕೊಡುತ್ತಾರೆ. ಅಲ್ಲಿ ಮುಡಾ ಅನುಮತಿಯೂ ಬೇಕಿಲ್ಲ, ವಿಳಾಸದ ಅವಶ್ಯಕತೆಯೂ ಇಲ್ಲ. ಅವರು ಖಾತೆ ಮಾಡಿ ನೀಡುವ ಇ-ಸ್ವತ್ತಿನಲ್ಲಿ ಹೋಬಳಿ, ಪಂಚಾಯಿತಿ ಹೆಸರನ್ನು ನಮೂದು ಮಾಡುವರೇ ವಿನಃ ಆಸ್ತಿ ಇರುವ ವಿಳಾಸವನ್ನು ಇ ಸ್ವತ್ತಿನಲ್ಲಿ ಸಂಪೂರ್ಣವಾಗಿ ನಮೂದಿಸುವುದಿಲ್ಲ ಎನ್ನಲಾಗಿದೆ. ಇದರೊಂದಿಗೆ ಪಂಚಾಯಿತಿ ಖಾತೆಯಲ್ಲಿರುವ ಮನೆ-ನಿವೇಶನಗಳಿಗೆ ತೆರಿಗೆಯೂ ಕಡಿಮೆ. ಹೀಗಾಗಿ ನಗರಸಭೆ ವ್ಯಾಪ್ತಿಯೊಳಗಿನ ಸಾವಿರಾರು ಆಸ್ತಿಗಳಿಗೆ ಖಾತೆಗಳನ್ನು ಪಂಚಾಯಿತಿಗಳಲ್ಲಿ ಮಾಡಿಕೊಡಲಾಗಿದೆ.

ನಗರಸಭೆಯಲ್ಲಿ ಖಾತೆ ಮಾಡುವುದಕ್ಕೆ ಆಸ್ತಿಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಒದಗಿಸಲಾಗದಿದ್ದವರು ಆ ವ್ಯಾಪ್ತಿಯ ಪಂಚಾಯಿತಿಗಳಿಂದ ಖಾತೆ ಮಾಡಿಸಿಕೊಂಡಿರುವ ಅನೇಕ ಪ್ರಕರಣಗಳಿವೆ.

ಪಂಚಾಯಿತಿಗಳಲ್ಲಿ ವ್ಯಾಪ್ತಿ ಸರಹದ್ದಿನ ನಕ್ಷೆ ಇಲ್ಲ.

ನಗರಸಭೆ ಅಧಿಕಾರಿಗಳ ಬಳಿ ನಗರಸಭೆಯ ಸರಹದ್ದಿನ ನಕ್ಷೆ ಇದೆ. ಗಡಿಯ ಅರಿವೂ ಇದೆ. ಪಂಚಾಯಿತಿ ಅಧಿಕಾರಿಗಳ ಬಳಿ ಸರಹದ್ದಿನ ನಕ್ಷೆ ಇಲ್ಲ. ಗಡಿಯ ಅರಿವೂ ಇಲ್ಲವೆಂದು ಹೇಳಲಾಗುತ್ತಿದೆ. ಒಮ್ಮೆ ಸರಹದ್ದು ಮತ್ತು ಗಡಿ ಗೊತ್ತಿದ್ದರೂ ಅದರ ಪ್ರಕಾರ ಮಾಡುವುದಕ್ಕೆ ಆಸಕ್ತಿ ತೋರಿರದ ಸಾಧ್ಯತೆಗಳೂ ಇವೆ. ಉದ್ದೇಶಪೂರ್ವಕವಾಗಿಯೇ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳೂ ಕೇಳಿಬರುತ್ತಿವೆ.
ನಗರಸಭೆ ವ್ಯಾಪ್ತಿಯ ಆಸ್ತಿಗಳನ್ನೂ ಬಿ-ಖಾತೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪಂಚಾಯಿತಿಯೊಳಗೆ ಸೇರಿರುವ ನಗರಸಭೆ ಆಸ್ತಿಗಳನ್ನು ನಿರ್ದಿಷ್ಟವಾಗಿ ಸರಹದ್ದು ಮತ್ತು ಗಡಿ ಗುರುತಿಸಿ ಅವುಗಳನ್ನು ಹಸ್ತಾಂತರ ಮಾಡಿಕೊಳ್ಳಲು ನಗರಸಭೆ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿ ಸರ್ವೆಗೆ ಇಳಿಯಲಿದ್ದಾರೆ.

ನಗರಸಭೆ ವ್ಯಾಪ್ತಿಗೆ  ಸೇರಿದ  ಎಷ್ಟು ಆಸ್ತಿಗಳನ್ನು ಖಾತೆ ಮಾಡಿರುವುದಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದೇವೆ. ಒಂದು ವಾರದೊಳಗೆ ಸಂಪೂರ್ಣ ಮಾಹಿತಿ ಕೊಡುವುದಾಗಿ ಹೇಳಿದ್ದಾರೆ, ಅವರು ಮಾಹಿತಿ ಕೊಟ್ಟ ನಂತರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು..

Leave a Reply

Your email address will not be published. Required fields are marked *

error: Content is protected !!